ಇಂದು ಭಾರತೀಯ ಸೇನಾ ದಿನ; ಜನವರಿ 15 ರಂದೇ ಈ ದಿನವನ್ನು ಆಚರಿಸುವುದೇಕೆ ?
ನ್ಯೂಸ್ ಆ್ಯರೋ: ಪ್ರತಿ ವರ್ಷ ಭಾರತೀಯ ಸೇನಾ ದಿನಾಚರಣೆಯನ್ನು ಜನವರಿ 15ರಂದು ಆಚರಿಸಲಾಗುತ್ತದೆ. ಫೀಲ್ಡ್ ಮಾರ್ಷಲ್ ಕೊಡಂದೇರ ಎಂ ಕಾರ್ಯಪ್ಪನವರು ಭಾರತೀಯ ಸೇನೆಯ ಪ್ರಥಮ ಭಾರತೀಯ ಮಹಾದಂಡನಾಯಕರಾಗಿ ಕೊನೆಯ ಬ್ರಿಟಿಷ್ ಮಹಾದಂಡನಾಯಕ ಜನರಲ್ ಫ್ರಾನ್ಸಿಸ್ ಬುಚರ್ ಅವರಿಂದ ಜನವರಿ 15, 1949ರಂದು ಅಧಿಕಾರ ಸ್ವೀಕರಿಸಿದರು. ಆ ಸ್ಮರಣೆಗಾಗಿ ಪ್ರತಿ ವರ್ಷವೂ ಈ ದಿನವನ್ನು ಆಚರಿಸಲಾಗುತ್ತದೆ.
ಸೇನಾ ದಿನವನ್ನು ವಿವಿಧ ಪೆರೇಡ್‌ಗಳು, ಪದಕ ಪ್ರದಾನ ಹಾಗೂ ಮಿಲಿಟರಿ ಸಾಂಸ್ಕೃತಿಕ ಪ್ರದರ್ಶನಗಳನ್ನು ನವದೆಹಲಿ ಹಾಗೂ ಇತರ ಆರ್ಮಿ ಕಮಾಂಡ್ ಮುಖ್ಯ ಕಚೇರಿಗಳಲ್ಲಿ ಆಯೋಜಿಸುವ ಮೂಲಕ ಆಚರಿಸಲಾಗುತ್ತದೆ. ಸೇನಾ ದಿನಾಚರಣೆಯಂದು ಪಥ ಸಂಚಲನ ನಡೆಸಿ, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರನ್ನು, ಫೀಲ್ಡ್ ಮಾರ್ಷಲ್ ಕೆಎಂ ಕಾರ್ಯಪ್ಪನವರನ್ನು ಸ್ಮರಿಸಲಾಗುತ್ತದೆ.
ಸೇನಾ ದಿನಾಚರಣೆಯ ಪೆರೇಡ್‌ನಲ್ಲಿ ಮಿಲಿಟರಿ ಪ್ರದರ್ಶನ ನಡೆಸಲಾಗುತ್ತದೆ. ಅದರಲ್ಲಿ ಪ್ಯಾರಾಟ್ರೂಪರ್‌ಗಳು ಆಗಸದಿಂದ ಜಿಗಿಯುವುದು, ಎಎಸ್‌ಸಿ ಟಾರ್ನೆಡೋ ತಂಡದಿಂದ ಮೋಟಾರ್ ಸೈಕಲ್ ಪ್ರದರ್ಶನ, ಫ್ಲೈ ಪಾಸ್ಟ್ (ವಿಮಾನಗಳು ವ್ಯಕ್ತಿ ಅಥವಾ ವಸ್ತುವಿನ ಸನಿಹದಿಂದ ಹಾರಾಟ ನಡೆಸುವುದು), ಆರ್ಮಿ ಏವಿಯೇಷನ್ ಹೆಲಿಕಾಪ್ಟರ್‌ಗಳ ಹಾರಾಟ ಪ್ರದರ್ಶನಗಳೂ ಸೇರಿವೆ.
ಈ ಸಮಾರಂಭದಲ್ಲಿ ಮೈಕ್ರೋಲೈಟ್ ವಿಮಾನ ಹಾರಾಟ, ಟೆಂಟ್ ಪೆಗ್ಗಿಂಗ್ (ಒಂದು ಓಟ, ಸಾಮಾನ್ಯವಾಗಿ ಒಂದು ತಂಡದ ಓಟ ಅಥವಾ ರಿಲೇ ಓಟದ ಮಾದರಿಯಾಗಿದ್ದು, ಇಲ್ಲಿ ಕುದುರೆ ಸವಾರ ಸಾಧ್ಯವಾದಷ್ಟು ವೇಗವಾಗಿ ನೆಲದಲ್ಲಿರುವ ಪೆಗ್ ಅನ್ನು ಕೈಯಲ್ಲಿರುವ ಕೋಲಿನಿಂದ ಎತ್ತಲು ಪ್ರಯತ್ನಿಸುತ್ತಾರೆ), ಸಂಕೀರ್ಣ ಜಿಗಿತ, ಬ್ಯಾಂಡ್ ಪ್ರದರ್ಶನ, ತೈಕ್ವಾಂಡೋ, ಹಾಗೂ ಇತರ ಕಲಾ ಪ್ರದರ್ಶನಗಳು ಈ ಸಮಾರಂಭದಲ್ಲಿ ನಡೆಯುತ್ತವೆ.
ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರ ಕೊಡುಗೆ
ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಕಾರ್ಯಪ್ಪನವರಿಗೆ ಬ್ರಿಟಿಷರು ಬಿಟ್ಟು ಹೋಗಿದ್ದ ಸೇನಾಪಡೆಯನ್ನು ಒಂದು ರಾಷ್ಟ್ರೀಯ ಸೇನೆಯನ್ನಾಗಿ ರೂಪಿಸುವ ಮಹತ್ವದ ಜವಾಬ್ದಾರಿಯಿತ್ತು. ಆ ಗುರಿಯನ್ನು ಈಡೇರಿಸಲು ಕಾರ್ಯಪ್ಪನವರು ಎರಡು ಹೊಸ ಯುನಿಟ್‌ಗಳಾದ ಗಾರ್ಡ್ಸ್ ಬ್ರಿಗೇಡ್ (1958ರಿಂದ ಅದನ್ನು ಬ್ರಿಗೇಡ್ ಆಫ್ ದ ಗಾರ್ಡ್ಸ್ ಎನ್ನಲಾಗುತ್ತದೆ) ಹಾಗೂ ಪ್ಯಾರಾಶೂಟ್ ರೆಜಿಮೆಂಟ್ (1952) ಗಳನ್ನು ಸ್ಥಾಪಿಸಿದರು.
ಈ ಪಡೆಗಳು ಎಲ್ಲಾ ಜಾತಿ, ವರ್ಗಗಳಿಂದ ಸೈನಿಕರನ್ನು ಸೇರಿಸಿಕೊಂಡಿದ್ದ ಮೊದಲ ಪಡೆಗಳಾಗಿದ್ದವು. ಕಾರ್ಯಪ್ಪನವರು 1953ರಲ್ಲಿ ಮಿಲಿಟರಿ ಸೇವೆಯಿಂದ ನಿವೃತ್ತರಾಗಿ, 1956ರ ತನಕ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗಳಲ್ಲಿ ಭಾರತೀಯ ಹೈ ಕಮಿಷನರ್ ಆಗಿ ಕಾರ್ಯ ನಿರ್ವಹಿಸಿದರು.
ಅವರು ಸೇನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದನ್ನು ಮುಂದುವರಿಸಿ, 1965 ಮತ್ತು 1971ರ ಭಾರತ ಪಾಕಿಸ್ತಾನ ಯುದ್ಧದ ಸಂದರ್ಭಗಳಲ್ಲಿ ಸೇನೆಗೆ ಭೇಟಿ ನೀಡಿ, ಸೈನಿಕರಿಗೆ ಪ್ರೋತ್ಸಾಹ, ಉತ್ತೇಜನ ನೀಡಿದ್ದರು. ಕಾರ್ಯಪ್ಪನವರು ಭಾರತೀಯ ಸೇನೆ ಸದಾ ರಾಜಕೀಯದಿಂದ ದೂರವಿರಬೇಕು ಮತ್ತು ನಾಗರಿಕ ಸರ್ಕಾರದಡಿ ಕಾರ್ಯಾಚರಿಸಬೇಕು ಎಂದು ಸ್ಪಷ್ಟವಾಗಿ ಅಭಿಪ್ರಾಯ ಪಟ್ಟಿದ್ದರು.
1986ರಲ್ಲಿ ಭಾರತ ಸರ್ಕಾರ ಕಾರ್ಯಪ್ಪನವರನ್ನು ದೇಶಕ್ಕಾಗಿ ಅವರ ಅಪರಿಮಿತ ಸೇವೆಯನ್ನು ಪರಿಗಣಿಸಿ, ಫೀಲ್ಡ್ ಮಾರ್ಷಲ್ ಹುದ್ದೆಗೆ ಬಡ್ತಿ ನೀಡಿ ಗೌರವಿಸಿತು. ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರು ತನ್ನ 94ನೇ ವಯಸ್ಸಿನಲ್ಲಿ, 1993ರಲ್ಲಿ ಬೆಂಗಳೂರಿನಲ್ಲಿ ಅಸುನೀಗಿದರು.
ಇನ್ನು ಈ ವಿಶೇಷ ದಿನದಂದು ದೇಶದಾದ್ಯಂತ ಭವ್ಯವಾದ ಸಮಾರಂಭಗಳು, ಮಿಲಿಟರಿ ಮೆರವಣಿಗೆಗಳು, ಸಾಹಸಿ ಚಟುವಟಿಕೆಗಳ ಪ್ರದರ್ಶನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಸೇನಾ ಪರೇಡ್, ವೀರಯೋಧರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
Leave a Comment