ಚಳಿಗಾಲದಲ್ಲಿ ಕಾಡುವ ಒಣ ತ್ವಚೆ ಸಮಸ್ಯೆ; ಇದಕ್ಕೆ ಇಲ್ಲಿದೆ ಪರಿಹಾರ

Skin Care
Spread the love

ನ್ಯೂಸ್ ಆ್ಯರೋ: ಚಳಿಗಾಲ ಶುರುವಾಗಿದೆ. ಬಹುತೇಕ ಮಂದಿಗೆ ಈ ಸೀಸನ್​ ಅಚ್ಚುಮೆಚ್ಚು. ಏಕೆಂದರೆ ಈ ಸಮಯದಲ್ಲಿ ಮನೆಯಲ್ಲಿ ಕಂಬಳಿ ಹೊದಿಕೊಂಡು ಬಿಸಿ, ಬಿಸಿ ಟೀ ಕುಡಿಯುತ್ತಾ, ತಮ್ಮ ನೆಚ್ಚಿನ ಕಾರ್ಯಕ್ರಮಗಳನ್ನು ಟಿವಿಯಲ್ಲಿ ನೋಡುವುದರಲ್ಲಿ ಸಿಗುವ ಆನಂದವೇ ಬೇರೆ. ಹೀಗಾಗಿ ಚಳಿಗಾಲ ಅಂದರೆ ಅನೇಕ ಮಂದಿಗೆ ಇಷ್ಟವಾಗುತ್ತದೆ. ಆದರೆ ಇದೇ ರೀತಿ ಕೆಲ ಮಂದಿಗೆ ಈ ಸೀಸನ್​ ಎಂದರೆ ಕಷ್ಟ. ಏಕೆಂದರೆ ಈ ಸಮಯದಲ್ಲಿ ಚರ್ಮ ಮತ್ತು ಕೂದಲಿನ ಸಮಸ್ಯೆಗಳು ಸಾಕಷ್ಟು ಮಂದಿಯನ್ನು ಕಾಡುತ್ತದೆ.

ಚಳಿಗಾಲದಲ್ಲಿ ಒಣ ತ್ವಚೆ ಸಮಸ್ಯೆಯನ್ನು ಅನೇಕ ಮಂದಿ ಎದುರಿಸುತ್ತಿರುತ್ತಾರೆ. ತಣ್ಣನೆಯ ಗಾಳಿಯು ಚರ್ಮದಿಂದ ತೇವಾಂಶವನ್ನು ತೆಗೆದು ಹಾಕುತ್ತದೆ ಮತ್ತು ಚರ್ಮವನ್ನು ಒಣಗುವಂತೆ ಮಾಡುತ್ತದೆ. ಇದರಿಂದ ಕೆಲವರಿಗೆ ತುರಿಕೆ ಸಮಸ್ಯೆ ಸಹ ಉಂಟಾಗುತ್ತದೆ. ಆದರೆ ಹೆಚ್ಚು ನೀರು ಕುಡಿಯುವ ಮೂಲಕ ಹಾಗೂ ತ್ವಚೆಗೆ ಉತ್ತಮ ರೀತಿಯಲ್ಲಿ ಆರೈಕೆ ಮಾಡುವ ಮೂಲಕ ಈ ಸಮಸ್ಯೆಯನ್ನು ನಿವಾರಿಸಬಹುದು. ಅದರಲ್ಲೂ ಚಳಿಗಾಲದಲ್ಲಿ ಒಣ ತ್ವಚೆ ಸಮಸ್ಯೆ ನಿವಾರಣೆಗೆ ಈ ಕೆಳಗೆ ನೀಡಲಾದ ಒಂದಷ್ಟು ಮನೆಮದ್ದುಗಳನ್ನು ಟ್ರೈ ಮಾಡಿದರೆ ಉತ್ತಮ ಫಲಿತಾಂಶ ಕಾಣಬಹುದು.

ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು:

ಚಳಿಗಾಲದಲ್ಲಿ ಬಿಸಿನೀರಿನಲ್ಲಿ ಸ್ನಾನ ಮಾಡುವುದು ಹಿತವೆನಿಸಬಹುದು. ಆದರೆ ಇದು ನಮ್ಮ ಚರ್ಮದ ನೈಸರ್ಗಿಕ ತೈಲಗಳನ್ನು ತೆಗೆದುಹಾಕುತ್ತವೆ ಮತ್ತು ಚರ್ಮಕ್ಕೆ ಮತ್ತಷ್ಟು ಹಾನಿಯನ್ನುಂಟು ಮಾಡುತ್ತವೆ. ಆದ್ದರಿಂದ ಚಳಿಗಾಲದ ಸೀಸನ್​ನಲ್ಲಿ ಸ್ನಾನ ಮಾಡುವ ಸಮಯವನ್ನು ಕಡಿಮೆ ಮಾಡಿ ಮತ್ತು ಬಿಸಿನೀರಿನ ಬದಲಿಗೆ ಉಗುರು ಬೆಚ್ಚಗಿನ ನೀರನ್ನು ಬಳಸುವುದು ಉತ್ತಮ. ಅಲ್ಲದೇ, ನಿಮ್ಮ ಚರ್ಮಕ್ಕಾಗಿ ಸಾಮಾನ್ಯ ಸೋಪಿನ ಬದಲಿಗೆ ರಾಸಾಯನಿಕಗಳಿಂದ ಮುಕ್ತವಾದ ಸೌಮ್ಯವಾದ ಸೋಪ್ ಅನ್ನು ಬಳಸುವುದು ಮುಖ್ಯವಾಗಿದೆ.

