ಮೆಟ್ರೋ ಪ್ರಯಾಣಿಕರಿಗೆ ಗುಡ್ನ್ಯೂಸ್; ಸಿಎಂ ಸಿದ್ದು ನೀಡಿದ ಮಾಹಿತಿಯಲ್ಲಿ ಏನಿದೆ?

ನ್ಯೂಸ್ ಆ್ಯರೋ: ಇದೇ ಫೆಬ್ರುವರಿ 9 ರಂದು ಸಿಲಿಕಾನ್ ಸಿಟಿಯ ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿದೆ. ದರ ಹೆಚ್ಚಳದಿಂದ ಬೇಸರಗೊಂಡ ಬೆಂಗಳೂರಿನ ಜನ ಮೆಟ್ರೋದಲ್ಲಿ ಪ್ರಯಾಣಿಸುವುದನ್ನೇ ಕಡಿಮೆ ಮಾಡಿದ್ದಾರೆ.
ಅನಿವಾರ್ಯ ಇದ್ದವರು ಮಾತ್ರ ದುಪ್ಪಟ್ಟು ಹಣ ನೀಡಿ ಪ್ರಯಾಣಿಸುತ್ತಿದ್ದಾರೆ. ಸಾರ್ವಜನಿಕರ ತೀವ್ರ ಆಕ್ರೋಶ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಧಾನಕರ ಸುದ್ದಿ ತಿಳಿಸಿದ್ದಾರೆ.
ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿರುವ ಸಿದ್ದರಾಮಯ್ಯ, ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಇತ್ತೀಚೆಗೆ ಪರಿಷ್ಕರಿಸಿರುವ ಪ್ರಯಾಣ ದರ ಏರಿಕೆ ಹಲವು ರೀತಿಯ ವೈಪರೀತ್ಯಗಳಿಂದ ಕೂಡಿದ್ದು, ಕೆಲವು ಕಡೆಗಳಲ್ಲಿ ಪ್ರಯಾಣ ದರ ದುಪ್ಪಟ್ಟಾಗಿರುವುದನ್ನು ಗಮನಿಸಿದ್ದೇನೆ. ಇದರ ವಿರುದ್ಧ ವ್ಯಕ್ತವಾದ ಸಾರ್ವಜನಿಕರ ವಿರೋಧವನ್ನು ಪರಿಗಣಿಸಿ ಎಲ್ಲೆಲ್ಲಿ ಅಸಹಜ ರೀತಿಯಲ್ಲಿ ದರ ಏರಿಕೆಯಾಗಿದೆಯೋ ಅಂತಹ ಕಡೆಗಳಲ್ಲಿ ಪ್ರಯಾಣ ದರ ಇಳಿಸುವಂತೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಿದ್ದೇನೆ.
ಮೆಟ್ರೊ ರೈಲು ವ್ಯವಸ್ಥೆ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಬೇಕಾಗಿರುವ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿರುವ ಕಾರಣ ಪ್ರಯಾಣ ದರ ಪರಿಷ್ಕರಣೆ ಅನಿವಾರ್ಯವಾಗಿತ್ತು ಎನ್ನುವುದು ನಿಜವಾದರೂ ಅಂತಿಮವಾಗಿ ಪ್ರಯಾಣಿಕರ ಹಿತರಕ್ಷಣೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯ ಎನ್ನುವುದನ್ನು ಬಿಎಂಆರ್‌ಸಿಎಲ್ ಗಮನಕ್ಕೆ ತಂದಿದ್ದೇನೆ ಎಂದು ತಿಳಿಸಿದ್ದಾರೆ.
Leave a Comment