ಪುತ್ತೂರು : ಅವೈಜ್ಞಾನಿಕ ಕಟ್ಟಡ ನಿರ್ಮಾಣದಿಂದ ಸರ್ಕಾರಿ ಶಾಲೆಯೇ ಬಂದ್ – ಪೆರ್ನಾಜೆಯ ಶಾಲೆ ಖಾಸಗಿ ಶಾಲಾ ಕಟ್ಟಡಕ್ಕೆ ಶಿಫ್ಟ್ : ಅನುದಾನದ ದುಡ್ಡು ಪೋಲು ಮಾಡಿದವರಿಗೆ ತಲೆಯಲ್ಲಿ ಬುದ್ಧಿ ಇಲ್ವಾ?

Spread the love

ನ್ಯೂಸ್ ಆ್ಯರೋ : ಕಳೆದ ಒಂದು ವರ್ಷದಿಂದ ಭೂಕುಸಿತದ ಅಪಾಯದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪೆರ್ನಾಜೆಯಲ್ಲಿರುವ ದಕ್ಷಿಣಕನ್ನಡ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆಯನ್ನು ಇದೀಗ ಖಾಸಗಿ ಶಾಲೆಯ ಕಟ್ಟಡಕ್ಕೆ ಸ್ಥಳಾಂತರಗೊಳಿಸಲಾಗಿದ್ದು, ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಅವೈಜ್ಞಾನಿಕವಾಗಿ ಕಟ್ಟಡ ನಿರ್ಮಿಸಿರುವ ಕಾರಣ ಶಾಲಾ ಮುಂಭಾಗದ ಮಣ್ಣು ಕುಸಿಯಲಾರಂಭಿಸಿದ್ದು, ಕುಸಿದ ಮಣ್ಣನ್ನು ತುಂಬಿಸಿ ಶಾಲಾ ಕಟ್ಟಡವನ್ನು ರಕ್ಷಿಸುವ ಬದಲು ಅಪಾಯದಲ್ಲಿರುವ ಕಟ್ಟಡವನ್ನೇ ಶೃಂಗಾರಗೊಳಿಸಿದ ಕಾರಣ ಶಾಲೆಯ ಅಡಿಪಾಯವೇ ಇಂದು ಕುಸಿದು ಬೀಳುವ ಅಪಾಯದಲ್ಲಿದೆ.

ಶಾಲೆಯಲ್ಲಿರುವ ವಿದ್ಯಾರ್ಥಿಗಳಿಗಾಗಿ ತರಗತಿ ನಡೆಸುವುದು ಅಗತ್ಯವಾಗಿರುವ ಕಾರಣ, ಇದೀಗ ಶಾಲೆಯನ್ನೇ ಖಾಸಗಿ ಶಾಲೆಯ ಕಟ್ಟಡಕ್ಕೆ ಶಿಫ್ಟ್ ಮಾಡಲಾಗಿದ್ದು, ಈ ವಿಚಾರವನ್ನು ಮಕ್ಕಳ ಪೋಷಕರಿಗಾಗಲೀ, ಶಾಲಾಭಿವೃದ್ಧಿ ಸಮಿತಿಯ ಗಮನಕ್ಕಾಗಲೀ ತರದೆ ಅಧಿಕಾರಿಗಳ ಈ ನಿರ್ಧಾರ ಗ್ರಾಮಸ್ಥರ ಅಸಮಾಧಾನಕ್ಕೂ ಕಾರಣವಾಗಿದೆ.

ಎರಡು ವರ್ಷಗಳ ಹಿಂದೆ ಮಳೆಗಾಲದಲ್ಲಿ ಈ ಶಾಲೆಯ ಮುಂಭಾಗದಲ್ಲಿ ಭೂಕುಸಿತ ಉಂಟಾಗಿತ್ತು. ಶಾಲಾ ಮುಂಭಾಗ ಹಾಗೂ ಹಿಂಭಾಗದ ಮಣ್ಣು ಕುಸಿದ ಪರಿಣಾಮ ಶಾಲೆಯ ಕಟ್ಟಡದ ಅಡಿಪಾಯದಲ್ಲೂ ಬಿರುಕು ಬಿದ್ದಿತ್ತು.

ಆದರೆ ಘಟನೆ ನಡೆದು ಎರಡು ವರ್ಷ ಕಳೆದರೂ, ಕುಸಿತದ ಜಾಗದಲ್ಲಿ ಮತ್ತೆ ಕುಸಿತವಾಗದಂತೆ ತಡೆಯುವ ಬದಲು ಇಲಾಖೆ ಅಪಾಯದಲ್ಲಿರುವ ಕಟ್ಟಡದ ಮೇಲ್ಛಾವಣಿಗೆ, ನೆಲಹಾಸುಗೆಯ ಟೈಲ್ಸ್ ಗೆ ಅಳವಡಿಸುವ ಮೂಲಕ ಅಪಾಯಕಾರಿ ಕಟ್ಟಡಕ್ಕೆ ಹಣ ವಿನಿಯೋಗಿಸಿತ್ತು.

