ಫೆಂಗಲ್ ಚಂಡಮಾರುತ ಎಫೆಕ್ಟ್; ರಾಜ್ಯದಲ್ಲಿ ಇಂದು ಮತ್ತು ನಾಳೆ ಮಳೆಯ ಅಬ್ಬರ!
ನ್ಯೂಸ್ ಆ್ಯರೋ: ಫೆಂಗಲ್ ಚಂಡಮಾರುತದ ಅಬ್ಬರದಿಂದ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಂಗಳವಾರ ಭಾರೀ ಮಳೆಯಾಗಿದ್ದು, ಮುಂದಿನ ಒಂದೆರಡು ದಿನ ಕರಾವಳಿ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಫೆಂಗಲ್ ಚಂಡಮಾರುತದ ಪ್ರಭಾವದಿಂದಾಗಿ ರಾಜದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಂಗಳವಾರವೂ ಮಳೆಯಾಗಿದೆ, ವ್ಯಕ್ತಿಯೊಬ್ಬ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಸಿಡಿಲಿಗೆ 3 ಮನೆಗಳ ವಿದ್ಯುತ್ ಉಪಕರಣಗಳು ಹಾಳಾಗಿವೆ. ಮಂಗಳೂರು ಏರ್‌ಪೋರ್ಟ್ ಬಳಿ ಗುಡ್ಡದ ಮಣ್ಣು ಕುಸಿದಿದೆ. ದಕ್ಷಿಣ ಕನ್ನಡದ ಪುತ್ತೂರು ತಾ| ಕೆಯ್ಯರು ಬಳಿ ಮನೆಯ ಮುಂಭಾಗ ಹಾಕಲಾಗಿದ್ದ ಶೀಟ್ ಬಳಿ ವಿದ್ಯುತ್ ಬಲ್ಟ್ ಹಾಕುತ್ತಿದ್ದ ವೇಳೆ ಸಿಡಿಲು ಬಡಿದು ನಾರಾಯಣ ಮೃತಪಟ್ಟಿದ್ದಾರೆ.
ಮಳೆಯಿಂದಾಗಿ ಮೈಸೂರು ಮಹಾನಗರ ಪಾಲಿಕೆಯ ಮೇಲ್ಪಾವಣಿಯ ಪ್ರೈವುಡ್ ಶೀಟ್ ಕುಸಿದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸರಸ್ವತಿಪುರಂನಲ್ಲಿ ಮರ ಬಿದ್ದು ಎರಡು ಕಾರುಗಳು ಜಖಂಗೊಂಡಿವೆ. ಚಾಮುಂಡಿಬೆಟ್ಟದಲ್ಲಿ ರಸ್ತೆಗೆ ಬಂಡೆ ಉರುಳಿ ಬಿದ್ದಿದ್ದು, ಯಾವುದೇ ಹಾನಿ ಸಂಭವಿಸಿಲ್ಲ.
ಇದೇ ವೇಳೆ, ಮಳೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಚಿಕ್ಕಮಗಳೂರು, ಕೊಡಗು, ಚಾಮರಾಜ ನಗರ, ಶಿವಮೊಗ್ಗ, ಚಿತ್ರದುರ್ಗ, ಕೋಲಾರ, ಮಂಡ್ಯ ಉಡುಪಿ, ಮಂಗಳೂರು, ಮೈಸೂರು ಹಾಗೂ ರಾಮನಗರ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಿಸಲಾಗಿತ್ತು. ಆದರೆ ಇಂದು ಮತ್ತು ನಾಳೇಯೂ ಕೂಡ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Leave a Comment