ಕರಾವಳಿ ಉತ್ಸವದ ಪ್ರಯುಕ್ತ ಹೆಲಿ ಟೂರಿಸಂ; 9 ದಿನಗಳ ಕಾಲ ಬಾನಂಗಳದಿಂದ ಕುಡ್ಲ ವೀಕ್ಷಣೆ ಅವಕಾಶ
ನ್ಯೂಸ್ ಆ್ಯರೋ: ಜಿಲ್ಲೆಯಲ್ಲಿ ಇಂದಿನಿಂದ ಕರಾವಳಿ ಉತ್ಸವ ಆರಂಭವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹೆಲಿಟೂರಿಸಂ ಆಯೋಜಿಸಿದೆ. ಈ ಮೂಲಕ ಕುಡ್ಲದ ಸೌಂದರ್ಯವನ್ನು ಬಾನಂಗಳದಿಂದ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.
ನಗರದಲ್ಲಿ ಇಂದಿನಿಂದ ಹೆಲಿಟೂರಿಸಂಗೆ ಚಾಲನೆ ದೊರಕಿದೆ. ಇಂದಿನಿಂದ 9 ದಿನಗಳ ಕಾಲ ಇರುವ ಈ ಹೆಲಿಟೂರಿಸಂ ನಗರದ ಸೌಂದರ್ಯವನ್ನು ಬಾನಂಗಳದಿಂದ ನೋಡುವ ಅವಕಾಶವನ್ನು ಒದಗಿಸುತ್ತಿದೆ. ತುಂಬಿ ಏರ್ ಟ್ಯಾಕ್ಸ್ ಕಂಪೆನಿಯ ಸಹಯೋಗದೊಂದಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಈ ಹೆಲಿಟೂರಿಸಂ ಅನ್ನು ಆಯೋಜಿಸಿದೆ.
ಸ್ವತಃ ದ. ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಎಸ್ಪಿ ಯತೀಶ್ ಸೇರಿದಂತೆ ಅಧಿಕಾರಿಗಳು ದ. ಕ ಜಿಲ್ಲೆಯ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಹಾಗೂ ಮಹಾಲಿಂಗ ನಾಯ್ಕರೊಂದಿಗೆ ಹೆಲಿಕಾಪ್ಟರ್‌ನಲ್ಲಿ ರೌಂಡ್ ಹೊಡೆದು ನಗರದ ಸೌಂದರ್ಯವನ್ನು ಮೇಲಿನಿಂದ ಕಣ್ತುಂಬಿಕೊಂಡರು.
ಬಾನಂಗಳದಲ್ಲಿ ಕುಡ್ಲದ ಸೌಂದರ್ಯ ವೀಕ್ಷಿಸಲು ಬಯಸುವವರಿಗೆ ಡಿಸೆಂಬರ್ 21 ರಿಂದ 31ರ ವರೆಗೆ ಹೆಲಿಕಾಪ್ಟರ್ ಪ್ರಯಾಣಕ್ಕೆ ಅವಕಾಶವಿದೆ. ಒಂದು ರೌಂಡ್ 6-7 ನಿಮಿಷಗಳ ಕಾಲ ತೆಗೆದುಕೊಳ್ಳುತ್ತದೆ. ಹೆಲಿಕಾಪ್ಟರ್‌ನಲ್ಲಿ ರೌಂಡ್ ಹೊಡೆದು ಮಂಗಳೂರು ನಗರ, ನೇತ್ರಾವತಿ ನದಿ ತೀರ, ಪಣಂಬೂರು ಬೀಚ್ ಸೌಂದರ್ಯವನ್ನು ವೀಕ್ಷಿಸಬಹುದಾಗಿದೆ. ಪ್ರತೀ ರೌಂಡ್‌ನಲ್ಲಿ ಆರು ಮಂದಿಗೆ ಹೆಲಿಕಾಪ್ಟರ್ ಸುತ್ತಾಟಕ್ಕೆ ಅವಕಾಶವಿದೆ. ಇದಕ್ಕೆ ಕೇವಲ 4,500 ರೂ. ಪಾವತಿಸಿದರೆ ಸಾಕು, ಯಾರು ಬೇಕಾದರೂ ಹೆಲಿಕಾಪ್ಟರ್ ಪ್ರಯಾಣ ಮಾಡಬಹುದಾಗಿದೆ. ಮಂಗಳೂರಿನ ನದಿ ಸಮುದ್ರವನ್ನು ಮೇಲಿನಿಂದಲೇ ನೋಡಬಹುದಾಗಿದೆ.
ಈ ಬಗ್ಗೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ‘ಹೆಲಿಟೂರಿಸಂ ಸಕ್ಸಸ್ ಆದಲ್ಲಿ ಮುಂದಕ್ಕೆ ಇದನ್ನು ಮತ್ತಷ್ಟು ವಿಸ್ತರಿಸುವ ಚಿಂತನೆ ಜಿಲ್ಲಾಡಳಿತದಲ್ಲಿದೆ. ಈ ಮೂಲಕ ಕೊಲ್ಲೂರು ಸೇರಿದಂತೆ ಬೇಲೂರು-ಹಳೇಬೀಡು, ಬೇಕಲ್ ಫೋರ್ಟ್‌ಗಳಿಗೂ ಹೆಲಿಟೂರಿಸಂ ಅಳವಡಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ’ ಎಂದರು.
ಈ ಬಗ್ಗೆ ಮಾತನಾಡಿದ ತುಂಬಿ ಏರ್ ಟ್ಯಾಕ್ಸ್ನ ಪ್ರತಿನಿಧಿ ಸುಹೈಲ್ ಅವರು, ‘ಇವತ್ತಿನಿಂದ ಹೊಸ ವರ್ಷದವರೆಗೆ ಹೆಲಿ ಟೂರಿಸಂ ಇರಲಿದೆ. 6 ರಿಂದ 7 ನಿಮಿಷದ ರೈಡ್ಗೆ ರೂ. 4500 ದರ ನಿಗದಿಪಡಿಸಲಾಗಿದೆ’ ಎಂದು ಹೇಳಿದರು.
ಇನ್ನು ಕರಾವಳಿ ಉತ್ಸವದ ಪ್ರಯುಕ್ತ ಮಂಗಳೂರಿನ ಮೇರಿಹಿಲ್ನಲ್ಲಿ ಉದ್ಘಾಟನೆಗೊಂಡ ಹೆಲಿ ಟೂರಿಸಂ ಅಡ್ಯಾರ್ನ ಸಹ್ಯಾದ್ರಿ ಗ್ರೌಂಡ್ಗೆ ಶಿಫ್ಟ್ ಆಗುವ ಸಾಧ್ಯತೆ ಇದೆ. ಮೇರಿಹಿಲ್ ಮಂಗಳೂರು ಅಂತಾರಾಷ್ಟ್ರೀಯ ವಿಮಾನದ ಬಳಿ ಇರುವುದರಿಂದ ವಿಮಾನ ಯಾನಕ್ಕೆ ತಾಂತ್ರಿಕ ಸಮಸ್ಯೆ ಆಗುವುದರಿಂದ ಸದ್ಯ ಹೆಲಿ ಟೂರಿಸಂ ಪ್ರಯಾಣ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಇದನ್ನು ಅಡ್ಯಾರ್ನ ಸಹ್ಯಾದ್ರಿ ಗ್ರೌಂಡ್ಗೆ ಸ್ಥಳಾಂತರಿಸಲು ಮಾಡಲು ಚಿಂತಿಸಲಾಗಿದೆ.
Leave a Comment