ವಯನಾಡ್ ನಲ್ಲೊಂದು ಕಣ್ಣೀರ ಕಹಾನಿ : ಹನಿಮೂನ್ ಗೆ ಬಂದಿದ್ದ ಎರಡು ಜೋಡಿಗಳ ಗಂಡಂದಿರೇ ಸಾವು – ವಿಧವೆಯರಾದ ಇಬ್ಬರು ನವವಿವಾಹಿತೆಯರು..!!
ನ್ಯೂಸ್ ಆ್ಯರೋ : ವಯನಾಡ್ ದುರಂತದಲ್ಲಿ ಮುನ್ನೂರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಎಲ್ಲಾ ಸಾವುಗಳ ಹಿಂದಿನ ಕಣ್ಣೀರ ಕಹಾನಿ ಎಂಥವರ ಮನಸ್ಸನ್ನೂ ಕದಡಿಸುತ್ತದೆ. ಅಂತಹದೇ ಮತ್ತೊಂದು ಕಣ್ಣೀರ ಕಹಾನಿ ತಡವಾಗಿ ಬೆಳಕಿಗೆ ಬಂದಿದ್ದು, ಹನಿಮೂನ್‌ಗೆಂದು ವಯನಾಡಿಗೆ ಬಂದಿದ್ದ ಒಡಿಶಾ ಮೂಲದ ಎರಡು ಜೋಡಿಗಳಲ್ಲಿ ಪತಿಯಂದಿರು ಈ ದುರಂತದಲ್ಲಿ ಸಾವಿಗೀಡಾಗಿ ನವವಧುಗಳು ಈಗ ವಿಧವೆಯರಾಗಿದ್ದಾರೆ.
ವಯನಾಡು ದುರಂತದ ಒಂದು ದಿನ ಮುಂಚಿತವಾಗಿ ಚೂರಲ್‌ಮಲಗೆ ಈ ಎರಡು ಜೋಡಿಗಳು ಆಗಮಿಸಿದ್ದರು. ಭುವನೇಶ್ವರ ಏಮ್ಸ್‌ನ ಡಾ.ಬಿಷ್ಣು ಪ್ರಸಾದ್ ಚಿನ್ನಾರ-ಪ್ರಿಯದರ್ಶಿನಿ ಹಾಗೂ ಡಾ.ಸ್ವಾಧೀನ್ ಪಾಂಡಾ-ಡಾ.ಸ್ವೀಕೃತಿ ಮಹಾಪಾತ್ರ ದಂಪತಿ ಜತೆಯಾಗಿ ವಯನಾಡ್‌ಗೆ ಹನಿಮೂನ್‌ಗಾಗಿ ಬಂದಿದ್ದರು.
ದುರಂತವೆಂದರೆ ಭೂಕುಸಿತದಲ್ಲಿ ಅವರು ತಂಗಿದ್ದ ರೆಸಾರ್ಟ್ ಕೊಚ್ಚಿ ಹೋಗಿದ್ದು, ಕುತ್ತಿಗೆಮಟ್ಟದವರೆಗೂ ಬಂದಿದ್ದ ಕೆಸರು ನೀರಿರಲ್ಲಿನಲ್ಲಿ ದಂಪತಿ ಕೊಚ್ಚಿಹೋಗಿದ್ದಾರೆ. ರೆಸಾರ್ಟ್‌ನಿಂದ 200 ಮೀ. ದೂರ ಕೊಚ್ಚಿ ಹೋದ ಪ್ರಿಯದರ್ಶಿನಿ ಮತ್ತು ಸ್ವೀಕೃತಿ ಅವರ ಕಿರುಚಾಟವನ್ನು ಕೇಳಿದ ರಕ್ಷಣಾ ಸಿಬ್ಬಂದಿ ಇವರಿಬ್ಬರನ್ನೂ ರಕ್ಷಿಸಿದ್ದಾರೆ.
ಆದರೆ ಅಷ್ಟರಲ್ಲಾಗಲೇ ಗಂಡಂದಿರಾದ ಬಿಷ್ಣು ಹಾಗೂ ಸ್ವಾಧೀನ ಕಣ್ಮರೆಯಾಗಿಬಿಟ್ಟಿದ್ದರು. ತೀವ್ರ ಗಾಯಗೊಂಡ ಸ್ವೀಕೃತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಿಯದರ್ಶಿನಿ ಅವರ ಪತಿ ಡಾ.ಬಿಷ್ಣು ಪ್ರಸಾದ್ ಮೃತದೇಹ ಚೂರಲ್‌ಮಲಾ ಬಳಿ ಪತ್ತೆಯಾಗಿದ್ದು, ಮೃತದೇಹವನ್ನು ಹುಟ್ಟೂರಿಗೆ ಕೊಂಡೊಯ್ಯಲಾಗಿದೆ. ಆದರೆ ಅವರೊಂದಿಗಿದ್ದ ಡಾ.ಸ್ವಾಧೀನ್ ಪಾಂಡಾ ಮೃತದೇಹ ಇನ್ನೂ ಪತ್ತೆಯಾಗಿಲ್ಲ.
Leave a Comment