ಕ್ರೀಡೆಯಿಂದ ನಿವೃತ್ತಿ ಘೋಷಿಸಿದ ಪ್ರಖ್ಯಾತ ಜಿಮ್ನಾಸ್ಟ್: ಭಾವನಾತ್ಮಕ ಪೋಸ್ಟ್‌ನಲ್ಲಿ ಏನಿದೆ ನೋಡಿ
ನ್ಯೂಸ್ ಆ್ಯರೋ: ತನ್ನ ಅಸಾಧಾರಣ ಪ್ರದರ್ಶನದ ಮೂಲಕ ದೇಶದ ಗಮನಸೆಳೆದಿದ್ದ ಭಾರತದ ಪ್ರಖ್ಯಾತ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಸೋಮವಾರ ಕ್ರೀಡೆಯಿಂದ ನಿವೃತ್ತಿ ಘೋಷಣೆ ಮಾಡಿದ್ದಾರೆ. 31 ವರ್ಷದ ಅಥ್ಲೀಟ್ ಭಾವನಾತ್ಮಕ ಸುದ್ದಿಯನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಬಹಿರಂಗ ಮಾಡಿದ್ದಾರೆ. ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದ ಮತ್ತು ಭಾರತೀಯ ಜಿಮ್ನಾಸ್ಟಿಕ್ಸ್ ಅನ್ನು ಜಾಗತಿಕ ಭೂಪಟದಲ್ಲಿ ಇರಿಸಿದ ಸಾಹಸದೊಂದಿಗೆ ಅವರು ಕ್ರೀಡೆಗೆ ವಿದಾಯ ಹೇಳಿದ್ದಾರೆ.
“ಮ್ಯಾಟ್‌ನಿಂದ ಹೊರಹೋಗುತ್ತಿದ್ದೇನೆ! ನನ್ನ ಪ್ರಯಾಣದ ಭಾಗವಾಗಿರುವ ಎಲ್ಲರಿಗೂ ಧನ್ಯವಾದಗಳು. ಮುಂದಿನ ಅಧ್ಯಾಯಕ್ಕೆ ಕಾತರಳಾಗಿದ್ದೇನೆ” ಅವರು ತಮ್ಮ ನಿವೃತ್ತಿಯ ಪ್ರಕಟಣೆಯ ಜೊತೆಗೆ Instagram ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ತನ್ನ ಭಾವುಕ ಪೋಸ್ಟ್‌ನಲ್ಲಿ, ದೀಪಾ ಕನಸುಗಳನ್ನು ಹೊಂದಿರುವ ಚಿಕ್ಕ ಹುಡುಗಿಯಿಂದ ಪ್ರಸಿದ್ಧ ಕ್ರೀಡಾಪಟುವಿನವರೆಗೆ ತನ್ನ ಪ್ರಯಾಣವನ್ನು ತಿಳಿಸಿಕೊಟ್ಟಿದ್ದಾರೆ. ಐದು ವರ್ಷದ ದೀಪಾಗೆ ತನ್ನ ಚಪ್ಪಟೆ ಪಾದದಿಂದಾಗಿ ಜಿಮ್ನಾಸ್ಟ್ ಆಗಲು ಸಾಧ್ಯವಿಲ್ಲ ಎಂದು ಹೇಳಿದ್ದು ನನಗೆ ಇನ್ನೂ ನೆನಪಿದೆ” ಎಂದು ಅವರು ಬರೆದಿದ್ದಾರೆ. “ಆದರೆ ಇಂದು ನನ್ನ ಸಾಧನೆಗಳನ್ನು ನೋಡಿ ಹೆಮ್ಮೆಪಡುತ್ತೇನೆ” ಎಂದು ಅವರು ತಿಳಿಸಿದ್ದಾರೆ.
ಕ್ರೀಡಾ ಜೀವನದ ಆರಂಭದಲ್ಲಿ ಎದುರಿಸಿದ ಹಿನ್ನಡೆಯನ್ನು ಮೀರಿ ದೀಪಾ ನಿರೀಕ್ಷೆಗೂ ಮೀರಿ ಪ್ರದರ್ಶನ ತೋರಿ ಭಾರತದ ಪ್ರಮುಖ ಕ್ರೀಡಾಪಟುಗಳಲ್ಲಿ ಒಂದಾದರು. ಕ್ರಿಕೆಟ್, ಬ್ಯಾಡ್ಮಿಂಟನ್ ಹಾಗೂ ಕಬಡ್ಡಿಯಂಥ ಜನಪ್ರಿಯ ಕ್ರೀಡೆಗಳ ನಡುವೆ ಹೆಚ್ಚು ಜನಪ್ರಿಯವಲ್ಲದ ಜಿಮ್ನಾಸ್ಟಿಕ್ಸ್‌ನಲ್ಲಿ ದೇಶವೇ ವಿಸ್ಮಯಗೊಳ್ಳುವಂಥ ಪ್ರದರ್ಶನ ತೋರಿದ್ದರು. ದೀಪಾ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಮಹಿಳಾ ಜಿಮ್ನಾಸ್ಟ್ ಎಂಬ ಇತಿಹಾಸ ನಿರ್ಮಿಸಿದರು.
ತ್ರಿಪುರಾದ ಅಗರ್ತಲಾದಲ್ಲಿ ಜನಿಸಿದ ಕರ್ಮಾಕರ್ ಅವರು ತಮ್ಮ ಅಲ ಮನೋಭಾವ ಹಾಗೂ ಅದಮ್ಯ ಉತ್ಸಾಹದ ಕಾರಣಕ್ಕಾಗಿಯೇ ಗುರುತಿಸಲ್ಪಟ್ಟಿದ್ದಾರೆ. ಜಿಮ್ನಾಸ್ಟಿಕ್ಸ್‌ನಲ್ಲಿ ಗಮನಾರ್ಹ ಅನನುಕೂಲತೆಯಾಗಿ ಕಂಡುಬಂದ ಆಕೆಯ ಚಪ್ಪಟೆ ಪಾದಗಳಿಂದಾಗಿ ಆರಂಭಿಕ ಹಿನ್ನಡೆಯ ಹೊರತಾಗಿಯೂ, ದೀಪಾ ಅವರ ಪರಿಶ್ರಮದ ಮುಂದೆ ಇದು ಮಂಕಾಯಿತು. ಆಕೆಯ ತರಬೇತುದಾರರಾದ ಬಿಶ್ವೇಶ್ವರ್ ನಂದಿ ಅವರ ಮಾರ್ಗದರ್ಶನದಲ್ಲಿ, ಅವರು ತಮ್ಮ ಸ್ಥಿತಿಯನ್ನು ಸರಿಪಡಿಸಲು ಮತ್ತು ಅವರ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಅವಿರತವಾಗಿ ಶ್ರಮಿಸಿದರು.
Leave a Comment