
ಪುತ್ತೂರು : ಹುಲಿವೇಷಕ್ಕೆ ಸ್ಟಾರ್ ಗಿರಿ ಕೊಡಿಸಿದ್ದ ಅಕ್ಷಯ್ ಕಲ್ಲೇಗ ಭೀಕರ ಕೊಲೆ – ಕೊಲೆಗೆ ಕಾರಣವಾಗಿದ್ದೇನು? ಪೊದೆಯಲ್ಲಿ ಶವವಾಗಿ ಬಿದ್ದ ಅಕ್ಷಯ್ ಮೇಲೆ ಅದ್ಯಾರಿಗೆ ದ್ವೇಷವಿತ್ತು?
- ಕರಾವಳಿ
- November 7, 2023
- No Comment
- 229
ನ್ಯೂಸ್ ಆ್ಯರೋ : ಮತ್ತೆ ಪುತ್ತೂರಿನಲ್ಲಿ ನೆತ್ತರು ಚೆಲ್ಲಿದೆ. ಕೆಲ ತಿಂಗಳ ಹಿಂದೆ ಪ್ರಿಯಕರನಿಂದಲೇ ಯುವತಿಯೊಬ್ಬಳು ನಡುರಸ್ತೆಯೇ ಚಾಕುವಿನಿಂದ ಇರಿತಕ್ಕೊಳಗಾಗಿ ಸಾವನ್ನಪ್ಪಿದ್ದರೆ ಕಳೆದ ತಡರಾತ್ರಿ ಪ್ರಸಿದ್ಧ “ಕಲ್ಲೇಗ ಟೈಗರ್ಸ್” ನ ಯುವ ಮುಂದಾಳು ಅಕ್ಷಯ್ ಕಲ್ಲೇಗ ಅವರ ಭೀಕರ ಹತ್ಯೆಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಮನೀಶ್ ಮತ್ತು ಚೇತು ಎಂಬವರು ಪೋಲಿಸರಿಗೆ ಶರಣಾಗಿದ್ದು, ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.
ಘಟನೆ ನಡೆದಿದ್ದು ಹೇಗೆ?
ಸುಮಾರು 26 ವರ್ಷದ ಅಕ್ಷಯ್ ಪುತ್ತೂರಿನ ವಿವೇಕಾನಂದ ಕಾಲೇಜ್ ನಿಂದ ಕೂಗಳತೆ ದೂರದಲ್ಲಿ ತಂದೆ ಚಂದ್ರಶೇಖರ, ತಾಯಿ ಕುಸುಮ ಹಾಗೂ ಇಬ್ಬರು ಸಹೋದರರ ಜೊತೆ ನೆಲೆಸಿದ್ದು, ಕಳೆದ ಆರು ವರ್ಷಗಳಿಂದ ಕಲ್ಲೇಗ ಟೈಗರ್ಸ್ ಹುಲಿ ವೇಷ ತಂಡ ಕಟ್ಟಿ ಅದರ ನಾಯಕತ್ವ ವಹಿಸಿಕೊಂಡಿದ್ದರು. ಮಂಗಳೂರಿನ ಖ್ಯಾತ ಹುಲಿವೇಷದಂತೆಯೇ ಪುತ್ತೂರಿನಲ್ಲಿಯೂ ಹುಲಿ ವೇಷಕ್ಕೆ ಸ್ಟಾರ್ ಗಿರಿ ಕೊಡುವ ಕನಸು ಕಂಡು ಅದರಂತೆ ಪುತ್ತೂರಿನಲ್ಲಿ ಮೊದಲ ಹುಲಿವೇಷ ತಂಡ ಕಟ್ಟಿದ್ದರು.