ತೆಂಗಿನ ಎಣ್ಣೆಯ ಬಳಕೆ:

ತೆಂಗಿನ ಎಣ್ಣೆ ಚರ್ಮಕ್ಕೆ ನೈಸರ್ಗಿಕ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಚರ್ಮದಲ್ಲಿ ತೇವಾಂಶವನ್ನು ಉಳಿಸುತ್ತದೆ. ಇದಕ್ಕಾಗಿ ಸ್ನಾನದ ನಂತರ ನಿಮ್ಮ ಚರ್ಮಕ್ಕೆ ತೆಂಗಿನ ಎಣ್ಣೆಯನ್ನು ಹಚ್ಚಬಹುದು. ಅಲ್ಲದೇ ತೆಂಗಿನ ಎಣ್ಣೆಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಒಣ ತ್ವಚೆಗೆ ಕಾರಣವಾಗಿದೆ. ಅಲ್ಲದೇ, ಇದು ನಿಮ್ಮ ಚರ್ಮವನ್ನು ಸೋಂಕುಗಳಿಂದ ರಕ್ಷಿಸುತ್ತದೆ.

ಜೇನುತುಪ್ಪ ಮತ್ತು ಹಾಲಿನ ಮಾಸ್ಕ್​:

ಜೇನುತುಪ್ಪ ಮತ್ತು ಹಾಲು ಎರಡೂ ನಮಗೆ ಅನೇಕ ರೀತಿಯ ಅದ್ಭುತ ಪ್ರಯೋಜನಗಳನ್ನು ಒದಗಿಸುತ್ತದೆ. ಹಾಗಾಗಿ ಇವೆರಡನ್ನು ತ್ವಚೆಯ ಮೇಲೆ ಹಚ್ಚುವುದರಿಂದ ಸತ್ತ ಜೀವಕೋಶಗಳು ನಾಶವಾಗುತ್ತದೆ ಮತ್ತು ಅಗತ್ಯವಾದ ತೇವಾಂಶವನ್ನು ನೀಡುತ್ತದೆ. ಜೊತೆಗೆ ತ್ವಚೆಯನ್ನು ಮೃದುಗೊಳಿಸುತ್ತದೆ. ಜೇನುತುಪ್ಪ ಮತ್ತು ಹಾಲಿನ ಮಿಶ್ರಣವನ್ನು ಚರ್ಮದ ಮೇಲೆ ಮಸಾಜ್ ಮಾಡುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ನಿಮಗೆ ಮೃದುವಾದ ಮತ್ತು ಕಾಂತಿಯುತ ತ್ವಚೆಯನ್ನು ನೀಡುತ್ತದೆ.

ಓಟ್ಮೀಲ್ ಸ್ನಾನ:

ಚರ್ಮದ ಕಿರಿಕಿರಿಯನ್ನು ಶಮನಗೊಳಿಸಲು ಮತ್ತು ತೇವಾಂಶವನ್ನು ಪುನಃಸ್ಥಾಪಿಸಲು ನೀವು ಸ್ನಾನ ಮಾಡಲಿರುವ ಬೆಚ್ಚಗಿನ ನೀರಿಗೆ ಪುಡಿಮಾಡಿದ ಓಟ್ಮೀಲ್ ಸೇರಿಸಿ. ಓಟ್ ಮೀಲ್​ನ ಉರಿಯೂತ ನಿವಾರಕ ಗುಣಲಕ್ಷಣಗಳು ತುರಿಕೆ ಮತ್ತು ಕೆಂಪು ದದ್ದುಗಳನ್ನು ಕಡಿಮೆ ಮಾಡುತ್ತದೆ. ಜೊತೆಗೆ ಶುಷ್ಕತೆಯನ್ನು ನಿವಾರಿಸುತ್ತದೆ. ಅಲ್ಲದೇ ಸ್ನಾನದ ನಂತರ ಚರ್ಮವನ್ನು ಒಣಗಿಸಿ, ಮಾಯಿಶ್ಚರೈಸರ್ ಹಚ್ಚಿ.

ರೋಸ್ ವಾಟರ್ ಮತ್ತು ಗ್ಲಿಸರಿನ್:

ನೈಸರ್ಗಿಕ ಟೋನರ್​ ಅನ್ನು ರಚಿಸಲು ಮತ್ತೊಂದು ಸರಳವಾದ ಮನೆಮದ್ದು ರೋಸ್ ವಾಟರ್ ಮತ್ತು ಗ್ಲಿಸರಿನ್ ಆಗಿದೆ. ಮಲಗುವ ಮುನ್ನ ಇದನ್ನು ನಿಮ್ಮ ತ್ವಚೆಗೆ ಹಚ್ಚುವುದರಿಂದ ರಾತ್ರಿಯಿಡೀ ನಿಮ್ಮ ತ್ವಚೆಗೆ ಅಗತ್ಯವಿರುವ ತೇವಾಂಶ ದೊರೆಯುತ್ತದೆ. ಇದನ್ನು ನಿಮ್ಮ ಕೈ ಮತ್ತು ಕಾಲುಗಳಿಗೆ ಬೇಕಿದ್ದರೂ ಹಚ್ಚಬಹುದು. ಗ್ಲಿಸರಿನ್ ಮತ್ತು ರೋಸ್ ವಾಟರ್ ಇವೆರೆಡರ ಕಾಂಬಿನೇಷನ್ ಚರ್ಮವನ್ನು ಮೃದು ಮತ್ತು ಹೊಳೆಯುವಂತೆ ಮಾಡುತ್ತದೆ.

Leave a Comment

Leave a Reply

Your email address will not be published. Required fields are marked *

error: Content is protected !!