ಗಾಂಧಿ ಜಯಂತಿ: ಜಗದ ಹೃದಯ ಗೆದ್ದ ರಾಷ್ಟ್ರಪಿತ ಮಹಾತ್ಮನ ನಿತ್ಯ ನೆನಪು

Gandhi Jayanti
Spread the love

ನ್ಯೂಸ್ ಆ್ಯರೋ‌: ಅಕ್ಟೋಬರ್ 2. ಭಾರತದ ಪಾಲಿನ ಮಹತ್ವದ ದಿನ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜನ್ಮ ದಿನವಿದು. ಮಹಾತ್ಮ ಗಾಂಧೀಜಿ ಎನ್ನುವುದು ಭಾರತೀಯರ ಮನಸ್ಸಿನಲ್ಲಿ ಅಚ್ಚಳಿಯದೇ ಸದಾ ಶಾಶ್ವತವಾಗಿರುವ ಹೆಸರು. ಇವರೊಂದು ಶಕ್ತಿ, ಬದುಕಿನ ಆದರ್ಶ. ಗಾಂಧೀಜಿ ತನ್ನ ಸತ್ಯ, ಅಹಿಂಸೆಯ ಸಿದ್ಧಾಂತದಿಂದಲೇ ಜಗವನ್ನು ಗೆದ್ದ ಚೇತನ. ಹೀಗಾಗಿ ವಿಶ್ವದಾದ್ಯಂತ ಈ ದಿನವನ್ನು ಆಚರಿಸಲಾಗುತ್ತದೆ. ಗಾಂಧೀಜಿ ಅವರ ಶಾಂತಿ ಮತ್ತು ಅಹಿಂಸಾ ತತ್ವವನ್ನು ಗೌರವಿಸುವ ಸಲುವಾಗಿ ಈ ದಿನವನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನಾಗಿಯೂ ಆಚರಣೆ ಮಾಡಲಾಗುತ್ತದೆ.

ಗಾಂಧಿಯವರ ಜನನ, ಜೀವನ:

ಅಕ್ಟೋಬರ್ 2, 1869ರಲ್ಲಿ ಗುಜರಾತ್ ನ ಪೋರಬಂದರ್ ನಲ್ಲಿ ಗಾಂಧೀಜಿಯವರ ಜನನವಾಯ್ತು. ಇವರ ತಂದೆ ಕರಮಚಂದ್ ಗಾಂಧಿ, ತಾಯಿ ಪುತಲೀಬಾಯಿ. 13 ನೆಯ ವಯಸ್ಸಿನಲ್ಲಿ ಗಾಂಧೀಜಿ ಕಸ್ತೂರಿ ಬಾ ಅವರನ್ನು ವಿವಾಹವಾದರು. ಇವರಿಗೆ ನಾಲ್ಕು ಮಕ್ಕಳು ಜನಿಸಿದರು, ಹರಿಲಾಲ್ ಗಾಂಧಿ, ಮಣಿಲಾಲ್ ಗಾಂಧಿ , ರಾಮದಾಸ್ ಗಾಂಧಿ ಮತ್ತು ದೇವದಾಸ್ ಗಾಂಧಿ. ತನ್ನ 19 ನೇ ವಯಸ್ಸಿನಲ್ಲಿ ಗಾಂಧೀಜಿ ಲಂಡನ್ ನ ಯೂನಿವರ್ಸಿಟಿ ಕಾಲೇಜಿನಿಂದ ಕಾನೂನು ಪದವಿ ಪಡೆದರು.

Mahatma Gandhi
INDIA – JANUARY 02: Mahatma Gandhi In Madras Giving A Speech Before A Group Of Boy Scouts Around 1915. (Photo by Keystone-France/Gamma-Keystone via Getty Images)

ಗಾಂಧಿಜೀಯವರ ಹೋರಾಟ, ಚಳುವಳಿಗಳು:

ಗಾಂಧೀಜಿವರ ತತ್ವಗಳಿಗೆ ಮುಖ್ಯ ಸ್ಫೂರ್ತಿ ಭಗವದ್ಗೀತೆ, ರಷ್ಯಾದ ಪ್ರಸಿದ್ಧ ಸಾಹಿತಿ ಲಿಯೋ ಟಾಲ್‍ಸ್ಟಾಯ್ ಅವರ ಬರಹಗಳು. ಅಮೆರಿಕ ನ್ಸಾಹಿತಿ ಹೆನ್ರಿ ಡೇವಿಡ್ ಥೋರ್ಯೂ ನ ಪ್ರಬಂಧ

ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಗಾಂಧೀಜಿಯವರು ಭಾರತಕ್ಕೆ ಮರಳಿ ಭಾರತೀಯರು ಬ್ರಿಟಿಷರ ಪರವಾಗಿ ಯುದ್ಧದಲ್ಲಿ ಭಾಗವಹಿಸುವಂತೆ ಕೇಳಿಕೊಂಡು ಇದಕ್ಕಾಗಿ ಪ್ರಚಾರ ಮಾಡಿದರು. ಯುದ್ಧದ ನಂತರ ಗಾಂಧೀಜಿಯವರು ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಜೊತೆ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು.

ಉಪವಾಸ ಸತ್ಯಾಗ್ರಹ ಮತ್ತು ಅಸಹಕಾರ ಚಳುವಳಿಗಳ ಮೂಲಕ ಪ್ರಪಂಚದಾದ್ಯಂತ ಖ್ಯಾತಿ ಗಳಿಸಿದರು. ಹಲವಾರು ಬಾರಿ ಬ್ರಿಟಿಷ್ ಸರ್ಕಾರ ಇವರನ್ನು ಬಂಧನದಲ್ಲಿರಿಸಿತು. ಗಾಂಧೀಜಿಯವರ ಯಶಸ್ವಿ ಸತ್ಯಾಗ್ರಹಗಳಲ್ಲಿ ಇನ್ನೊಂದೆಂದರೆ ಸ್ವದೇಶಿ ಚಳುವಳಿ – ಪರದೇಶಗಳಲ್ಲಿ ಉತ್ಪಾದಿತವಾದ ವಸ್ತುಗಳನ್ನು, ಅದರಲ್ಲಿ ಮುಖ್ಯವಾಗಿ ಬ್ರಿಟಿಷ್ ವಸ್ತುಗಳನ್ನು, ವರ್ಜಿಸಿ ಭಾರತದಲ್ಲಿ ಉತ್ಪಾದಿಸಲಾದ ವಸ್ತುಗಳನ್ನು ಮಾತ್ರ ಬಳಸುವಂತೆ ಕೇಳಿಕೊಂಡರು.

ಖಾದಿ ಉತ್ಪಾದಿಸಿ ಖಾದಿ ಬಟ್ಟೆಗಳನ್ನೇ ತೊಡುವ ಸಂಪ್ರದಾಯ ಜನಪ್ರಿಯವಾಯಿತು. ಗಾಂಧೀಜಿಯವರು ಮಹಿಳೆಯರಿಗೂ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವ ಅವಕಾಶ ಮಾಡಿಕೊಟ್ಟರು.

1920ರಂದು ಅಮೃತಸರದಲ್ಲಿ ನಡೆದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ನಂತರ ಗಾಂಧೀಜಿಯವರ ಸ್ವಾತಂತ್ರ್ಯ ಚಳುವಳಿ ವೇಗ ಹೆಚ್ಚಿತು. ಗಾಂಧೀಜಿಯವರ ಜೀವನದ ಪ್ರಸಿದ್ಧ ಕಾರ್ಯಗಳಲ್ಲಿ ಒಂದು ದಂಡಿ ಯಾತ್ರೆ.

ಉಪ್ಪಿನ ಉತ್ಪಾದನೆಗೆ ಬ್ರಿಟಿಷ್ ಸರ್ಕಾರಕ್ಕೆ ಕರ ಕೊಡುವ ಬದಲು ಜನರು ತಾವಾಗಿಯೇ ಉಪ್ಪನ್ನು ಉತ್ಪಾದಿಸಲಿಕ್ಕಾಗಿ ಗಾಂಧೀಜಿ ಮಾರ್ಚ್ 12, 1930 ರಂದು ಸಹಸ್ರಾರು ಜನರೊಡನೆ ಸಮುದ್ರತೀರಕ್ಕೆ ನಡೆದು ಉಪ್ಪನ್ನು ಉತ್ಪಾದಿಸಿದರು. ಮೇ 8, 1933 ರಂದು ಆರಂಭಗೊಂಡು 21 ದಿನಗಳ ಕಾಲಬ್ರಿಟಿಷ್ ಆಡಳಿತವನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸಿದರು.