ಆರಂಭದಲ್ಲಿ 10-15 ಜನರಿದ್ದ ತಂಡ ಕಳೆದ ವರ್ಷ 60-70 ಜನರ ತಂಡವಾಗಿ ಬದಲಾಗಿದ್ದು, ಸಹಜವಾಗಿಯೇ ಅಕ್ಷಯ್ ಸ್ಟಾರ್ ಆಗಿದ್ದರು. ತನ್ನ ಇಷ್ಟದೈವ ಕಲ್ಕುಡ ಕಲ್ಲುರ್ಟಿಯನ್ನು ಮನಸಾರೆ ಭಕ್ತಿಯಿಂದ ಬೇಡುತ್ತಿದ್ದ ಅಕ್ಷಯ್ ತಮ್ಮ ತಂಡದ ಸಾಧನೆಗೆ ದೈವದೇವರೇ ಕಾರಣವೆಂದು ಹಲವು ಬಾರಿ ಹೇಳಿಕೊಂಡಿದ್ದೂ ಉಂಟು. ಆದರೆ ಕಳೆದ ರಾತ್ರಿ ಅವರ್ಯಾರೂ ಅಕ್ಷಯ್ ಸಹಾಯಕ್ಕೆ ಬರಲೇ ಇಲ್ಲ…!!
ಚಿಲ್ಲರೆ ವಿಷಯಕ್ಕೆ ಜಗಳ, ಕೊಲೆಯಲ್ಲಿ ಅಂತ್ಯ..!?
ಕೊಲೆ ನಡೆಯೋದಕ್ಕೂ ಕೆಲವು ಗಂಟೆಗಳ ಮೊದಲು ದರ್ಬೆ ಫಿಲೋಮಿನಾ ಕಾಲೇಜು ಬಳಿ ಎರಡು ಸ್ಕೂಟರ್ ಗಳ ನಡುವೆ ನಡೆದಿದ್ದ ಅಪಘಾತ ವಿಷಯಕ್ಕೆ ಸಂಬಂಧಿಸಿದಂತೆ ಜಗಳವಾಗಿದ್ದು, ಬಳಿಕ ಇದೇ ವಿಚಾರ ವಿಕೋಪಕ್ಕೆ ತಿರುಗಿ ಹತ್ಯೆ ನಡೆದಿದೆ ಎಂಬುದು ಸದ್ಯದ ಮಾಹಿತಿ. ಆದರೆ ಕ್ಷುಲ್ಲಕ ವಿಚಾರಕ್ಕೆ ತಲವಾರಿನಿಂದ ಹಿಗ್ಗಾಮುಗ್ಗ ಕೊಚ್ಚಲು ಬೇರೇನಾದರೂ ಕಾರಣವಿತ್ತಾ ಎಂಬುದು ಪೋಲಿಸರ ತನಿಖೆಯಲ್ಲೇ ಗೊತ್ತಾಗಬೇಕಿದೆ.
ಜಗಳವಾದ ಬಳಿಕ ಅಕ್ಷಯ್ ನನ್ನು ನೆಹರೂ ನಗರಕ್ಕೆ ಬರಲು ಹೇಳಿದ ದುಷ್ಕರ್ಮಿಗಳು ಹತ್ಯೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಕೃತ್ಯವು ರಾತ್ರಿ 11.30-12.00 ಗಂಟೆ ಸುಮಾರಿಗೆ ನಡೆದಿದೆ ಎನ್ನಲಾಗಿದೆ. ನೆಹರೂ ನಗರದಿಂದ ವಿವೇಕಾನಂದ ಕಾಲೇಜಿಗೆ ತೆರಳುವ ರಸ್ತೆಯಲ್ಲಿ ಹೆದ್ದಾರಿಯ ತುಸು ದೂರದಲ್ಲಿರುವ ಕೆನರಾ ಬ್ಯಾಂಕಿನ ಎಟಿಎಂ ಬಳಿ ಅಕ್ಷಯ್ ಮೇಲೆ ತಂಡ ದಾಳಿ ನಡೆಸಿದ್ದು, ಅಲ್ಲಿಂದ ಆತನನ್ನು ಅಟ್ಟಾಡಿಸಿಕೊಂಡು ಬಂದು ತಲವಾರಿನಿಂದ ದಾಳಿ ನಡೆಸಿದ್ದಾರೆ.
