ದರ್ಶನ್ ಸೇರಿದಂತೆ ಇತರರನ್ನು ಕೂಡಲೇ ಬೇರೆ ಬೇರೆ ಜೈಲಿಗೆ ವರ್ಗಾಯಿಸಲು ಸಿಎಂ ಸೂಚನೆ – ರಾಜಾತಿಥ್ಯ ನೀಡಿದ ಜೈಲಿನ ಏಳು ಸಿಬ್ಬಂದಿ ಸಸ್ಪೆಂಡ್, ದರ್ಶನ್ ವಿರುದ್ಧ ಮತ್ತೊಂದು ಕೇಸ್ : ಸಚಿವ ಪರಮೇಶ್ವರ್
ನ್ಯೂಸ್ ಆ್ಯರೋ : ನಟ ದರ್ಶನ್ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವ ವಿಚಾರವಾಗಿ ಇಂದು ಟಿಜಿ & ಐಜಿಪಿ ಅಲೋಕ್ ಮೋಹನ್ ಅವರು ಸಿಎಂ ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೈಲಿನ ನಿಯಮ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ. ಮುಂದೆ ಈ ರೀತಿ ಆಗದಂತೆ ಎಚ್ಚರವಹಿಸಿ. ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.
ಇದೆ ವೇಳೆ ದರ್ಶನ್ ಮತ್ತು ಇತರರನ್ನು ಬೇರೆ ಕಾರಾಗೃಹಗಳಿಗೆ ಸ್ಥಳಾಂತರಕ್ಕೆ ಸೂಚಿಸಿದ್ದು ಕೂಡಲೇ ಬೇರೆ ಜೈಲಿಗೆ ಸ್ಥಳಾಂತರ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜೈಲು ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಿ. ಅಲ್ಲದೆ ಘಟನೆ ಕುರಿತಂತೆ ಸಂಪೂರ್ಣ ಮಾಹಿತಿ ನನಗೆ ನೀಡಿ ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.
ದರ್ಶನ್ ವಿರುದ್ಧ ಮತ್ತೊಂದು ಕೇಸ್?
ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ನಟ ದರ್ಶನ್ ಗೆ ರಾಜಾತಿಥ್ಯ ವಿಚಾರವಾಗಿ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಮಾತನಾಡಿ ಈ ಕುರಿತಂತೆ ಅಧಿಕಾರಿಗಳು ಜೈಲಿಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದು, ತನಿಖೆ ವರದಿ ಬಂದ ನಂತರ ದರ್ಶನ್ ವಿರುದ್ಧ ಮತ್ತೊಂದು ಕೇಸ್ ದಾಖಲಿಸುವ ಕುರಿತು ಚಿಂತನೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಅಲ್ಲದೇ ನಟ ದರ್ಶನ್ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವ ಬಗ್ಗೆ ಗೃಹಸಚಿವ ಜಿ ಪರಮೇಶ್ವರ್ 7 ಸಿಬ್ಬಂದಿಗಳನ್ನು ಅಮಾನತು ಮಾಡಿ ತನಿಖೆಗೆ ಆದೇಶಿಸಿದ್ದಾರೆ.
ಜೈಲರ್, ಅಸಿಸ್ಟೆಂಟ್ ಜೈಲರ್, ವಾರ್ಡನ್ ಹುದ್ದೆಯಲ್ಲಿದ್ದ ಸಂಪತ್ ಕುಮಾರ್, ಶರಣ ಬಸಪ್ಪ, ಪ್ರಭು, ತಿಪ್ಪೇಸ್ವಾಮಿ, ಶ್ರೀಕಾಂತ್ ಸೇರಿದಂತೆ ಏಳು ಮಂದಿ ಅಧಿಕಾರಿಗಳನ್ನು ಈಗ ಸಸ್ಪೆಂಡ್ ಮಾಡಲಾಗಿದೆ ಎಂದು ಗೃಹಸಚಿವ ಪರಮೇಶ್ವರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಷ್ಟೇ ಅಲ್ಲ ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳು ಶಾಮೀಲಾಗಿದ್ದರೆ ಅವರ ಮೇಲೂ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
Leave a Comment