ಮಾರ್ಚ್ 3, 1939 ರಂದು ಆರಂಭಗೊಂಡು ಇನ್ನೊಂದು ಉಪವಾಸವನ್ನು ನಡೆಸಿದರು. ಗಾಂಧೀಜಿ 1924 ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷ ರಾಗಿದ್ದರು.”ಭಾರತ ಬಿಟ್ಟು ತೊಲಗಿರಿ” ಚಳುವಳಿ 1942 ರಲ್ಲಿ ಆರಂಭವಾಯಿತು. ಆಗಸ್ಟ್ 9, 1942 ರಂದು ಬ್ರಿಟಿಷರು ಗಾಂಧೀಜಿಯನ್ನು ಮತ್ತೆ ಬಂಧಿಸಿ ಎರಡು ವರ್ಷಗಳ ಕಾಲ ಬಂಧನದಲ್ಲಿರಿಸಿದರು.

130136 Mahatma Gandhi

ಗಾಂಧೀಜಿ ಉತ್ತಮ ಮಾತುಗಾರ, ಬರಹಗಾರ:


ಗಾಂಧೀಜಿ ಉತ್ತಮ ಮಾತುಗಾರರು ಹಾಗೂ ಬರಹಗಾರರು ಆಗಿದ್ದರು. ದಕ್ಷಿಣ ಆಫ್ರಿಕಾದಲ್ಲಿದ್ದಾಗ ಇಂಡಿಯನ್ ಒಪೀನಿಯನ್‌ ಪತ್ರಿಕೆ, ಭಾರತಕ್ಕೆ ಮರಳಿದ ನಂತರ ಗುಜರಾತಿ, ಹಿಂದಿ ಮತ್ತು ಆಂಗ್ಲಭಾಷೆಗಳಲ್ಲಿ ಹರಿಜನ್‌ ಪತ್ರಿಕೆ, ಆಂಗ್ಲಭಾಷೆಯಲ್ಲಿ ಯಂಗ್ ಇಂಡಿಯಾ ಪತ್ರಿಕೆ ಮತ್ತು ನವಜೀವನ್‌‌‌ ಎಂಬ ಗುಜರಾತಿ ಮಾಸಪತ್ರಿಕೆಯೂ ಸೇರಿದಂತೆ ಹಲವು ವೃತ್ತಪತ್ರಿಕೆಗಳಿಗೆ ಸಂಪಾದಕರಾಗಿದ್ದರು.

ಆತ್ಮಚರಿತ್ರೆಯಾದ ಆನ್‌ ಆಟೋಬಯೊಗ್ರಫಿ ಆಫ್ ಮೈ ಎಕ್ಸ್‌ಪರಿಮೆಂಟ್ಸ್‌ ವಿತ್‌ ಟ್ರೂತ್‌ ಸೇರಿದಂತೆ, ದಕ್ಷಿಣ ಆಫ್ರಿಕಾದಲ್ಲಿನ ತಮ್ಮ ಹೋರಾಟದ ಕುರಿತಾದ ಸತ್ಯಾಗ್ರಹ ಇನ್‌ ಸೌತ್‌ ಆಫ್ರಿಕಾ ಎಂಬ ಪುಸ್ತಕ, ಹಿಂದ್ ಸ್ವರಾಜ್ ಆರ್‌ ಇಂಡಿಯನ್‌ ಹೋಮ್‌ ರೂಲ್‌ ಎಂಬ ರಾಜಕೀಯ ಕಿರುಹೊತ್ತಿಗೆ ಅವುಗಳಲ್ಲಿ ಸೇರಿದೆ.

ಅಲ್ಪಸಂಖ್ಯಾತರು, ಅಸ್ಪೃಶ್ಯತೆ, ಅಹಿಂಸೆ, ಆರೋಗ್ಯ, ಆಹಾರ, ಇಸ್ಲಾಂ, ಉಪವಾಸ, ಕಸ್ತೂರಬಾ, ಕೈಗಾರಿಕಾ ಸಂಬಂಧಗಳು, ಕ್ರಿಶ್ಚಿಯನ್ನರು, ಖಿಲಾಫತ್ ಚಳವಳಿ, ಜಪಾನ್, ಜನನ ನಿಯಂತ್ರಣ, ಜಲಿಯನ್ ವಾಲಾಬಾಗ್, ಜಾತೀಯತೆ, ದೇವರು, ನೀತಿ, ಬೌದ್ಧಧರ್ಮ, ಮುಷ್ಕರಗಳು, ಮೂಲ ಶಿಕ್ಷಣ, ರಾಷ್ಟ್ರಭಾಷೆ, ವೈದ್ಯ, ಶಿಕ್ಷಣ, ಸರ್ವೋದಯ, ಸತ್ಯಾಗ್ರಹ, ಸಿಖ್ ಧರ್ಮ, ಸ್ವದೇಶೀ, ಸ್ತ್ರೀಯರು, ಸೋಷಿಯಲಿಸಂ ಮುಂತಾಗಿ ನಾನಾ ವಿಷಯಗಳ ಮೇಲೆ ಗಾಂಧೀಜಿ ಬರೆದಿದ್ದಾರೆ.