ಅನುದಾನದ ಮೊತ್ತವನ್ನು ಶೃಂಗಾರಕ್ಕೆ ಖರ್ಚು‌ ಮಾಡಿಯೂ ಶಾಲೆಯ ಮಕ್ಕಳನ್ನು ಇದೀಗ ಅಪಾಯಕಾರಿ ಕಟ್ಟಡ ಎನ್ನುವ ಕಾರಣಕ್ಕಾಗಿ ಪಕ್ಕದಲ್ಲೇ ಇರುವ ಖಾಸಗಿ ಶಾಲೆಯೊಂದರ ಕೊಠಡಿಗೆ ಸ್ಥಳಾಂತರಿಸಲಾಗಿದೆ. ಏಕಾಏಕಿ ಶಾಲೆಗೆ ಭೇಟಿ ನೀಡಿದ ಅಧಿಕಾರಿಗಳ ತಂಡ ಶಾಲಾಭಿವೃದ್ಧಿ ಸಮಿತಿ, ಪೋಷಕರ ಗಮನಕ್ಕೂ ತರದೆ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.

ಶಾಲೆಯ ಮುಂಭಾಗದಲ್ಲಿ ಕೇವಲ 2 ಮೀಟರ್ ಅಂತರದಲ್ಲಿ ಈ ಭೂಕುಸಿತ ಸಂಭವಿಸಿದ್ದು, ಭಾರೀ ಆಳಕ್ಕೆ ಮಣ್ಣು ಕುಸಿದಿದೆ. ಶಾಲೆಯ ಅಡಿಪಾಯಕ್ಕೂ ಈ ಕುಸಿತ ಹಾನಿಗೊಳಿಸಿರುವ ಕಾರಣಕ್ಕೆ ಮಣ್ಣು ಕುಸಿತ ತಡೆಯುವ ಕಾಮಗಾರಿ ನಡೆಸುವಂತೆ ಗ್ರಾಮಸ್ಥರು ಇಲಾಖೆಯ ಗಮನಕ್ಕೂ ತಂದಿದ್ದರು.

ರಸ್ತೆಯ ಪಕ್ಕದಲ್ಲೇ ಇದ್ದ ಹಳೆ ಸರಕಾರಿ ಶಾಲೆಯನ್ನು ಕೆಡವಿ, ಜನವಸತಿಯಿಲ್ಲದ, ಅಪಾಯಕಾರಿ ಗುಡ್ಡವಿರುವ ಜಾಗದಲ್ಲಿ ಹೊಸ ಶಾಲಾ ಕಟ್ಟಡವನ್ನು 2007-08 ರ ಸಾಲಿನಲ್ಲಿ ನಿರ್ಮಿಸಲಾಗಿತ್ತು. ಒಂದು ಕಡೆಯಲ್ಲಿ ಶಾಲಾ ಕಟ್ಟಡದ ಹಿಂಭಾಗದಿಂದ ಗುಡ್ಡ ಕುಸಿದರೆ, ಇನ್ನೊಂದು ಕಡೆ ಶಾಲೆಯ ಮುಂಭಾಗದಿಂದಲೂ ಭೂಕುಸಿತವಾಗುತ್ತಿದೆ.

ಜನವಸತಿ ಇಲ್ಲದ ಪ್ರದೇಶದಲ್ಲಿ ಹೊಸ ಶಾಲಾ ಕಟ್ಟಡವನ್ನು ಮತ್ತೆ ನಿರ್ಮಿಸಿರುವುದು ಮತ್ತು ಮೂಲಭೂತ ಸೌಲಭ್ಯಗಳಿಲ್ಲದ ಕಾರಣ ಈ ಶಾಲೆಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆಯೂ ಗಣನೀಯವಾಗಿ ಕುಸಿಯುತ್ತಿದೆ. ಈ ಶೈಕ್ಷಣಿಕ ಸಾಲಿನಲ್ಲಿ ಒಂದನೇ ಮತ್ತು ಎರಡನೇ ತರಗತಿಗೆ ಒಂದು ಮಗುವೂ ಸೇರ್ಪಡೆಗೊಂಡಿಲ್ಲ. ಉಳಿದ ಮೂರನೇ ತರಗತಿಯಿಂದ ಏಳನೇ ತರಗತಿವರೆಗೆ ಹನ್ನೊಂದು ವಿದ್ಯಾರ್ಥಿಗಳು ಮಾತ್ರ ಈ ಶಾಲೆಯಲ್ಲಿದ್ದಾರೆ.

ಅಪಾಯಕಾರಿ ಕಟ್ಟಡ ಎನ್ನುವ ಕಾರಣಕ್ಕೆ ಸದ್ಯಕ್ಕೆ ಈ ಶಾಲೆಯನ್ನೂ ಮುಚ್ಚಲಾಗಿದ್ದು, ವಿದ್ಯಾರ್ಥಿಗಳನ್ನು ಖಾಸಗಿ ಶಾಲೆಯ ಕೊಠಡಿಯೊಂದಕ್ಕೆ ಸ್ಥಳಾಂತರಿಸಿ ಅಲ್ಲಿ ತರಗತಿ ನಡೆಸಲಾಗುತ್ತಿದೆ. ಶಾಲಾ ಕಟ್ಟಡಕ್ಕೆ ಅಪಾಯವಿದೆ‌ ಎಂದು ತಿಳಿದಿದ್ದರೂ, ಅಡಿಪಾಯ ಗಟ್ಟಿ ಮಾಡುವ ಬದಲು ಕಟ್ಟಡವನ್ನೇ ಶೃಂಗಾರಗೊಳಿಸಲು ಮುಂದಾದ ಕಾರಣ ಮಕ್ಕಳು ಇದುವರೆಗೆ ಕಲಿತ ಶಾಲೆಯೇ ಇಲ್ಲದಂತಾಗಿ ಅತಂತ್ರರಾಗಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!