12 ಜ್ಯೋತಿರ್ಲಿಂಗಗಳಲ್ಲಿ ನಾನು ಪವಿತ್ರ ಲಿಂಗ; ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ
ನ್ಯೂಸ್ ಆ್ಯರೋ: 12 ಶಿವ ಲಿಂಗಗಳಲ್ಲಿ ನಾನು ಒಬ್ಬ ಎನ್ನುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮತ್ತೊಮ್ಮೆ ಚರ್ಚೆಗೆ ಕಾರಣರಾಗಿದ್ದಾರೆ. ಕೆಲ ದಿನಗಳ ಹಿಂದೆ ಛತ್ತೀಸ್‌ಗಢದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅಲ್ಲಿಯ ಅಭ್ಯರ್ಥಿ ಶಿವಕುಮಾರ್ ದಹರಿಯಾ ಅವರನ್ನು ಶಿವನಿಗೆ ಹೋಲಿಸಿದ ಮಲ್ಲಿಕಾರ್ಜುನ ಖರ್ಗೆ ಅವರು, ಶಿವನು ರಾಮನ ಸಮಾನವಾಗಿ ಸ್ಪರ್ಧಿಸಬಹುದು, ಅವರಿಗೆ ಕಠಿಣ ಸ್ಪರ್ಧೆಯೊಡ್ಡಬಹುದು ಎಂದು ಹೇಳಿದ್ದರು.
ರಾಮ ಎಂದರೆ ಬಿಜೆಪಿ ಎನ್ನುವ ಅರ್ಥದಲ್ಲಿ ಅವರು ಹೇಳಿದ್ದರು. ಶಿವಕುಮಾರ್ ಅವರ ಹೆಸರಿನಲ್ಲೇ ಶಿವ ಇದ್ದಾನೆ. ಶಿವನು ರಾಮನ ಸಮಾನವಾಗಿ ಸ್ಪರ್ಧೆ ಮಾಡಬಹುದು ಎನ್ನುವ ಮೂಲಕ ಕಿಡಿ ಹೊತ್ತಿಸಿದ್ದರು. ಆದರೆ ಮತ್ತೊಮ್ಮೆ ಇದೇ ರೀತಿ ಮಾತನ್ನು ಹೇಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಪರ- ವಿರೋಧಗಳ ಚರ್ಚೆ ಶುರುವಾಗಿದೆ.
ಅಷ್ಟಕ್ಕೂ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದೇನೆಂದರೆ, ತಮ್ಮ ಹೆಸರು ಮಲ್ಲಿಕಾರ್ಜುನ ಎಂದು ಒಟ್ಟು ಹನ್ನೆರಡು ಜ್ಯೋತಿರ್ಲಿಂಗಗಳು ಇವೆ. ಅವುಗಳಲ್ಲಿ ಒಂದು ಮಲ್ಲಿಕಾರ್ಜುನ ಲಿಂಗ. ನನ್ನ ತಂದೆ ನಾನು ಗುಟ್ಟಿದಾಗಲೇ ಮಲ್ಲಿಕಾರ್ಜುನ ಎಂದು ಹೆಸರು ಇಟ್ಟಿದ್ದಾರೆ. ಇದು ಶಿವನ ಹೆಸರು. ಆದ್ದರಿಂದ ಹನ್ನೆರಡು ಜ್ಯೋತಿರ್ಲಿಂಗಗಳ ಪೈಕಿ ನಾನು ಒಬ್ಬ ಪವಿತ್ರ ಲಿಂಗ ಎಂದು ಹೇಳಿದ್ದಾರೆ. ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಪರ-ವಿರೋಧಗಳ ಚರ್ಚೆ ಶುರುವಾಗಿದೆ. ಅದರಲ್ಲಿಯೂ ಬಿಜೆಪಿ ಈ ಮಾತಿಗೆ ಗರಂ ಆಗಿದೆ.
ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠೆ ಮಾಡಿದಾಗಿನಿಂದಲೂ ಕಾಂಗ್ರೆಸ್, ಬಿಜೆಪಿಯನ್ನು ರಾಮನ ಪಕ್ಷ ಎಂದೇ ಹೇಳಿಕೊಂಡು ಬಂದಿದೆ. ಆದರೆ ಭಾಷಣದಲ್ಲಿ ಕಾಂಗ್ರೆಸ್ ಮುಖಂಡರು ಅಯೋಧ್ಯೆಯ ರಾಮ ನಮ್ಮದಲ್ಲ, ಆದರೆ ಇಡೀ ವಿಶ್ವದ ರಾಮ ನಮ್ಮವ ಎಂದು ಹೇಳುತ್ತಿದ್ದಾರೆ. ಆದರೆ ಮಲ್ಲಿಕಾರ್ಜುನ ಖರ್ಗೆ ಅವರು, ಈಗ ರಾಮನ ವಿರುದ್ಧ ಶಿವ ಗೆಲ್ಲುತ್ತಾನೆ ಎನ್ನುವ ಮೂಲಕ, ರಾಮನನ್ನು ಕಾಂಗ್ರೆಸ್ ತನ್ನ ಶತ್ರು ಎಂದು ಪರಿಗಣಿಸುತ್ತದೆ ಎಂದು ಖರ್ಗೆ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಈಗಲೂ ಶಿವನ ಹೆಸರನ್ನು ಪಕ್ಷ ಬಳಸಿಕೊಳ್ಳುತ್ತಿರುವುದಕ್ಕೆ ಭಾರೀ ಟೀಕೆ ವ್ಯಕ್ತವಾಗಿದೆ. ಕಾಂಗ್ರೆಸ್ನವರು ತಾವು ಶಿವನೆಂದು ಜಂಭ ಕೊಚ್ಚಿಕೊಳ್ಳುತ್ತಿದ್ದಾರೆ. ಆದರೆ ಶಿವನು ಶ್ರೀರಾಮನನ್ನು ತನ್ನ ಆರಾಧ್ಯ ದೈವವೆಂದು ಪರಿಗಣಿಸುತ್ತಾನೆ ಎಂಬುದು ಅವರಿಗೆ ತಿಳಿದಿಲ್ಲ ಎಂಬ ಕಮೆಂಟ್‌ಗಳನ್ನು ಮಾಡಲಾಗುತ್ತಿದೆ.
Leave a Comment