ಗಾಂಧೀಜಿ ಕುರಿತು ಒಂದಿಷ್ಟು ವಿಚಾರಗಳು:

ಗಾಂಧಿಯವರನ್ನು ಬ್ರಿಟಿಷರು ‘ಅರೆ ನಗ್ನ ಫಕೀರ’ ಎಂದು ಕರೆದರು. ಗಾಂಧಿಯವರ ಡ್ರೆಸ್ ಕೋಡ್ ಹಾಗೆಯೇ ಇತ್ತು. ಅದೇ ಡ್ರೆಸ್ಸಲ್ಲಿ ಗಾಂಧಿ ಇಂಗ್ಲೆಂಡಿಗೆ ದುಂಡು ಮೇಜಿನ ಪರಿಷತ್ತಿಗೆ ಹೋಗಿ ಬಂದರು. ಜಗತ್ತಿನ ಅತೀ ಹೆಚ್ಚು ದೇಶಗಳು ಗಾಂಧಿಯವರ ಫೋಟೊ ಇರುವ ಸ್ಟಾಂಪ್ ಬಿಡುಗಡೆ ಮಾಡಿವೆ. ಈ ದಾಖಲೆಯಲ್ಲಿ ಕೂಡ ಗಾಂಧಿ ಎಲ್ಲರಿಗಿಂತ ಮುಂದೆ ಇದ್ದಾರೆ. ಗಾಂಧಿ ಜೊತೆ ಒಂದೇ ಟೇಬಲ್ ಮೇಲೆ ಊಟ ಮಾಡಲು ಇಂಗ್ಲೆಂಡ್ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಒಪ್ಪಲಿಲ್ಲ. ಗಾಂಧೀಜಿ ಇದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಮಾರ್ಟಿನ್ ಲೂಥರ್ ಕಿಂಗ್ ಅವರು ಗಾಂಧೀಜಿಯವರನ್ನು ತನ್ನ ಐಕಾನ್ ಆಗಿ ಆರಿಸಿಕೊಂಡಿದ್ದರು. ಅವರ ಕಚೇರಿಯಲ್ಲಿ ಅವರ ಎದುರಿನ ಗೋಡೆಯಲ್ಲಿ ಗಾಂಧಿಯ ಫೋಟೊ ಇತ್ತು. ಯಾವ ದಕ್ಷಿಣ ಆಫ್ರಿಕ ಗಾಂಧಿ ಅವರನ್ನು ಕರಿಯ (ಬ್ಲಾಕ್) ಎಂಬ ಕಾರಣಕ್ಕೆ ಟ್ರೈನಿಂದ ಹೊರಗೆ ದೂಡಿ ಅಪಮಾನ ಮಾಡಿತ್ತಾ, ಅದೇ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಮುಂದೆ ಗಾಂಧಿ ಪ್ರೇರಣೆ ಕೊಟ್ಟರು.ಗಾಂಧಿಯವರು ಮದ್ಯಪಾನ ನಿಷೇಧ ಮತ್ತು ಗೋಹತ್ಯೆ ನಿಷೇಧಗಳ ಪರವಾಗಿ ಬಲವಾಗಿ ನಿಂತಿದ್ದರು. ಜಗತ್ತಿನ ಅತ್ಯಂತ ಜನಪ್ರಿಯ ಪತ್ರಿಕೆ ‘ಟೈಮ್ಸ್ ಮ್ಯಾಗಜೀನ್’ ಗಾಂಧಿಯವರನ್ನು ‘ವರ್ಷದ ವ್ಯಕ್ತಿ ಪ್ರಶಸ್ತಿ’ (Times man of the year) ಮೂಲಕ ಗೌರವಿಸಿತು. ಆ ಗೌರವ ಪಡೆದ ಮೊದಲ ಮತ್ತು ಏಕೈಕ ಭಾರತೀಯ ಅಂದರೆ ಅದು ಗಾಂಧಿ.

