Puttur : ಅರುಣ್ ಕುಮಾರ್ ಪುತ್ತಿಲ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ, ಪ್ರಕರಣ ದಾಖಲು – 47 ವರ್ಷದ ಮಹಿಳೆಯ ದೂರಿನಲ್ಲಿ ಏನೇನಿದೆ?
ನ್ಯೂಸ್ ಆ್ಯರೋ : ಪುತ್ತಿಲ ಪರಿವಾರ ಸಂಘಟನೆಯ ಸಂಸ್ಥಾಪಕ, ಕರಾವಳಿಯ ಹಿಂದೂ ಫೈರ್ ಬ್ರ್ಯಾಂಡ್ ಖ್ಯಾತಿಯ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಪುತ್ತೂರು ಮಹಿಳಾ ಪೋಲಿಸ್ ಠಾಣೆಯಲ್ಲಿ ನಂಬಿಕೆ ದ್ರೋಹ, ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ.
ಸಾಮೆತ್ತಡ್ಕದ ನಿವಾಸಿ 47 ವರ್ಷದ ಮಹಿಳೆ ನೀಡಿದ ದೂರಿನಲ್ಲೇನಿದೆ? ಕಳೆದ ವರ್ಷ 2023ರ ಜೂನ್ ತಿಂಗಳಲ್ಲಿ ಬೆಂಗಳೂರಿನ PAI VISTA ಹೋಟೆಲ್ ಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ನಡೆಸಿದ್ದರು. ಆ ಬಳಿಕ ಬ್ಲಾಕ್ ಮೇಲ್ ಮಾಡಿಕೊಂಡು ಅವರಿರುವ ಪ್ರದೇಶಕ್ಕೆ ಕರೆಸಿಕೊಳ್ಳುತ್ತಿದ್ದರು ಎಂದು ಮಹಿಳೆ ದೂರಿದ್ದಾರೆ.
ತನಗೆ ಹಾಗೂ ತನ್ನ ಪುತ್ರಿಗೆ ಜೀವನ ಪೂರ್ತಿ ಯಾವುದೇ ಕುಂದು ಕೊರತೆಯಾಗದಂತೆ ನೋಡಿಕೊಳ್ಳುವುದಾಗಿ ನಂಬಿಸಿ ನನ್ನನ್ನು ದೈಹಿಕ ಹಾಗೂ ಮಾನಸಿಕವಾಗಿ ಬಳಸಿಕೊಳ್ಳುತ್ತಿದ್ದರು.
ಅವರೊಂದಿಗೆ ಇದ್ದ ಕ್ಷಣಗಳ ಛಾಯಾ ಚಿತ್ರ, ಸೆಲ್ಫಿ, ಆಡಿಯೋ, ವಿಡಿಯೋಗಳು ಇದೆಯೆಂದು ಹೇಳಿಕೊಂಡು ಬೆದರಿಸಿ ಅವರ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದರು ಎಂದು ಸಂತ್ರಸ್ತೆ ಎನ್ನಲಾದ ಮಹಿಳೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆದರೆ 2024ರ ಲೋಕಸಭಾ ಚುನಾವಣೆಯ ಬಳಿಕ ಮಾತುಕತೆ ಕಡಿಮೆ ಮಾಡಿದ್ದು, ಭಯಗೊಂಡು ನಾನು ಪುತ್ತೂರಿಗೆ ವಾಸ ಬದಲಾವಣೆ ಮಾಡಿಕೊಂಡು ಬಾಡಿಗೆ ಮನೆಯಲ್ಲಿ ವಾಸವಿದ್ದೇನೆ. ಉದ್ಯೋಗ ಹಾಗೂ ವರಮಾನವಿಲ್ಲದೆ ಬಾಡಿಗೆ ಮನೆಯಲ್ಲಿದ್ದುಕೊಂಡು ಕಷ್ಟಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಂತ್ರಸ್ತೆ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಾಮೆತ್ತಡ್ಕ ನಿವಾಸಿ 47 ವರ್ಷದ ಮಹಿಳೆ ನೀಡಿದ ದೂರಿನಂತೆ ಪುತ್ತೂರು ಮಹಿಳಾ ಪೋಲಿಸ್ ಠಾಣೆಯಲ್ಲಿ ಅ.ಕ್ರ.45/2024 ರಂತೆ IPC 1860 (U/s-417,354(a), 506 ಸೆಕ್ಷನ್ ನ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಬಹುದಿನಗಳಿಂದ ಅರುಣ್ ಕುಮಾರ್ ಪುತ್ತಿಲ ಅವರನ್ನು ರಾಜಕೀಯವಾಗಿ ಹಣಿಯಲು ಗುಂಪೊಂದು ಕಾರ್ಯಾಚರಣೆ ನಡೆಸುತ್ತಿದ್ದು, ಅದರ ಕೃಪಾಕಟಾಕ್ಷದಿಂದಲೇ ಈ ದೂರು ದಾಖಲಾಗಿರುವ ಸಾಧ್ಯತೆ ಇದೆ ಎಂದು ಅರುಣ್ ಕುಮಾರ್ ಪುತ್ತಿಲ ಬಣದ ಕಾರ್ಯಕರ್ತರೊಬ್ಬರು ನ್ಯೂಸ್ ಆ್ಯರೋ ಗೆ ಮಾಹಿತಿ ನೀಡಿದ್ದಾರೆ. ಇದು ದುರುದ್ದೇಶಪೂರಿತ ಸುಳ್ಳು ದೂರಾಗಿದ್ದು, ಸತ್ಯಕ್ಕೆ ಜಯ ಸಿಗಲಿದೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿಕೆ ನೀಡಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
Leave a Comment