ಎಟಿಎಂ ಬಳಿಯಿಂದ ಮಾಣಿ ಮೈಸೂರು ಹೆದ್ದಾರಿಯನ್ನು ದಾಟಿ ಆಚೆ ಬದಿ ಗಿಡಗಂಟಿಗಳಿಂದ ಆವೃತ್ತವಾದ ಜಾಗದವರೆಗೂ ಅಟ್ಟಾಡಿಸಿಕೊಂಡು ಹೋಗಿ ಹತ್ಯೆ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಮಾಣಿ ಮೈಸೂರು ಹೆದ್ದಾರಿಯ ಒಂದು ಬದಿಯಿಂದ ಇನ್ನೊಂದು ಬದಿಯವರೆಗೆ ರಕ್ತದ ಕಲೆಗಳಿವೆ. ಆದರೆ ಕೊಲೆಯಾದ ಜಾಗದಲ್ಲಿ ಬಿದ್ದಿದ್ದ ಅಕ್ಷಯ್ ನ ಮೇಲಾದ ಗಾಯದ ಗುರುತುಗಳು ಬೇರೇನನ್ನೋ ಹೇಳುವಂತಿದೆ ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು..!!
ಮನಬಂದಂತೆ ಕೊಚ್ಚಿ ಬಿಸಾಕಿದ್ದರು..!!
ಪ್ಯಾಂಟ್ ಶರ್ಟ್ ಧರಿಸಿ ಪೊದೆಯಲ್ಲಿ ಶವವಾಗಿ ಬಿದ್ದಿದ್ದ ಅಕ್ಷಯ್ ಮೈಮೇಲೆ ತಲವಾರಿನಿಂದ ನಡೆದ ದಾಳಿ ಅತ್ಯಂತ ಗಂಭೀರ ಸ್ವರೂಪದ್ದಾಗಿದೆ. ತಲೆಯ ಮೇಲೆ ಎರಡು ಬಾರಿ, ಕುತ್ತಿಗೆ ಮೇಲೆ ಒಂದೆರಡು ಬಾರಿ, ಮೊಣಕಾಲ ಕೆಳಗೆ ಒಂದು ಬಾರಿ ಹಾಗೂ ಪಾದಕ್ಕೂ ತಲವಾರು ದಾಳಿ ನಡೆದಿದ್ದು, ನೆಲದ ಮೇಲೆ ಹರಡಿರುವ ರಕ್ತದ ಕಲೆಗಳು ಭೀಕರ ಹತ್ಯೆಗೆ ಸಾಕ್ಷಿಯಾಗಿವೆ.
ಏನಾದರೂ ಹಳೆಯ ದ್ವೇಷವಿತ್ತಾ?

ಕಳೆದ ಬಿಗ್ ಬಾಸ್ ಕನ್ನಡ ಸೀಸನ್ 9 ರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಟೀಂ ಕಲ್ಲೇಗ ಟೈಗರ್ಸ್ ರಾಜ್ಯವ್ಯಾಪಿ ಪ್ರಚಾರ ಪಡೆದಿತ್ತು. ಬಳಿಕ ಅದು ಮಂಗಳೂರಿನ ಪ್ರತಿಷ್ಠಿತ ಹುಲಿ ವೇಷ ತಂಡದ ಹೆಸರಿನಲ್ಲಿ ಮಿಳಿತವಾಗಿದ್ದು, ನಿತಿನ್ ಎಂಬಾತ ಇತ್ತಂಡಗಳ ನಡುವೆ ಆಟವಾಡಿದ್ದ ಎಂದೂ, ತಾನು ಸಹಿತ ನಮ್ಮ ತಂಡವೇ ಬಿಗ್ ಬಾಸ್ ನಲ್ಲಿ ಭಾಗವಹಿಸಿತ್ತು ಎಂಬ ಬಗ್ಗೆಯೂ ಅಕ್ಷಯ್ ಕಳೆದ ಜನವರಿಯಲ್ಲಿ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದರು. ಅದರ ಹೊರತಾಗಿ ತಂಡದೊಳಗೆ ಹಾಗೂ ಹೊರಗೆ ಸಣ್ಣಪುಟ್ಟ ಗೊಂದಲಗಳಿದ್ದರೂ ಕೊಲೆ ಮಾಡುವ ಮಟ್ಟಿಗೆ ಜಗಳಗಳಾಗಿತ್ತಾ ಎಂಬುದನ್ನು ಸದ್ಯ ಪೋಲಿಸರೇ ಹೇಳಬೇಕಿದೆ.