Mangalore : ಮಾಲಿಗಪ್ಪುರಂ ಚಿತ್ರದ ಬಾಲನಟಿ ಕಲ್ಲಾಪು ಬುರ್ದುಗೋಳಿಗೆ ಭೇಟಿ – ಕೊರಗಜ್ಜ-ಗುಳಿಗನ ಮುಂದೆ “ಗುಳಿಗನ್” ಯಶಸ್ಸಿಗೆ ಪ್ರಾರ್ಥನೆ

ನ್ಯೂಸ್ ಆ್ಯರೋ : “ಮಾಲಿಗಪ್ಪುರಂ” ಮಲಯಾಳಂ ಹಿಟ್ ಚಿತ್ರದ ಬಾಲನಟಿ ಬೇಬಿ ದೇವಾನಂದ್ ಅವರು ಕಲ್ಲಾಪು ಬುರ್ದುಗೋಳಿಯ ಗುಳಿಗ-ಕೊರಗಜ್ಜ ಉದ್ಭವ ಶಿಲೆಯ ಆದಿ ಕ್ಷೇತ್ರಕ್ಕೆ ಭೇಟಿ ನೀಡಿ ತನ್ನ ನಟನೆಯ ಹೊಸ ಚಿತ್ರ “ಗುಳಿಗನ್” ಯಶಸ್ಸಿಗೆ ಪ್ರಾರ್ಥಿಸಿದರು.

ಸೋಮೇಶ್ವರದಲ್ಲಿ ನಡೆದ ಅಯ್ಯಪ್ಪ ಭಕ್ತರ ಮಹಾಸಂಗಮ ಸಮಾವೇಶಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಬೇಬಿ ದೇವಾನಂದ ಅವರು ತಂದೆ ಜಿಬಿನ್ ಜೊತೆ ಬುರ್ದುಗೋಳಿ ಕ್ಷೇತ್ರಕ್ಕೆ ಭೇಟಿ ನೀಡಿದರು.

ತನ್ನ ಹನ್ನೊಂದನೇ ವಯಸ್ಸಿನಲ್ಲಿ ದೇಶವಲ್ಲದೆ ವಿದೇಶಗಳಲ್ಲೂ ನಡೆದ ಚಿತ್ರೀಕರಣಗಳಲ್ಲಿ ನಟಿಸಿರುವ ಕೀರ್ತಿ ಬೇಬಿ ದೇವನಂದರದ್ದು. ಸುಮಾರು 14 ಚಿತ್ರಗಳಲ್ಲಿ ಅಭಿನಯಿಸಿರುವ ದೇವಾನಂದ್ ಕಳೆದ ವರುಷ ತೆರೆ ಕಂಡ”ಮಾಲಿಗಪ್ಪುರಂ”ಎಂಬ ಅಯ್ಯಪ್ಪ ಭಕ್ತಿ ಪ್ರದಾನ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ್ದು ಚಿತ್ರವು ಸೂಪರ್ ಹಿಟ್ ಆಗಿತ್ತು.

ದೇವಾನಂದ್ ಗೆ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸಲು ಆಫರ್ ಬಂದಿದ್ದು ಆಕೆಯ ನಟನೆಯ ಮುಂದಿನ ಚಿತ್ರ “ಗುಳಿಗನ್” ಯಶಸ್ಸಿಗಾಗಿ ಕರಾವಳಿಯ ಕಾರಣೀಕ ಶಕ್ತಿಗಳಾದ ಕೊರಗಜ್ಜ-ಗುಳಿಗ ದೈವಗಳಲ್ಲಿ ಬಾಲನಟಿ ಪ್ರಾರ್ಥನೆ ಸಲ್ಲಿಸಿದಳು. ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಗಳು ಬಾಲನಟಿಯನ್ನು ಸನ್ಮಾನಿಸಿ ಗೌರವಿಸಿದರು.

ಬುರ್ದುಗೋಳಿ ಕ್ಷೇತ್ರದ ಕುರಿತಾಗಿ ಪೂಜಾ ಸನಿಲ್ ಕಂಠದಾನದಲ್ಲಿ ರಚನೆಯಾದ ನೂತನ ಭಕ್ತಿಗೀತೆಯ ಧ್ವನಿ ಸುರುಳಿಯನ್ನ ಈ ವೇಳೆ ಬಿಡುಗಡೆ ಮಾಡಲಾಯಿತು. ಹಾಲುಗೆನ್ನೆಯ ಮುದ್ದಾದ ಮಲಯಾಳಿ ಬಾಲ ನಟಿಯ ಜತೆಗೆ ಸ್ಥಳೀಯರು ಸೆಲ್ಫಿ ಕ್ಲಿಕ್ಕಿಸಿ ಸಂಭ್ರಮಿಸಿದರು.

ಬುರ್ದುಗೋಳಿ ಕ್ಷೇತ್ರ ಸಮಿತಿ ಅಧ್ಯಕ್ಷರಾದ ವಿಶ್ವನಾಥ್ ನಾಯ್ಕ್, ಗೌರವ ಸಲಹೆಗಾರರಾದ ಚಂದ್ರಹಾಸ್ ಪಂಡಿತ್ ಹೌಸ್, ಗೌರವ ಅಧ್ಯಕ್ಷರಾದ ಸಂಜೀವ ಭಂಡಾರಿ, ಪ್ರಮುಖರಾದ ದೇವದಾಸ್ ಕಾಯಂಗಲ, ನವೀನ್ ಕಾಯಂಗಳ, ಪ್ರಶಾಂತ್ ಕಾಯಂಗಳ, ಪುರುಷೋತ್ತಮ ಕಲ್ಲಾಪು ಮೊದಲಾದವರು ಉಪಸ್ಥಿತರಿದ್ದರು.