ಟೀಂ ಇಂಡಿಯಾಕ್ಕೆ ಬೌಲಿಂಗ್ ಕೋಚ್ ಹುದ್ದೆಗೆ ಹೊಸ ಹೆಸರು – ಗಂಭೀರ್ ಅವರ ಕೋಚಿಂಗ್ ಟೀಂ ಸೇರಲಿದ್ದಾರೆ ಈ ವಿದೇಶಿ ವೇಗಿ…!?
ನ್ಯೂಸ್ ಆ್ಯರೋ : ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ಗೌತಮ್ ಗಂಭೀರ್ ಆಯ್ಕೆಯಾಗುವುದರೊಂದಿಗೆ ಉಳಿದ ವಿಭಾಗದ ಕೋಚ್‌ಗಳ ಬಗ್ಗೆ ಕುತೂಹಲ ಆರಂಭವಾಗಿದೆ. ಇತ್ತೀಚೆಗೆ ಬೌಲಿಂಗ್ ಕೋಚ್ ಆಗಿ ಗೌತಮ್ ಆಪ್ತ, ರಾಜ್ಯದ ವಿನಯ್ ಕುಮಾರ್ ಆಯ್ಕೆಯಾಗಲಿದ್ದಾರೆಂದು ಹೇಳಲಾಗಿತ್ತು. ಆದರೆ ಇದೀಗ ಅವರ ಆಯ್ಕೆಯನ್ನು ಬಿಸಿಸಿಐ ವಿರೋಧಿಸಿದೆ ಎನ್ನಲಾಗಿದೆ.
ಬೌಲಿಂಗ್ ಕೋಚ್ ಸ್ಥಾನಕ್ಕೆ ಭಾರತ ತಂಡದ ಖ್ಯಾತ ಮಾಜಿ ವೇಗಿ ಜಹೀರ್ ಖಾನ್, ಇನ್ನೊಬ್ಬ ವೇಗಿ ತಮಿಳುನಾಡಿನ ಲಕ್ಷ್ಮೀಪತಿ ಬಾಲಾಜಿ ಕೂಡ ಪೈಪೋಟಿಯಲ್ಲಿದ್ದಾರೆ ಎಂದು ಮೂಲಗಳು ಹೇಳಿವೆ. ಇದುವರೆಗೆ ಬೌಲಿಂಗ್ ಕೋಚ್ ಆಗಿದ್ದ ಪರಾಸ್ ಮ್ಹಾಂಬ್ರೆ ಸ್ಥಾನಕ್ಕೆ ಯಾರು ಬರಲಿದ್ದಾರೆ ಎಂಬ ಕುತೂಹಲಗಳ ಮಧ್ಯೆ ಗಂಭೀರ್ ಹೊಸ ಹೆಸರೊಂದನ್ನು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಈ ಮೊದಲು ಲಕ್ನೋ ತಂಡದ ಜೊತೆ ತನ್ನೊಂದಿಗೆ ಕೆಲಸ ಮಾಡಿದ್ದ ದಕ್ಷಿಣ ಆಫ್ರಿಕಾದ ಮಾಜಿ ಬೌಲರ್ ಮೋರ್ನೆ ಮೊರ್ಕೆಲ್ (Morne Morkel) ಅವರನ್ನು ಗೌತಮ್ ಗಂಭೀರ್ ಶಿಫಾರಸ್ಸು ಮಾಡಿದ್ದಾರೆ ಎನ್ನಲಾಗುತ್ತಿದೆ.
ಮೊರ್ಕೆಲ್ ಅವರು ಕಳೆದ ವರ್ಷ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ನಲ್ಲಿ ಪಾಕಿಸ್ತಾನ ತಂಡದ ತರಬೇತುದಾರರಾಗಿದ್ದರು. ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಯೊಂದಿಗಿನ ಒಪ್ಪಂದದ ಅವಧಿ ಮುಗಿಯುವ ಮೊದಲೇ ಅಲ್ಲಿ ಕೆಲಸ ತೊರೆದಿದ್ದರು.
ಮೊರ್ಕೆಲ್ ಅವರು ದಕ್ಷಿಣ ಆಫ್ರಿಕಾ ಪರ 2006ರಿಂದ 2018ರವರೆಗೆ 86 ಟೆಸ್ಟ್, 117 ಏಕದಿನ ಮತ್ತು 44 ಟಿ20 ಪಂದ್ಯಗಳನ್ನಾಡಿದ್ದಾರೆ. ಗೌತಿ ಮೊರ್ಕೆಲ್ ಅವರ ಹೆಸರನ್ನು ಸೂಚಿಸಿದ್ದು, ಸದ್ಯ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ವೇಗಿಯ ಜೊತೆ ಮಾತುಕತೆ ನಡೆದಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಅಂತಾರಾಷ್ಟ್ರೀಯ ಮತ್ತು ಐಪಿಎಲ್ ಮಟ್ಟದಲ್ಲಿ ಪರಿಣಾಮಕಾರಿ ಕೋಚ್ ಎಂಬ ಹೆಗ್ಗಳಿಕೆಯ ಮೊರ್ಕೆಲ್ ಅವರು ಗಂಭೀರ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅಲ್ಲದೇ ಭಾರತ ತಂಡದಲ್ಲಿ ಬುಮ್ರಾ ಅವರನ್ನು ಹೊರತುಪಡಿಸಿದರೆ ಘಾತಕ ವೇಗಿಗಳ ಕೊರತೆಯಿದೆ. ಹಾಗಾಗಿ ವೇಗದ ಬೌಲಿಂಗ್ ವಿಭಾಗ ಬಲಪಡಿಸಲು ಮೊರ್ಕೆಲ್ ಅವರ ಆಯ್ಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
Leave a Comment