Mangalore : ಸಿಎಂ ವಿರುದ್ಧ ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿ ಹಿನ್ನೆಲೆ – ಕಾಂಗ್ರೆಸ್ ಪ್ರತಿಭಟನೆ ವೇಳೆ ಬಸ್ ಗೆ ಕಲ್ಲು ತೂರಾಟ, ಟಯರ್ ಗೆ ಬೆಂಕಿ
ನ್ಯೂಸ್ ಆ್ಯರೋ : ಮುಡಾ ಸೈಟು ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ಖಂಡಿಸಿ ಇಂದು ಮಂಗಳೂರಿನಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆ ಹಿಂಸಾಚಾರಕ್ಕೆ ತಿರುಗಿದ್ದು, ಬಸ್ ಗಳ ಮೇಲೆ ಕಲ್ಲು ತೂರಾಟ ನಡೆದಿದೆ.
ಕಾಂಗ್ರೆಸ್ ಪಕ್ಷದ ವತಿಯಿಂದ ಈ ಪ್ರತಿಭಟನೆ ಆಯೋಜನೆಯಾಗಿದ್ದು, ಪಾದಯಾತ್ರೆ ಬಳಿಕ ಸಭೆ ಮುಗಿಯುತ್ತಲೇ ರಸ್ತೆಗಿಳಿದ ಕಾರ್ಯಕರ್ತರು ಲಾಲ್ ಬಾಗ್ ಜಂಕ್ಷನ್ ನಲ್ಲಿ ಸಂಚರಿಸುತ್ತಿದ್ದ ಖಾಸಗಿ ಸಿಟಿ ಬಸ್ ಗೆ ಕಲ್ಲು ಎಸೆದಿದ್ದಾರೆ. ಪರಿಣಾಮ ಬಸ್ ನ ಎದುರಿನ ಗಾಜು ಸಂಪೂರ್ಣ ಪುಡಿಯಾಗಿದ್ದು, ಮೂವರನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರೊಂದಿಗೂ ದುಂಡಾವರ್ತನೆ ತೋರಿದ್ದಲ್ಲದೇ ಮಹಾನಗರ ಪಾಲಿಕೆ ಎದುರು ರಸ್ತೆಯಲ್ಲಿ ಟಯರ್ ಗೆ ಬೆಂಕಿ ಇಟ್ಟು ಪ್ರತಿಭಟನೆ ನಡೆಸಿದ್ದಾರೆ.
ಇಂದಿನ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಪ್ರಕಾಶ್ ರಾಥೋಡ್, ರಮಾನಾಥ ರೈ ಸೇರಿದಂತೆ ಜಿಲ್ಲೆಯ ಹಲವು ನಾಯಕರು ಭಾಗವಹಿಸಿದ್ದು, ಅವರ ಮುಂದೆಯೇ ಈ ಘಟನೆ ನಡೆದಿದೆ.
ಪ್ರತಿಭಟನೆಯ ವೇಳೆ ಸರಾಗ ರಸ್ತೆ ಸಂಚಾರಕ್ಕೂ ತೊಡಕಾಗಿದ್ದು, ಡಿಸಿಪಿಗಳಾದ ಸಿದ್ಧಾರ್ಥ್ ಗೋಯಲ್ ಹಾಗೂ ದಿನೇಶ್ ಕುಮಾರ್ ಪೋಲಿಸ್ ಸಿಬ್ಬಂದಿಗಳ ಜೊತೆ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ.
Leave a Comment