ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಕೇಸ್; ಜೈಲಿಂದ ಹೊರ ಬರುತ್ತಿದ್ದಂತೆ ಕಿಡಿಕಾರಿದ ಮಾಜಿ ಸಚಿವ ನಾಗೇಂದ್ರ
ನ್ಯೂಸ್ ಆ್ಯರೋ: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಮಾಜಿ ಸಚಿವ ನಾಗೇಂದ್ರ ಅವರು ಪರಪ್ಪನ ಅಗ್ರಹಾರ ಜೈಲಿಂದ ಬುಧವಾರ ಬಿಡುಗಡೆಯಾಗಿದ್ದಾರೆ. ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ನಾಗೇಂದ್ರ ಅವರಿಗೆ ನ್ಯಾಯಾಲಯದಿಂದ ಸೋಮವಾರ ಜಾಮೀನು ದೊರೆತಿತ್ತು. ನ್ಯಾಯಾಲಯದ ಜಾಮೀನಿನ ಆದೇಶ ಪ್ರತಿ ನಿನ್ನೆ ಜೈಲಿಗೆ ತಲುಪದ ಕಾರಣ ಇಂದು ನಾಗೇಂದ್ರ ಅವರನ್ನು ಜೈಲಿನ ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ. ಈ ನಡುವೆ ನೆಚ್ಚಿನ ನಾಯಕ ಜೈಲಿನಿಂದ ಹೊರಬರುತ್ತಿದ್ದಂತೆ ಬೆಂಬಲಿಗರು ಸಂಭ್ರಮಿಸಿದರು. ನಾಯಕನನ್ನು ಮೇಲೆತ್ತಿ ಕಾಣಿದಾಡಿದ್ದು, ಹೂವಿನ ಹಾರ ಹಾಕಿ, ಬೂದಗುಂಬಳ ಹೊಡೆದು ಸಂಭ್ರಮಾಚರಿಸಿದರು.
ಜೈಲಿನಿಂದ ಹೊರಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಾಗೇಂದ್ರ ಅವರು, ವಾಲ್ಮೀಕಿ ನಿಗಮ ಹಗರಣದಲ್ಲಿ ನನ್ನಿಂದ ಯಾವುದೇ ತಪ್ಪು ನಡೆದಿಲ್ಲ, ಆದರೂ ನನ್ನನ್ನು ಬಂಧಿಸಿ ಇಡಿ ಅಧಿಕಾರಿಗಳು 3 ತಿಂಗಳ ಕಾಲ ಕಿರುಕುಳ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಹೆಸರು ಹೇಳುವಂತೆ ಕಿರುಕುಳ ನೀಡಿದ್ದಾರೆ. ಬಿಜೆಪಿಯ ಹಿರಿಯ ನಾಯಕರ ಒತ್ತಡದಿಂದ ಹೀಗೆ ಮಾಡಿದ್ದಾರೆಂದು ಆರೋಪಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ನನ್ನ ಪಾತ್ರ ಇಲ್ಲ. ಎಸ್ಐಟಿ ನನ್ನ ಪಾತ್ರ ಇಲ್ಲ ಎಂದು ಹೇಳಿದ್ದರೂ ಕೇಂದ್ರ, ಬಿಜೆಪಿಯಿಂದ ಷಡ್ಯಂತ್ರ ರೂಪಿಸಿದೆ. ಇದು ಬ್ಯಾಂಕ್ ಮತ್ತು ಬ್ಯಾಂಕ್ ಅಧಿಕಾರಿಗಳಿಂದ ಆಗಿರುವ ಹಗರಣ. ವಿನಾಕಾರಣ ನಮ್ಮ ಸರ್ಕಾರವನ್ನು ಸಿಲುಕಿಸುವ ಕೆಲಸ ಮಾಡಲಾಗಿದೆ. ಕೇಂದ್ರ ಹಾಗೂ ಬಿಜೆಪಿಯಿಂದ ನಮ್ಮ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸುತ್ತಿದೆ. ಕೇಂದ್ರದ ಯಾವುದೇ ಬೆದರಿಕೆಗಳಿಗೆ ಕಾಂಗ್ರೆಸ್ ಹೆದರುವುದಿಲ್ಲ ಎಂದು ಹೇಳಿದರು.
ಹಣ ವರ್ಗಾವಣೆ ಮಾಡಲು ನನ್ನಿಂದ ಯಾವುದೇ ಶಿಫಾರಸು ಆಗಿಲ್ಲ. ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಈ ರೀತಿ ಮಾಡಿದ್ದಾರೆ. ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇದೆ, ಈಗ ಹೊರ ಬಂದಿದ್ದೇನೆ. ಎಸ್ಐಟಿ ಅಧಿಕಾರಿಗಳು ಕೂಡ ಯಾವ ಇಡಿ, ಸಿಬಿಐಗೆ ಕಡಿಮೆ ಇಲ್ಲ. ಇಡಿ ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದರು.
Leave a Comment