ಮುಡಾ ಬೆನ್ನಲ್ಲೇ ಸಿದ್ದುಗೆ ಮತ್ತೊಂದು ಶಾಕ್; ಸಿಎಂ ವಿರುದ್ಧ ರಾಜ್ಯಪಾಲರಿಗೆ ದೂರು
ನ್ಯೂಸ್ ಆ್ಯರೋ: ಮುಡಾ ಹಗರಣ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅರ್ಕಾವತಿ ಬಡಾವಣೆಯ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ನಿವೇಶನದಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಡಿಎ ಅಧಿಕಾರಿಗಳ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ನಿವೇಶನದ ಮಾಲೀಕರಾದ ಎಂ.ಎಸ್.ಶಿವಲಿಂಗಪ್ಪ, ಎಂ.ಚಂದ್ರಶೇಖರನ್, ಕೆ.ರಾಮಚಂದ್ರಯ್ಯ ಮತ್ತು ಡಾ.ವೆಂಕಟಕೃಷ್ಣಪ್ಪ ಅವರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ಪತ್ರದಲ್ಲಿ, ಥಣಿಸಂದ್ರ, ಸಂಪಿಗೆಹಳ್ಳಿ, ಜಕ್ಕೂರು ಕೆ.ನಾರಾಯಣಪುರ ಹಾಗೂ 16 ಹಳ್ಳಿಗಳೂ ಸೇರಿ ಸುಮಾರು 800 ಎಕರೆ ಪ್ರದೇಶದಲ್ಲಿ ಬಿಡಿಎಯಿಂದ ಅರ್ಕಾವತಿ ಬಡಾವಣೆ ನಿರ್ಮಾಣವಾಗಿತ್ತು. 2004ರಲ್ಲಿ ನಿವೇಶನಕ್ಕಾಗಿ ಅರ್ಜಿ ಆಹ್ವಾನಿಸಿದ್ದ ಬಿಡಿಎಗೆ ಒಂದು ಲಕ್ಷಕ್ಕೂ ಹೆಚ್ಚು ಮಂದಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 20 ಸಾವಿರ ಫಲಾನುಭವಿಗಳನ್ನು ಪರಿಗಣಿಸಲಾಗಿತ್ತು. 12 ಸಾವಿರ ನಿವೇಶನದಾರರಿಗೆ ಬಿಡಿಎ ನಿವೇಶನ ನೋಂದಣಿ ಹಾಗೂ ಕ್ರಯಪತ್ರ ಮಾಡಿಕೊಡಲಾಗಿತ್ತು.
2006ರಲ್ಲಿ ನೂರಾರು ಮಂದಿಗೆ ಬಿಡಿಎಯಿಂದ ನಿವೇಶನ ಹಂಚಿಕೆಯಾಗಿತ್ತು. 30/40 ನಿವೇಶನಕ್ಕೆ ಎರಡೂವರೆ ಲಕ್ಷ, 40/60 ನಿವೇಶನಕ್ಕೆ ನಾಲ್ಕೂವರೆ ಲಕ್ಷ ಹಣ ಪಡೆದು ಹಂಚಿಕೆ ಮಾಡಿತ್ತು. ನೋಂದಣಿ ಪತ್ರ ಹಾಗೂ ಕ್ರಯಪತ್ರ ಪಡೆದ ನಿವೇಶನದಾರರು ಕನಿಷ್ಠ ಹತ್ತು ವರ್ಷ ನಿವೇಶನ ಮಾರಾಟ ಮಾಡುವಂತಿರರಲ್ಲ. 2014ರಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರ ಅರ್ಕಾವತಿ ಲೇಔಟ್ನಲ್ಲಿ ನೀಡಲಾಗಿದ್ದ ನಿವೇಶನ ಹಿಂಪಡೆದಿತ್ತು ಎಂದು ದೂರುದಾರರು ಆಕ್ಷೇಪಿಸಿದ್ದಾರೆ.
2006ರಿಂದ ನಿವೇಶನ ಸಂಬಂಧ ತೆರಿಗೆ ಪಾವತಿಸಲಾಗಿದೆ. 2014ರಿಂದ ಇದುವರೆಗೂ ನಿವೇಶನದಾರರು ಹಂಚಿಕೆಯಾಗಿ ರಿಜಿಸ್ಟರ್ ಆಗಿದ್ದ ಸೈಟ್ ಹಿಂಪಡೆಯಲಾಗಿದೆ. ಅಲ್ಲದೆ, ಮಾಲೀಕರಿಂದ ವಶಪಡಿಸಿಕೊಂಡ ಜಾಗವನ್ನು ಅವರಿಗೂ ಹಿಂದಿರುಗಿಸಿಲ್ಲ. ಹಂಚಿಕೆ ಮಾಡಿ ನೋಂದಣಿ ಮಾಡಿದ ತಮ್ಮ ನಿವೇಶನಗಳಲ್ಲಿ ಮನೆ ನಿರ್ಮಾಣಕ್ಕೆ ಅನುವು ಮಾಡುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಅರ್ಕಾವತಿಯಲ್ಲಿ ಸೈಟಿಲ್ಲ ಕೆಂಪೇಗೌಡ ಲೇಔಟ್ನಲ್ಲಿ ನೋಡೋಣ ಎಂದು ನಿರ್ಲಕ್ಷ್ಯದಿಂದ ಅಧಿಕಾರಿಗಳು ಉತ್ತರಿಸುತ್ತಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಅರ್ಕಾವತಿ ಲೇಔಟ್ನಲ್ಲಿ ಅಕ್ರಮ ಎಸಗಿರುವುದು ಕಂಡುಬಂದಿದ್ದು, ವಶಪಡಿಸಿಕೊಂಡಿರುವ ಜಾಗ ಭೂಗಳ್ಳರ ಪಾಲಾಗುತ್ತಿದೆ. ಇದರಿಂದ ಅಸಲಿ ಫಲಾನುಭವಿಗಳಾಗಿರುವ ನಿವೇಶನದಾರರಿಗೆ ತೊಂದರೆಯಾಗಿದೆ ಎಂದು ದೂರುದಾರರು ಹೇಳಿದ್ದಾರೆ.
Leave a Comment