ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್; ಪ್ರತಿಷ್ಠಿತ ವಿವಿ ಅಧ್ಯಯನದಿಂದ ಸಿಕ್ಕಿತ್ತು ಸಿಹಿ ಸುದ್ದಿ
ನ್ಯೂಸ್ ಆ್ಯರೋ: ಅಡಿಕೆ ಕ್ಯಾನ್ಸರ್ ಕಾರಕ ಎಂಬ ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ (ಐಎಆರ್ಸಿ) ಮಾಹಿತಿ ಆಧಾರಿತ ವಿಶ್ವ ಅರೋಗ್ಯ ಸಂಸ್ಥೆಯ ವರದಿ, ಮುಖ್ಯವಾಗಿ ಕರ್ನಾಟಕ ಕರಾವಳಿ ಹಾಗೂ ಮಲೆನಾಡು ಭಾಗದ ಅಡಿಕೆ ಬೆಳೆಗಾರರಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು. ಆದರೆ, ಇದೀಗ ರಾಜ್ಯದ ಪ್ರತಿಷ್ಠಿತ ವಿವಿಯೊಂದರ ಅಧ್ಯಯನ ವರದಿ ಭಿನ್ನವಾದುದನ್ನೇ ಹೇಳಿದೆ. ನಿಟ್ಟೆ ವಿವಿಯ ವಿಜ್ಞಾನಿ ಪ್ರ. ಇಡ್ಯಾ ಕರುಣಾಸಾಗರ್ ಮತ್ತವರ ತಂಡ ಮಹತ್ವದ ಸಂಶೋಧನೆ ನಡೆಸಿದ್ದು, ಅಡಿಕೆ ಕ್ಯಾನ್ಸರ್ ಕಾರಕವಲ್ಲ. ಬದಲಿಗೆ ಕ್ಯಾನ್ಸರ್ ಪ್ರತಿಬಂಧಕ ಅಂಶ ಅಡಿಕೆಯಲ್ಲಿದೆ ಎಂದು ತಿಳಿಸಿದೆ.
ಅಡಿಕೆ ರಸ ಕ್ಯಾನ್ಸರ್ ಕಣಗಳ ಬೆಳವಣಿಗೆಯನ್ನು ಪ್ರತಿಬಂಧಿಸುತ್ತದೆ ಎಂಬುದನ್ನು ಪತ್ತೆ ಮಾಡಿರುವುದಾಗಿ ನಿಟ್ಟೆ ವಿವಿಯ ವಿಜ್ಞಾನಿಗಳ ತಂಡ ಪ್ರತಿಪಾದಿಸಿದೆ. ಅಡಿಕೆಯ ಬಳಕೆಯಿಂದ ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ ಎಂದಿದೆ. ನಿಟ್ಟೆ ವಿವಿಯ ವಿಜ್ಞಾನಿಗಳ ತಂಡದ ಸಂಶೋಧನೆಯನ್ನು ಪರಿಗಣಿಸಿ ಅಡಿಕೆಯ ಬಗ್ಗೆ ಸಮಗ್ರ ಅಧ್ಯಯನವಾಗಬೇಕು ಎಂದು ಕ್ಯಾಂಪ್ಕೋ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಅಡಿಕೆಯನ್ನು ಕ್ಯಾನ್ಸರ್ ಕಾರಕ ಎಂದು ಐಎಆರ್ಸಿ ಅಧ್ಯಯನ ವರದಿ ಏಕಾಏಕಿ ವರ್ಗೀಕರಿಸಿತ್ತು. ಪಾನ್, ಪಾನ್ ಮಸಾಲಾ, ಗುಟ್ಕಾ ಇತ್ಯಾದಿ ಸೇವಿಸುವುದರಿಂದ ಉಂಟಾಗುವ ವಿಷಯವನ್ನು ಮುಖ್ಯವಾಗಿಟ್ಟುಕೊಂಡು ಅಧ್ಯಯನ ನಡೆಸಿ ವರದಿ ಸಲ್ಲಿಸಲಾಗಿತ್ತು. ಆದರೆ, ಇದು ಪರಿಪೂರ್ಣ ಅಧ್ಯಯನ ಅಲ್ಲ ಎಂದು ಕ್ಯಾಂಪ್ಕೋ ವಾದಿಸಿತ್ತು.
