Rupee vs Dollar : ಡಾಲರ್ ಮುಂದೆ ಸಾರ್ವಕಾಲಿಕ ಕನಿಷ್ಟ ಮಟ್ಟಕ್ಕೆ ಕುಸಿದ ರೂಪಾಯಿ – ಏಷ್ಯನ್ ಕರೆನ್ಸಿಯಲ್ಲೇ ರೂಪಾಯಿ ದುರ್ಬಲ ಅನಿಸಿಕೊಂಡಿದ್ದೇಕೆ?
ನ್ಯೂಸ್ ಆ್ಯರೋ : ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಬದಲಾವಣೆ ಆಗಿದ್ದು, ಇದು ಪ್ರಪಂಚದಾದ್ಯಂತ ವ್ಯಾಪಾರದ ಮೇಲೆ ಪರಿಣಾಮ ಬೀರಿದೆ. ಇದರ ನಡುವೆ ಭಾರತೀಯ ಕರೆನ್ಸಿ (Indian rupee) ದುರ್ಬಲ ಕರೆನ್ಸಿ ಎನಿಸಿಕೊಂಡಿದ್ದು, ಇಂದು ಮುಂಜಾನೆ ವೇಳೆಗೆ ಯುಎಸ್ ಡಾಲರ್ ಎದುರು ರೂಪಾಯಿ 83.90 ರ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ.
ವಿದೇಶಿ ವಿನಿಮಯ ವ್ಯಾಪಾರಿಗಳ ಪ್ರಕಾರ, ದೇಶೀಯ ಕರೆನ್ಸಿಯಲ್ಲಿ ತೀವ್ರ ಕುಸಿತಕ್ಕೆ ಪ್ರಮುಖ ಕಾರಣವೆಂದರೆ ಭಾರತೀಯ ಷೇರು ಮಾರುಕಟ್ಟೆಗಳಲ್ಲಿನ ಕುಸಿತ ಮತ್ತು ವಿದೇಶಿ ಬಂಡವಾಳವನ್ನು ಹಿಂತೆಗೆದುಕೊಳ್ಳುತ್ತಿರುವುದು. ಇನ್ನು ಭಾರತೀಯ ರೂಪಾಯಿ ಈಗ ಏಷ್ಯನ್ ಕರೆನ್ಸಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ರೂಪಾಯಿ ಭಾರೀ ಮೌಲ್ಯ ಕಳೆದುಕೊಂಡಿದೆ.
ಆಗಸ್ಟ್ 05 ರಂದು ಪ್ರತಿ ಯುಎಸ್ ಡಾಲರ್‌ಗೆ ರೂಪಾಯಿ ಸಾರ್ವಕಾಲಿಕ ಕನಿಷ್ಠ 83.8450 ಕ್ಕೆ ದುರ್ಬಲಗೊಂಡಿದೆ. ಜುಲೈನಲ್ಲಿ ಶೇಕಡಾ 0.4 ರಷ್ಟು ಕುಸಿದ ನಂತರ ಈ ತಿಂಗಳ ಎರಡು ಮೂರು ಅವಧಿಗಳಲ್ಲಿ ಇದು ದಾಖಲೆಯ ಕನಿಷ್ಠ ಮಟ್ಟವನ್ನು ತಲುಪಿದೆ. ಇದಕ್ಕೆ ವ್ಯತಿರಿಕ್ತವಾಗಿ, ಏಷ್ಯನ್ ಕರೆನ್ಸಿಗಳು ಕಳೆದ ತಿಂಗಳು ಸುಮಾರು 1 ಪ್ರತಿಶತದಷ್ಟು ಏರಿಕೆ ಆಗಿದೆ. ಇದು ಮಲೇಷಿಯಾದ ರಿಂಗಿಟ್‌ನ 4 ಪ್ರತಿಶತಕ್ಕಿಂತ ಹೆಚ್ಚಿನ ಜಿಗಿತದ ಕಾರಣವಾಗಿದೆ.
ಒಟ್ಟಾರೆಯಾಗಿ ನಿನ್ನೆ ಇಂಟರ್‌ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಪ್ರತಿ ಡಾಲರ್‌ಗೆ 83.78 ಕ್ಕೆ ಪ್ರಾರಂಭವಾಯಿತು. ಆರಂಭಿಕ ವ್ಯವಹಾರಗಳಲ್ಲಿ ಪ್ರತಿ ಡಾಲರ್‌ಗೆ ಸಾರ್ವಕಾಲಿಕ ಕನಿಷ್ಠ 83.80 ಅನ್ನು ಮುಟ್ಟಿದೆ. ಇದು ಹಿಂದಿನ ಸೆಶನ್‌ನ ಮುಕ್ತಾಯದ ಬೆಲೆಗಿಂತ 8 ಪೈಸೆಯ ಕುಸಿತವನ್ನು ತೋರಿಸುತ್ತದೆ. ಕಳೆದ ಶುಕ್ರವಾರದಂದು ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ 83.72ಕ್ಕೆ ತಲುಪಿತ್ತು.
ಈ ನಡುವೆ ನಿನ್ನೆ ದೇಶೀಯ ಮಾರುಕಟ್ಟೆಗಳು ದೊಡ್ಡ ಕುಸಿತದೊಂದಿಗೆ ಓಪನ್ ಆಗಿದ್ದು, ಬಿಎಸ್‌ಇ ಸೆನ್ಸೆಕ್ಸ್ 2,393.76 ಅಂಕಗಳ ಕುಸಿತದೊಂದಿಗೆ 78,588.19 ಅಂಕಗಳಲ್ಲಿ ಪ್ರಾರಂಭವಾಯಿತು. ಇದರೊಂದಿಗೆ ಎನ್‌ಎಸ್‌ಇ ನಿಫ್ಟಿ 50 ಕೂಡ 414.85 ಪಾಯಿಂಟ್‌ಗಳ ನಷ್ಟದೊಂದಿಗೆ 24,302.85 ಪಾಯಿಂಟ್‌ಗಳಲ್ಲಿ ಪ್ರಾರಂಭವಾಯಿತು. ಇಂದೂ ಕೂಡ ರೂಪಾಯಿ ಕುಸಿತದ ಹಾದಿಯಲ್ಲೇ ಇದ್ದು, ಸಂಜೆಯ ವೇಳೆಗೆ ರೂಪಾಯಿ ಮೌಲ್ಯದ ಕುಸಿತ ಹೇಗಿರಲಿದೆ ಎಂಬ ಕುತೂಹಲ ಮೂಡಿದೆ.
Leave a Comment