Mangalore : ಖಾಸಗಿ ಬಸ್ ಗಳನ್ನು ದೂರುವವರು ಇತ್ತ ಗಮನಿಸಿ – ಬಸ್ ಸಿಬ್ಬಂದಿಗಳು ಅಂದ್ರೆ ಸುಮ್ನೆ ಅಲ್ಲ, ಎದೆನೋವಿನಿಂದ ಅಸ್ವಸ್ಥಗೊಂಡ ವಿದ್ಯಾರ್ಥಿನಿಯನ್ನು ಕಾಪಾಡಿದ್ದು ಹೇಗೆ ಗೊತ್ತಾ?
ನ್ಯೂಸ್ ಆ್ಯರೋ : ಇದು ಮಂಗಳೂರು.. ಇಲ್ಲಿ ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ಅಬ್ಬರವಿಲ್ಲ, ಏನಿದ್ದರೂ ಖಾಸಗಿ ಬಸ್ ಗಳದ್ದೇ ಪಾರುಪತ್ಯ.. ಹಾಗಂತ ಇಲ್ಲಿ ಖಾಸಗಿ ಬಸ್ ಗಳ ಪ್ರಯೋಜನ ಪಡೆದವರೂ ಕೂಡ ಖಾಸಗಿ ಬಸ್ ಗಳನ್ನು ಅವುಗಳ ಹಾವಳಿ, ವೇಗಕ್ಕೆ ದೂರುವುದೂ ಉಂಟು. ಟೈಮಿಂಗ್ ವಿಚಾರಕ್ಕೆ ಇಲ್ಲಿ ರಸ್ತೆಯಲ್ಲೇ ಬಸ್ ಗಳ ನಿರ್ವಾಹಕ, ಚಾಲಕರು ಬಡಿದಾಡುವುದೂ ಉಂಟು. ಆದರೆ ಎಲ್ಲವೂ ಸಹಜವೆಂಬಂತೆ ನಡೆದರೂ ಇಲ್ಲಿ ಚಾಲಕರ, ನಿರ್ವಾಹಕರ ನಡುವಿನ ಪೈಪೋಟಿ ತನ್ನ ಬಸ್ ನಿಂದ ಬರುವ ಗಳಿಕೆ ಬಸ್ ಮಾಲಕನ ಜೇಬು ತುಂಬಿಸಲು ಅಲ್ಲದಿದ್ದರೂ ಜೇಬಿಗೆ ಕತ್ತರಿ ಬೀಳದೇ ಇರಲಿ ಎಂಬ ಕಾರಣಕ್ಕೆ ಅಷ್ಟೇ.
ಇಂತಹ ಖಾಸಗಿ ಬಸ್ ಗಳ ಚಾಲಕ ನಿರ್ವಾಹಕರ ನೋವು ನಲಿವುಗಳು ಹಲವೊಮ್ಮೆ ಚರ್ಚೆಯಾಗುವುದೂ ಉಂಟು. ಖಾಸಗಿ ಬಸ್ ನಲ್ಲಿ ದುಡಿಯುವ ಬಹುಪಾಲು ಸಿಬ್ಬಂದಿಗಳು ಮಿಡಲ್ ಕ್ಲಾಸ್ ನವರೇ.. ಮಕ್ಕಳ ಶಾಲೆಯ ಫೀಸ್, ದಿನನಿತ್ಯದ ಖರ್ಚು ವೆಚ್ಚಗಳು, ಮಗ ಅಥವಾ ಮಗಳ ಅಥವಾ ಸೋದರಿಯ ಮದುವೆಯ ಖರ್ಚಿಗಾಗಿ ಸಾಲ ಮಾಡಿರುವವರು, ತಂದೆ ತಾಯಿಯ ವಯೋಸಹಜ ಅನಾರೋಗ್ಯ ಸಮಸ್ಯೆಗೆ ದುಡ್ಡು ಹೊಂದಿಸಲು ಪರದಾಡುವವರು, ಹೊಸ ಮನೆ ಕಟ್ಟಿರುವವರು ಅಥವಾ ಕಟ್ಟುತ್ತಿರುವವರು, ಇನ್ಯಾವುದೋ ಹಣದ ಅಗತ್ಯ ಇರುವವರು ಮಾತ್ರ ಬಸ್ ಗಳಲ್ಲಿ ಉದ್ಯೋಗ ಮಾಡುತ್ತ ತಮ್ಮ ದಿನದ ಬಹುಪಾಲು ಸಮಯ ಕಳೆದುಬಿಡುತ್ತಾರೆ. ಸಂಜೆಯಾದರೆ ಸಾಕು ತಮ್ಮ ಪುಟ್ಟ ಸಂಸಾರದ ಜೊತೆಯಾಗುವ ಹಂಬಲದಿಂದ ಕಾಯುವ ಈ ಸಿಬ್ಬಂದಿಗಳ ಕಷ್ಟ ಅರಿಯಲು ನೀವೊಮ್ಮೆ ಅವರ ಜೊತೆ ಮಾತಿಗೆ ನಿಲ್ಲಬೇಕು..
