ಹಿಂದೂ-ಮುಸ್ಲಿಂ ಕುಂಕುಮ ಗಲಾಟೆ; ಮತ್ತೆ ಮುನ್ನೆಲೆಗೆ ಬಂದ ದತ್ತಪೀಠ ವಿವಾದ
ನ್ಯೂಸ್ ಆ್ಯರೋ: ದತ್ತಜಯಂತಿಗೆ ದಿನಗಣನೆ ಆರಂಭವಾಗುತ್ತಿದ್ದಂತೆ, ಮತ್ತೆ ದತ್ತಪೀಠ ವಿವಾದ ಮುನ್ನೆಲೆಗೆ ಬಂದಿದೆ. ವಿವಾದಿತ ಗುಹೆಯೊಳಗಿರುವ ಗೋರಿಗಳ ಮೇಲೆ ಕುಂಕುಮ ಹಚ್ಚಿರುವ ಆರೋಪ ಕೇಳಿಬಂದಿದ್ದು, ಇದು ಇಸ್ಲಾಂ ಧರ್ಮದವರ ಧಾರ್ಮಿಕ ಭಾವನೆಗಳಿಗೆ ಘಾಸಿಗೊಳಿಸುವ ಪ್ರಯತ್ನ ಎಂದು ಶಾಖಾದ್ರಿ ಕುಟುಂಬಸ್ಥರು ಚಿಕ್ಕಮಗಳೂರು ತಾಲೂಕಿನ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಎದುರು ಪ್ರತಿಭಟನೆ ನಡೆಸಿ, ಮುಜರಾಯಿ ಇಲಾಖೆಯ ಅಧಿಕಾರಿಗಳ ಜೊತೆ ವಾಗ್ವಾದಕ್ಕಿಳಿದಿದ್ದಾರೆ.
ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ವಿವಾದಿತ ಗುಹೆಯೊಳಗಿರುವ ಗೋರಿಗಳಿಗೆ ಅರ್ಚಕರು ಕುಂಕುಮ ಹಚ್ಚಿ ಪೂಜೆ ಮಾಡಿದ್ದಾರೆ. ಇದು ಮುಸ್ಲಿಂ ಸಮುದಾಯಕ್ಕೆ ವಿರುದ್ಧವಾಗಿದೆ ಎಂದು ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಮುಂಭಾಗ ಶಾಖಾದ್ರಿ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಕಳೆದ ಸೆಪ್ಟೆಂಬರ್ ನಲ್ಲೇ ಕುಂಕುಮ ಹಚ್ಚಿ ಪೂಜೆ ಮಾಡಿದ್ದಕ್ಕೆ ಮುಸ್ಲಿಂ ಸಮುದಾಯ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ ಇದೀಗ ಮತ್ತೆ ಕುಂಕುಮ ಹಚ್ಚಿ ಗೋರಿಗಳ ಪೂಜೆ ಮಾಡಿದಕ್ಕೆ ವಿರೋಧ ವ್ಯಕ್ತವಾಗಿದೆ. ಈ ಹಿಂದೂ ಮುಸ್ಲಿಂ ಭೂ ವಿವಾದ ಕಳೆದ 25 ವರ್ಷಗಳಿಂದ ನಡೆಯುತ್ತಿದೆ.
ಸಂಪೂರ್ಣ ಹಿಂದೂ ಪೀಠಕ್ಕೆ ಆಗ್ರಹಿಸಿ ಡಿಸೆಂಬರ್ 6 ರಿಂದ 14 ರ ವರೆಗೆ ದತ್ತಜಯಂತಿ ನಡೆಯಲಿದೆ. ಈ ಮಧ್ಯೆ ಕುಂಕುಮ ವಿವಾದ ಶುರುವಾಗಿದ್ದರಿಂದ ಹಿಂದೂ ಸಂಘಟನೆಗಳ ಮುಖಂಡರನ್ನ ಜಿಲ್ಲಾಡಳಿತ ಸಭೆ ಕರೆದಿದೆ.
Leave a Comment