ಕಾರವಾರ : NH 66ರ ಕಾಳಿ ನದಿಗೆ ಕಟ್ಟಲಾಗಿದ್ದ ಸೇತುವೆ ಕುಸಿತ – ನದಿ ಪಾಲಾಗಿದ್ದ ಲಾರಿ ಚಾಲಕನ ರಕ್ಷಣೆ :

Spread the love

ನ್ಯೂಸ್ ಆ್ಯರೋ : ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಕೋಡಿಭಾಗ್ ಬಳಿ ಕಾರವಾರ ಹಾಗೂ ಗೋವಾ ನಡುವಿನ ರಾಷ್ಟ್ರೀಯ ಹೆದ್ದಾರಿ ಬಳಿ ನಿರ್ಮಿಸಿದ್ದ 41 ವರ್ಷಗಳ ಹಳೆಯ ಸೇತುವೆ ಕುಸಿದ ಘಟನೆ ಕಳೆದ ತಡರಾತ್ರಿ 1.30 ರ ವೇಳೆಗೆ ನಡೆದಿದೆ.

ಸೇತುವೆ ಕುಸಿತ ವೇಳೆ ಒಂದು ಲಾರಿಯೂ ಸಹ ನದಿಗೆ ಬಿದ್ದಿದ್ದು, ಲಾರಿ ಚಾಲಕನನ್ನು ರಕ್ಷಣೆ ಮಾಡಲಾಗಿದೆ. ಈ ಸೇತುವೆಯನ್ನು 1983ರಲ್ಲಿ ನಿರ್ಮಿಸಲಾಗಿತ್ತು. 2009ರಲ್ಲಿ ಸೇತುವೆಯ ಸಂಪೂರ್ಣ ದುರಸ್ತಿಗೆ ಪ್ರಯತ್ನಿಸಲಾಗಿತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. ಭಾಗಶಃ ಮಾತ್ರ ದುರಸ್ತಿ ನಡೆಸಲಾಗಿತ್ತು‌.

ರಾಷ್ಟ್ರೀಯ ಹೆದ್ದಾರಿ 66ರ ನಿರ್ಮಾಣದ ವೇಳೆ ಒಂದೇ ಒಂದು ಹೊಸ ಸೇತುವೆ ನಿರ್ಮಾಣ ಮಾಡಲಾಗಿತ್ತು. ಇನ್ನೊಂದು ಮಾರ್ಗಕ್ಕೆ ಹಳೆ ಸೇತುವೆಯನ್ನೇ ಬಳಸಲಾಗುತ್ತಿತ್ತು. ಐಆರ್ಬಿ ಹೊಸ ಸೇತುವೆ ನಿರ್ಮಾಣ ಮಾಡಿರಲಿಲ್ಲ. 41 ವರ್ಷ ಹಳೆಯ ಸೇತುವೆಯನ್ನೇ ಬಳಸಲಾಗುತ್ತಿತ್ತು.

ಆದರೆ ಮಧ್ಯ ರಾತ್ರಿ ಏಕಾಏಕಿ ಸೇತುವೆ ಕುಸಿದಿದೆ. ಈ ವೇಳೆ ಸೇತುವೆ ಮೇಲೆ ಲಾರಿ ಚಾಲನೆ ಮಾಡ್ತಿದ್ದ ತಮಿಳುನಾಡು ಮೂಲದ ಲಾರಿ ಚಾಲಕ ಬಾಲ್ ಮುರುಗನ್(37) ಸಮೇತ ತಮಿಳುನಾಡು ಮೂಲದ SSM ಟ್ರಾನ್ಸಪೋರ್ಟ ಕಂಪನಿಯ TN-52 AC -6880 ನೊಂದಣಿಯ ಖಾಲಿ ಟ್ರಕ್ ನದಿಗೆ ಬಿದ್ದಿದೆ.

ಕಾಳಿ ನದಿಯಲ್ಲಿ ಬಿದ್ದ ಲಾರಿಯ ಮುಂಭಾಗದ ಗ್ಲಾಸ್ ಒಡೆದು ಕ್ಯಾಬಿನ್ ಮೇಲೆ ನಿಂತು ಚಾಲಕ ಬಾಲ ಮುರುಗನ್ ರಕ್ಷಣೆಗೆ ಕೂಗಿದ್ದರು. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಸ್ಥಳೀಯ ಮೀನುಗಾರರು ಹಾಗೂ ಪೊಲೀಸ್ ಸಿಬ್ಬಂದಿ ಸೇರಿ ಬೋಟ್ ಮೂಲಕ ಲಾರಿ ಚಾಲಕನನ್ನ ರಕ್ಷಿಸಿದ್ದಾರೆ.

ಗೋವಾದಿಂದ ಹುಬ್ಬಳ್ಳಿ ಕಡೆ ಮಧ್ಯರಾತ್ರಿ ತೆರಳುತ್ತಿದ್ದ ತಮಿಳುನಾಡು ಮೂಲದ ಟ್ರಕ್ ಸೇತುವೆ ಮೇಲೆ ಬರುತ್ತಿದ್ದಂತೆ ಮೊದಲ ಭಾಗ ಕುಸಿದಿದ್ದು ನಂತರ ಮೂರು ಕಡೆ ಕುಸಿದಿದೆ.

ಸದ್ಯ ಕಾಳಿ ನದಿಗೆ ನಿರ್ಮಿಸಿರುವ ಇನ್ನೊಂದು ಸೇತುವೆಯಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಸೇತುವೆ ಕುಸಿತದಲ್ಲಿ ವಾಹನ ಬಿದ್ದಿರುವ ಶಂಕೆ ಹಿನ್ನೆಲೆಯಲ್ಲಿ ನದಿಯಲ್ಲಿ ಕಾರ್ಯಾಚರಣೆ ಮುಂದುವರೆದಿದೆ.

ಕಾಳಿನದಿಯ ಮೇಲಿನ ಮತ್ತೊಂದು ಸೇತುವೆ ರಸ್ತೆಯ ದೃಢತೆಯ ಬಗ್ಗೆ ಪರಿಶೀಲನಾ ಪ್ರಮಾಣ ಪತ್ರವನ್ನು ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಿಲ್ಲಾಧಿಕಾರಿ ಲಕ್ಷೀಪ್ರಿಯಾ, ಸ್ಥಳೀಯ ಶಾಸಕ ಸತೀಶ್ ಸೈಲ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ, ನಂತರ ಆಸ್ಪತ್ರೆಗೆ ತೆರಳಿ ಗಾಯಾಳು ಚಾಲಕನ ಆರೋಗ್ಯ ವಿಚಾರಿಸಿ ಘಟನೆ ಕುರಿತಂತೆ ಪ್ರತ್ಯಕ್ಷದರ್ಶಿ ಬಳಿ ಮಾಹಿತಿ ಪಡೆದುಕೊಂಡರು.

Leave a Comment

Leave a Reply

Your email address will not be published. Required fields are marked *