ಬಹುರಾಜ್ಯ ಸಹಕಾರಿ ಸಂಸ್ಥೆಯಾಗಿರುವ ಕ್ಯಾಂಪ್ಕೋ, ಭಾರತದಾದ್ಯಂತ ಸಂಗ್ರಹಣೆ ಮತ್ತು ಮಾರುಕಟ್ಟೆ ಜಾಲವನ್ನು ಹೊಂದಿದೆ. ಅಡಿಕೆ, ಕೊಕ್ಕೊ, ರಬ್ಬರ್ ಮತ್ತು ಕಾಳುಮೆಣಸು ಮಾರಾಟ ಮತ್ತು ಸಂಸ್ಕರಣೆ ಮಾಡುತ್ತಿದೆ. ಹೀಗಾಗಿ ಕ್ಯಾಂಪ್ಕೋದ ಒತ್ತಡ ಹಿನ್ನಲೆ ಇದೀಗ ಕೇಂದ್ರ ಸರ್ಕಾರದಿಂದಲೂ ಅಡಿಕೆಯ ಮರು ಸಂಶೋಧನೆಗೆ ಒಪ್ಪಿಗೆ ದೊರೆತಿದೆ ಎನ್ನಲಾಗಿದೆ.
ಇತ್ತ ಐಸಿಎಎಆರ್ ವರದಿ ಸತ್ಯಕ್ಕೆ ದೂರವಾದ ವಿಚಾರ. ಹೀಗಾಗಿ ಈ ಬಗ್ಗೆ ಅಡಿಕೆ ಬೆಳೆಗಾರರಿಗೆ ಆತಂಕ ಬೇಡ ಎಂದು ಕ್ಯಾಂಪ್ಕೋ ಅಭಯ ನೀಡಿದೆ. ನಾವು ನಿಟ್ಟೆ ವಿವಿ ಜೊತೆ ನಡೆಸಿದ ಸಂಶೋಧನೆಯಲ್ಲಿ ಅಡಿಕೆ ಕ್ಯಾನ್ಸರ್ ಕಾರಕವಲ್ಲ ಎಂಬ ವರದಿ ಬಂದಿದೆ. ಕ್ಯಾನ್ಸರ್ ಗುಣ ಮಾಡುವ ಶಕ್ತಿ ಅಡಿಕೆಯಲ್ಲಿದೆ ಎಂದು ಮಂಗಳೂರಿನಲ್ಲಿ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದ್ದಾರೆ.
ಅಡಿಕೆಯ ಕುರಿತು ಹೆಚ್ಚಿನ ಸಂಶೋಧನೆಗೆ ಕಾಸರಗೋಡಿನಲ್ಲಿರುವ ಐಸಿಎಆರ್ನ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ ಕೂಡ ಪ್ರಸ್ತಾವ ಸಲ್ಲಿಸಿತ್ತು. ಇದಕ್ಕೆ ಕೇಂದ್ರ ಕೃಷಿ ಸಚಿವಾಲಯದಿಂದ ತಾತ್ವಿಕ ಒಪ್ಪಿಗೆ ದೊರೆತಿದೆ. ಮೂರು ವರ್ಷಗಳ ಕಾಲ ನಡೆಯುವ ಈ ಅಧ್ಯಯನಕ್ಕೆ 9.90 ಕೋಟಿ ರೂ. ವೆಚ್ಚವಾಗಲಿದೆ. ಅಧ್ಯಯನಕ್ಕೆ ಅನುದಾನ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಹಣಕಾಸಿನ ನೆರವು ಲಭ್ಯವಾಗುತ್ತಿದ್ದಂತೆಯೇ ಸಿಪಿಸಿಆರ್‌ಐ ಉಸ್ತುವಾರಿಯಲ್ಲೇ ಅಧ್ಯಯನ ನಡೆಯಲಿದೆ.
Leave a Comment