ಸಿಸಿಬಿ ಇನ್ಸ್‌ಪೆಕ್ಟರ್ ತಿಮ್ಮೇಗೌಡ ಆತ್ಮಹತ್ಯೆ ಪ್ರಕರಣ – ತಿಮ್ಮೇಗೌಡ ವೈಯಕ್ತಿಕ ಬದುಕಿನ ಬಗ್ಗೆಯೇ ಮೂಡಿದೆ ಅನುಮಾನ..!

20240805 111258
Spread the love

ನ್ಯೂಸ್ ಆ್ಯರೋ : ಬೆಂಗಳೂರು ಸಿಸಿಬಿ ಆರ್ಥಿಕ ಅಪರಾಧ ವಿಭಾಗದ ಇನ್ಸ್ ಪೆಕ್ಟರ್ ತಿಮ್ಮೇಗೌಡ ರಾಮನಗರ ಜಿಲ್ಲೆ ಬಿಡದಿಯ ಕಗ್ಗಲಿಪುರದಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಇನ್ಸ್ ಪೆಕ್ಟರ್ ಸಾವಿನ ಹಿಂದೆ ಹಲವು ಅನುಮಾನ ಮೂಡಿವೆ. ಆತ್ಮಹತ್ಯೆ ವೈಯಕ್ತಿಕ ಕಾರಣಕ್ಕೋ ಅಥವಾ ಕೆಲಸದ ಒತ್ತಡವೋ ಎನ್ನುವ ಬಗ್ಗೆ ಅನುಮಾನ ಮೂಡಿದೆ.

1998ರ ಬ್ಯಾಚ್ ನ ಪೊಲೀಸ್ ಅಧಿಕಾರಿಯಾದ ತಿಮ್ಮೇಗೌಡ ಸದ್ಯ ಸಿಸಿಬಿ ಆರ್ಥಿಕ ಅಪರಾಧ ವಿಭಾಗದ ಇನ್ಸ್​​ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ರಾಮನಗರ ಜಿಲ್ಲೆಯ ಕಗ್ಗಲಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ತಗಚಗುಪ್ಪೆ ಮುಖ್ಯ ರಸ್ತೆಯಲ್ಲಿರುವ ನಿರ್ಜನ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇತ್ತೀಚೆಗೆ ಸಿಸಿಬಿ ವಿಭಾಗದಲ್ಲಿ ಹೈಪ್ರೋಫೈಲ್ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದ್ದು, ಇದರ ಆರೋಪಿಗಳನ್ನು ಬಂಧಿಸಿದ್ದ ಕಾರಣಕ್ಕೆ ತಿಮ್ಮೇಗೌಡರ ಮೇಲೆ ಒತ್ತಡಗಳಿತ್ತು ಎನ್ನಲಾಗಿದೆ.

ಅಲ್ಲದೇ 2014 ರಲ್ಲಿ ಹಾಸನದ ಸಬ್ ಇನ್ಸ್‌ಪೆಕ್ಟರ್ ಆಗಿದ್ದಾಗ ತಿಮ್ಮೇಗೌಡ ಅವರು ಯುವತಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣ ನಡೆದಿತ್ತು. ಅದರ ಸಂತ್ರಸ್ತೆಗೆ ಮಗು ಕೂಡ ಜನಿಸಿದ್ದು, ಅದರ ಡಿಎನ್ಎ ತಿಮ್ಮೇಗೌಡ ಅವರ ಜೊತೆ ಮ್ಯಾಚ್ ಆಗಿತ್ತು ಎನ್ನಲಾಗಿದೆ. ಇದೇ ತಿಂಗಳ 31 ರಂದು ಈ ಪ್ರಕರಣದ ವಿಚಾರಣೆ ಇದ್ದು, ಇದೂ ಕೂಡ ತಿಮ್ಮೇಗೌಡ ಮೇಲೆ ಸಹಜವಾಗಿ ಒತ್ತಡ ಇತ್ತು ಎನ್ನಲಾಗುತ್ತಿದೆ.

ಇದೂ ಸಾಲದೆಂಬಂತೆ ಅತ್ತಿಬೆಲೆ ಪಟಾಕಿ ದುರಂತ ಸಂಭವಿಸಿದಾಗ ಅತ್ತಿಬೆಲೆ ಠಾಣೆ ಇನ್ಸ್ ಪೆಕ್ಟರ್ ಆಗಿದ್ದಿದ್ದು ಕೂಡ ಇದೇ ತಿಮ್ಮೇಗೌಡ. ಅಲ್ಲದೇ ಈ ಪಟಾಕಿ ತಯಾರಿಕಾ ಘಟಕಕ್ಕೆ ಪರವಾನಗಿ ನೀಡಿದ ಆರೋಪದಲ್ಲಿ ತಿಮ್ಮೇಗೌಡ ಅಮಾನತ್ತು ಆಗಿದ್ದರು. ಹೀಗೆ ತಿಮ್ಮೇಗೌಡ ಸಾವಿನ ಹಿಂದೆ ಸಾಲು ಸಾಲು ವೈಯಕ್ತಿಕ ಕಾರಣ ಸೇರಿದಂತೆ ಕೆಲಸದ ಒತ್ತಡದ ಮಾತು ಕೂಡ ಕೇಳಿ ಬರುತ್ತಿವೆ.

ಆದರೆ ತಿಮ್ಮೇಗೌಡ ಅವರ ಪತ್ನಿ ಸುನೀತಾ ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಆರೋಪಿಸಿದ್ದು, ಕಗ್ಗಲಿಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೊನ್ನೆಯಷ್ಟೇ ಯಾದಗಿರಿ ಸಬ್ ಇನ್ಸ್‌ಪೆಕ್ಟರ್ ಪರಶುರಾಮ್ ಅಸಹಜ ಸಾವಿನ ಬೆನ್ನಲ್ಲೇ ಈ ಘಟನೆ ನಡೆದಿರುವ ಕಾರಣ ಸರ್ಕಾರದ ಮೇಲೆಯೂ ಆರೋಪಗಳು ಕೇಳಿಬಂದಿತ್ತು. ಆದರೆ ಸದ್ಯ ಈ ಪ್ರಕರಣದ ಬಗ್ಗೆ ತನಿಖೆ ಆರಂಭವಾಗಿದ್ದು, ತನಿಖೆಯ ಬಳಿಕ ಸತ್ಯಾಂಶ ಹೊರಬರುವ ನಿರೀಕ್ಷೆ ಇದೆ.

Leave a Comment

Leave a Reply

Your email address will not be published. Required fields are marked *

error: Content is protected !!