ಇಂದಿನಿಂದ ದೆಹಲಿಯಲ್ಲೂ ನಂದಿನಿ ಉತ್ಪನ್ನಗಳ ಮಾರಾಟ; ಉತ್ಪನ್ನಗಳನ್ನು ಬಿಡುಗಡೆ ಮಾಡಿ ಸಿಎಂ ಸಿದ್ದು ಚಾಲನೆ
ನ್ಯೂಸ್ ಆ್ಯರೋ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕರ್ನಾಟಕ ಹಾಲು ಒಕ್ಕೂಟದ ನಂದಿನಿ ಬ್ರ್ಯಾಂಡ್ ಉತ್ಪನ್ನಗಳ ಅಧಿಕೃತ ಮಾರಾಟಕ್ಕೆ ಸಿಎಂ ಸಿದ್ದರಾಮಯ್ಯ ಗುರುವಾರ ಚಾಲನೆ ನೀಡಿದರು. ಇದರೊಂದಿಗೆ, ದೇಶದ ರಾಜಧಾನಿಯಲ್ಲೂ ನಂದಿನಿ ಉತ್ಪನ್ನಗಳ ಹವಾ ಆರಂಭವಾಗಲಿದೆ. ಈ ಮೂಲಕ ಅಮುಲ್ ಮತ್ತು ಮದರ್ ಡೇರಿಯಂತಹ ಪ್ರಮುಖ ಬ್ರ್ಯಾಂಡ್ಗಳ ಜತೆ ಕರ್ನಾಟಕದ ನಂದಿನಿ ಕೂಡ ಪೈಪೋಟಿ ಒಡ್ಡಲಿದೆ.
ದೆಹಲಿಯ ಅಶೋಕ ಹೊಟೇಲ್ನಲ್ಲಿ ನಂದಿನಿ ಬ್ರ್ಯಾಂಡ್ ಉತ್ಪನ್ನಗಳ ಬಿಡುಗಡೆ ಮಾಡುವ ಮೂಲಕ ಅಧಿಕೃತ ಮಾರಾಟಕ್ಕೆ ಚಾಲನೆ ನೀಡಲಾಯಿತು. ಇದಕ್ಕೂ ಮುನ್ನ ದೆಹಲಿಯ ಅಶೋಕ್ ಹೊಟೇಲ್ಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯಗೆ ಕನ್ನಡಿಗರಿಂದ ಪೂರ್ಣಕುಂಭ ಸ್ವಾಗತ ದೊರೆಯಿತು. ಸಚಿವರಾದ ಭೈರತಿ ಸುರೇಶ್, ವೆಂಕಟೇಶ್, ಚಲುವರಾಯಸ್ವಾಮಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಿಎಂಗೆ ಸಾಥ್ ನೀಡಿದರು.
ದೆಹಲಿಯಲ್ಲಿ 3 ರಿಂದ 4 ಲಕ್ಷ ಲೀಟರ್ ಹಾಲನ್ನು ಮಾರಾಟ ಮಾಡಬೇಕು ಎಂಬ ಗುರಿ ಹಾಕಿಕೊಂಡಿದ್ದೇವೆ. ಇನ್ನು ಮುಂದೆ ದೆಹಲಿಯಲ್ಲಿ ಶೇ 100 ರಷ್ಟು ಪರಿಶುದ್ಧ ಹಾಲು ಸಿಗಲಿದೆ. ಶುದ್ಧ ಹಸುವಿನ ಹಾಲನ್ನು ದೆಹಲಿ ಜನರಿಗೆ ನೀಡುತ್ತೇವೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯಕ್ ಹೇಳಿದರು.
ಕೆಲವು ತಿಂಗಳ ಹಿಂದೆ ಅಮೆರಿಕ ಹಾಗೂ ವೆಸ್ಟ್ ಇಂಡೀಸ್ನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ವೇಳೆ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ಪ್ರಾಯೋಜಕತ್ವವನ್ನು ಕೆಎಂಎಫ್ ವಹಿಸಿತ್ತು. ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ಜೆರ್ಸಿ ಮೇಲೆ ಪ್ರಾಯೋಜಕರಾಗಿ ‘ನಂದಿನಿ’ ಬ್ರ್ಯಾಂಡ್ ಹೆಸರು ನಮೂದಿಸಲಾಗಿತ್ತು. ಅಷ್ಟೇ ಅಲ್ಲದೆ, ವಿಶ್ವಕಪ್ ವೇಳೆ ನಂದಿನಿ ಉತ್ಪನ್ನಗಳನ್ನೂ ಪೂರೈಸಲಾಗಿತ್ತು. ಆ ಮೂಲಕ ವಿಶ್ವಮಟ್ಟದಲ್ಲಿ ನಂದಿನಿ ಬ್ರ್ಯಾಂಡ್ ಉತ್ಪನ್ನಗಳು ಗಮನ ಸೆಳೆದಿದ್ದವು.
Leave a Comment