ವಿದೇಶಗಳಲ್ಲಿ ಗಾಂಧಿ ಹೆಸರಿನ 48 ರಸ್ತೆಗಳು ಇವೆ. ಭಾರತದಲ್ಲಿ 53 ದೊಡ್ಡ ರಸ್ತೆಗಳು ಗಾಂಧಿ ಅವರ ಹೆಸರು ಪಡೆದಿವೆ. ಇನ್ನು ಗಾಂಧಿ ಭವನ್, ಗಾಂಧಿ ಪ್ರತಿಮೆ, ಗಾಂಧಿ ಮೈದಾನ, ಗಾಂಧಿ ಚೌಕ….ಇವುಗಳನ್ನು ಲೆಕ್ಕ ಮಾಡಲು ಸಾಧ್ಯವೇ ಇಲ್ಲ. ಗಾಂಧಿಯವರನ್ನು ಮೊದಲ ಬಾರಿಗೆ ‘ಮಹಾತ್ಮ’ ಎಂದು ಕರೆದದ್ದು ರಾಷ್ಟ್ರಕವಿ ರವೀಂದ್ರನಾಥ್ ಠಾಗೋರ್ ಅವರು. ಗಾಂಧಿಯವರ ಇಂಗ್ಲಿಷ್ ಭಾಷಣದಲ್ಲಿ ಐರಿಷ್ ಅಸೆಂಟ್ ಇತ್ತು. ಅದಕ್ಕೆ ಕಾರಣ ಅವರ ಮೊದಲ ಇಂಗ್ಲಿಷ್ ಟೀಚರ್ ಒಬ್ಬರು ಐರಿಷ್ ಆಗಿದ್ದರು.

Gandi 1 1

“ಗಾಂಧಿ ಕ್ಲಾಸ್‌’ ಹೆಸರು ಬಂದಿದ್ದು ಹೇಗೆ?:

ಗಾಂಧಿ ಕರ್ನಾಟಕವನ್ನು ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ 18 ಬಾರಿ ಭೇಟಿ ಕೊಟ್ಟಿದ್ದರು. ಅದರಲ್ಲಿ ಉಡುಪಿಗೆ ಬಂದದ್ದು ಒಂದು ಬಾರಿ (ಫೆಬ್ರುವರಿ 25, 1934). ಆಗ ಕೃಷ್ಣ ಮಠದ ಬೀದಿಯಲ್ಲಿ ಗಾಂಧಿ ನಡೆದುಕೊಂಡು ಹೋದರೂ ಕೃಷ್ಣ ಮಠದ ಒಳಗೆ ಅವರು ಬರಲಿಲ್ಲ. ಅಜ್ಜರಕಾಡು ಮೈದಾನದಲ್ಲಿ ಗಾಂಧಿಯವರ ಭಾಷಣವನ್ನು 3000 ಮಂದಿ ಸೇರಿ ಕೇಳಿದ್ದರು. ಆ ಕಾರ್ಯಕ್ರಮದ ವ್ಯವಸ್ಥೆ ಮಾಡಿದ್ದು ಕಾರ್ಪೋರೇಶನ್ ಬ್ಯಾಂಕ್ ಸ್ಥಾಪನೆ ಮಾಡಿದ್ದ ಖಾನ್ ಬಹಾದ್ದೂರ್ ಹಾಜಿ ಅಬ್ದುಲ್ಲ ಸಾಹೇಬರು. ಕಾಡಬೆಟ್ಟು ಎಂಬಲ್ಲಿ ಗಾಂಧೀಜಿ ಒಂದು ಖಾದಿ ಭಂಡಾರವನ್ನು ಉದ್ಘಾಟನೆ ಮಾಡಿದ್ದರು. ಗಾಂಧಿ ಅದೇ ಅವಧಿಯಲ್ಲಿ ಮಂಗಳೂರಿಗೆ ಮೂರು ಬಾರಿ ಭೇಟಿ ನೀಡಿದ್ದರು. 1920, 1927, 1934 ಹೀಗೆ ಮೂರು ಭೇಟಿಗಳು. ಗಾಂಧಿಯವರ 1934ರ ಭೇಟಿಯಲ್ಲಿ 10,000 ಮಂದಿ ಸೇರಿದ್ದರು. ಆಗ ಅವರು ಕೆನರಾ ಶಾಲೆಯಲ್ಲಿ ಕೃಷ್ಣ ಮಂದಿರ ಉದ್ಘಾಟನೆ ಮಾಡಿದ್ದರು.