ಆದರೂ ಅದ್ಯಾವ ಟೆನ್ಷನ್ ಇದ್ದರೂ ಎಲ್ಲವನ್ನೂ ಮರೆತು ಒಮ್ಮೆ ಬಸ್ ಏರಿದ್ರೆ ಸಾಕು ಬಸ್ ನಲ್ಲಿ ಬರುವ ಎಲ್ಲರನ್ನೂ ತಮ್ಮವರಂತೆ ಭಾವಿಸಿ ಅವರ ಹೋಗಬೇಕಾದ ಜಾಗ ತಲುಪಿಸುವ ಈ ಬಸ್ ಚಾಲಕ ನಿರ್ವಾಹಕರ ಶ್ರಮಕ್ಕೆ ಎಲ್ಲರೂ ಜೈ ಅನ್ನಲೇಬೇಕು. ಇಂತಹ ಬಸ್ ನ ಸಿಬ್ಬಂದಿಗಳು ಅದೆಷ್ಟು ಮಾನವೀಯರೂ ಇರುತ್ತಾರೆ ಅನ್ನುವುದಕ್ಕೆ ನಿನ್ನೆ ನಡೆದ ಘಟನೆ ಕಣ್ಣಮುಂದಿರುವ ಸಾಕ್ಷಿ.
ಮಂಗಳೂರು ನಗರದ ಕುಂಜತ್ತಬೈಲ್ ಹಾಗೂ ಮಂಗಳಾದೇವಿ ನಡುವೆ ಸಂಚರಿಸುವ F13 ಕೃಷ್ಣಪ್ರಸಾದ್ ಬಸ್ ನಿನ್ನೆ ಎಂದಿನಂತೆ ಮಧ್ಯಾಹ್ನ 3.18ಕ್ಕೆ ಕುಂಜತ್ತಬೈಲ್ ನಿಂದ ತನ್ನ ಸಂಚಾರ ಆರಂಭಿಸಿತ್ತು. ಗಜರಾಜ್ ಕುಂದರ್ ಅವರು ಚಾಲಕರಾಗಿದ್ದರೆ, ಮಹೇಶ್ ಪೂಜಾರಿ ಹಾಗೂ ಸುರೇಶ್ ನಿರ್ವಾಹಕರಾಗಿದ್ದರು. ಅದ್ಯಾಕೋ ಬಸ್ ಗೆ ಬಂದಿದ್ದ ಕೂಳೂರಿನ ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿಗೆ ಎದೆ ನೋವು ಆರಂಭವಾಗಿತ್ತು.
ಕೂಡಲೇ ನಿರ್ವಾಹಕರಿಗೆ ಬಸ್ ನಲ್ಲಿದ್ದ ಆಕೆಯ ಸ್ನೇಹಿತೆಯರು ಮಾಹಿತಿ ನೀಡುತ್ತಿದ್ದಂತೆ ಲಾಲ್ ಬಾಗ್ ಸಮೀಪ ಬಂದಾಗ ಅಸಹನೀಯ ನೋವಲ್ಲಿ ಆ ವಿದ್ಯಾರ್ಥಿನಿ ಚೀರಾಡಲು ಆರಂಭಿಸಿದ್ದಾಳೆ. ಹಿಂದೆ ಮುಂದೆ ಯೋಚಿಸದ ಬಸ್ ನ ಸಿಬ್ಬಂದಿ ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸುವ ನಿರ್ಧಾರ ಮಾಡಿಬಿಡುತ್ತಾರೆ.
ನಗರದ ಪಿವಿಎಸ್ ಸರ್ಕಲ್ ನಿಂದ ಕಂಕನಾಡಿವರೆಗಿನ ದೂರವನ್ನು ಭಾರೀ ಟ್ರಾಫಿಕ್ ನ ನಡುವೆಯೂ ಕೇವಲ ಏಳು ನಿಮಿಷಗಳ ಅಂತರದಲ್ಲಿ ಕ್ರಮಿಸಿ ಅಸ್ವಸ್ಥ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ತುರ್ತು ಸಮಯದಲ್ಲಿ ಬಳಸುವ ಸೈರನ್ ಬಳಸಿ ಅತಿ ವೇಗವಾಗಿ ಚಲಾಯಿಸಿದರೂ ಯಾವುದೇ ಅಪಾಯವಾಗದಂತೆ ಅಂಬ್ಯುಲೆನ್ಸ್ ರೀತಿ ಪ್ರಾಣ ಒತ್ತೆಯಿಟ್ಟು ಸಾಗಿದ ಬಸ್ ಸಿಬ್ಬಂದಿಗಳ ಸಮಯಪ್ರಜ್ಞೆಗೆ ಹ್ಯಾಟ್ಸಾಫ್ ಹೇಳಲೇಬೇಕು. ಸದ್ಯ ವಿದ್ಯಾರ್ಥಿನಿ ಪ್ರಾಣಾಪಾಯದಿಂದ ಪಾರಾಗಿ ಚೇತರಿಸಿಕೊಂಡಿದ್ದಾಳೆ ಎನ್ನಲಾಗಿದ್ದು, ಬಸ್ ನಲ್ಲಿದ್ದ ಇತರ ಸಹಪ್ರಯಾಣಿಕರೂ ಕೂಡ ತಮಗೆ ಬೆಂಬಲವಾಗಿ ನಿಂತಿದ್ದಕ್ಕೆ ಬಸ್ ಸಿಬ್ಬಂದಿಗಳು ಧನ್ಯವಾದ ತಿಳಿಸಿದ್ದಾರೆ. ಸದ್ಯ ಬಸ್ ಸಿಬ್ಬಂದಿಗಳ ಸಮಯಪ್ರಜ್ಞೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
Leave a Comment