ತನಗೆ ಪತ್ರ ಬರೆಯುತ್ತಿದ್ದ ಪ್ರತಿಯೊಬ್ಬರಿಗೂ ಗಾಂಧೀಜಿ ಅವರು ತಮ್ಮ ಕೈ ಬರಹದಲ್ಲಿ ಉತ್ತರ ಬರೆಯುತ್ತಿದ್ದರು. ಗಾಂಧಿ ತಮ್ಮ ಬದುಕಿನ ಉದ್ದಕ್ಕೂ ರೈಲಿನಲ್ಲಿ ದ್ವಿತೀಯ ದರ್ಜೆಯ ಡಬ್ಬಿಯಲ್ಲಿ ಪ್ರಯಾಣ ಮಾಡಿದ್ದರು. ಮುಂದೆ ಅದನ್ನು ಜನರು `ಗಾಂಧಿ ಕ್ಲಾಸ್’ ಎಂದು ಕರೆದರು.

ಗಾಂಧೀಯವರ ಹತ್ಯೆಯನ್ನು ನಾಥೂರಾಮ್ ಗೋಡ್ಸೆ ಮಾಡಿದಾಗ ಅವರ ಬಾಯಿಂದ ಬಂದ ಮೊದಲ ಶಬ್ದ ಹೇ ರಾಮ್. ಎರಡನೇ ಶಬ್ದ – ಉಸ್ಕೋ ಚೋಡ್ ದೋ!. ಗಾಂಧಿಯವರ ಅಂತಿಮ ಯಾತ್ರೆಯಲ್ಲಿ ಅಂದು ಭಾಗವಹಿಸಿದ ಜನರ ಸಂಖ್ಯೆಯೂ ಮಹಾ ದಾಖಲೆ. ಆಗ ಎಂಟು ಕಿಲೋಮೀಟರ್ ಉದ್ದವಾದ ಅಂತಿಮ ಯಾತ್ರೆಯು ಸಾಗಿ ಬಂದಿತ್ತು.

ರಾಷ್ಟ್ರಪಿತನ ಕೊನೆಯ ದಿನಗಳು:

ಎಲ್ಲಾ ಮಹಾನ್ ಗಣ್ಯರ ಶ್ರಮದ ಫಲ ಕೊನೆಗೂ 1947 ಅಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ದೊರಕಿತು. 1948 ಜನೆವರಿ 30ರಂದು ನಾಥೂ ರಾಂ ವಿನಾಯಕ ಗೋಡ್ಸೆ ಎಂಬಾತ ಪ್ರಾರ್ಥನ ಮಂದಿರಕ್ಕೆ ಹೋಗುವ ಸಂದರ್ಭದಲ್ಲಿ ಗಾಂಧೀಜಿ ಎದೆಗೆ ಗುಂಡಿಕ್ಕಿದ. ಹೇರಾಮ್ ಎನ್ನುತ್ತಾ ನಮ್ಮೆಲ್ಲರ ನೆಚ್ಚಿನ ರಾಷ್ಟ್ರಪಿತ ಕೊನೆಯುಸಿರೆಳೆದರು. ಗಾಂಧೀಜಿ ಇಡೀ ದೇಶಕ್ಕೆ ಒಂದು ಮಹಾನ್ ಶಕ್ತಿಯಾಗಿದ್ದರು. ಭಾರತಕ್ಕೆ ಸ್ವಾತಂತ್ರ್ಯ ತರಲು ಹಾಗೂ ರಾಮರಾಜ್ಯ ಸ್ಥಾಪಿಸಲು ತಮ್ಮ ಜೀವನವನ್ನೇ ತೆತ್ತರು. ಆದರೆ ಇಂದಿಗೂ ದೇಶದ ಪ್ರತಿಯೊಬ್ಬರ ಎದೆಯಲ್ಲೂ ಮಹಾತ್ಮ ಗಾಂಧಿ ಅಮರರಾಗಿದ್ದಾರೆ.

Leave a Comment

Leave a Reply

Your email address will not be published. Required fields are marked *