ಬೆಳ್ತಂಗಡಿ : ಬೆಳಾಲು ನಿವೃತ್ತ ಶಿಕ್ಷಕ ಬಾಲಕೃಷ್ಣ ಬಡೆಕ್ಕಿಲ್ಲಾಯ ಕೊಲೆ ಪ್ರಕರಣ – ಸಂಬಂಧಿಕರಿಂದಲೇ ಕೊಲೆ, ಇಬ್ಬರ ಬಂಧನ : ಕೊಲೆಗಾರರ ಸಾಕ್ಷಿ ನೀಡಿತಾ ಉಂಡು ಎಸೆದ ಬಾಳೆಎಲೆ?
ನ್ಯೂಸ್ ಆ್ಯರೋ : ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಎಸ್.ಪಿ.ಬಿ. ಕಾಂಪೌಂಡ್ ನಿವಾಸಿ ನಿವೃತ್ತ ಶಾಲಾ ಮುಖ್ಯೋಪಾಧ್ಯಾಯ ಎಸ್.ಪಿ. ಬಾಲಕೃಷ್ಣ ಬಡೆಕ್ಕಿಲ್ಲಾಯ (83) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ಪೋಲಿಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಂಧಿತರ ಪೈಕಿ ಇಬ್ಬರೂ ಕೂಡ ಕೊಲೆಯಾದ ಬಾಲಕೃಷ್ಣ ಬಡೆಕ್ಕಿಲ್ಲಾಯ ಅವರ ಸಂಬಂಧಿಕರಾಗಿದ್ದು, ಭೂಮಿ ವಿವಾದದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ. ಆರೋಪಿಗಳ ಪೈಕಿ ಒಬ್ಬ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಯಾಗಿದ್ದು, ಆತನ ವಿರುದ್ಧ ಬದಿಯಡ್ಕ ಪೋಲಿಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದ್ದು, ವಿಚಾರಣಾ ಹಂತದಲ್ಲಿರುವ ವಿಚಾರ ಬೆಳಕಿಗೆ ಬಂದಿದೆ.
ಕಳೆದ ಆಗಸ್ಟ್ 20 ರಂದು ಮಧ್ಯಾಹ್ನದಿಂದ ಸಂಜೆಯ ನಡುವೆ ಬಾಲಕೃಷ್ಣ ಬಡೆಕ್ಕಿಲ್ಲಾಯ ಅವರ ಕೊಲೆ ಪ್ರಕರಣ ನಡೆದಿತ್ತು. ಆದರೆ ಕೊಲೆಗಾರರು ಯಾವುದೇ ಸುಳಿವು ಬಿಡದೇ ಪರಾರಿಯಾಗಿದ್ದು ಪೋಲಿಸರಿಗೆ ತಲೆನೋವು ನೀಡಿತ್ತು.
ಬಾಳೆಎಳೆ ನೀಡಿದ ಸಾಕ್ಷ್ಯ..!
ಬಾಲಕೃಷ್ಣ ಬಡೆಕ್ಕಿಲ್ಲಾಯ ಅವರ ಕೊಲೆಯಾದ ದಿನ ಅವರ ಮನೆಯ ಪಕ್ಕದಲ್ಲೇ ಊಟ ಮಾಡಿ ಎಸೆದ ಬಾಳೆ ಎಳೆ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಯಾರೋ ಪರಿಚಿತರೇ ಈ ಕೊಲೆ ಮಾಡಿರುವ ಬಗ್ಗೆ ಪೋಲಿಸರಿಗೆ ಅನುಮಾನ ಮೂಡಿತ್ತು.
ಅದರಂತೆ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವಿಜಯಪ್ರಸಾದ್ ನೇತೃತ್ವದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ತಂಡ, ಧರ್ಮಸ್ಥಳ ಇಬ್ಬರು ಉಪನಿರೀಕ್ಷಕರ ತಂಡ ಹಾಗೂ ಇನ್ನೊಂದು ಪೋಲಿಸರ ತಂಡ ಸೇರಿ ಮೂರು ಪೋಲಿಸ್ ತನಿಖಾ ತಂಡ ರಚಿಸಿದ ದ.ಕ. ಎಸ್ಪಿ ಯತೀಶ್ ಎನ್. ತಂಡಗಳಿಗೆ ಕೊಲೆ ಪ್ರಕರಣದ ಜವಾಬ್ದಾರಿ ವಹಿಸಿದ್ದರು.
ಪರಿಚಿತರೇ ಕೊಲೆ ಮಾಡಿರುವ ಶಂಕೆ ಉಂಟಾದ ಹಿನ್ನೆಲೆಯಲ್ಲಿ ಅದೇ ದಾರಿಯಲ್ಲಿ ತನಿಖೆಗೆ ಇಳಿದ ಪೋಲಿಸರಿಗೆ ಆರೋಪಿಗಳ ಬಗ್ಗೆ ಮಾಹಿತಿ ಲಭಿಸಿದ್ದು, ಸದ್ಯ ಇಬ್ಬರನ್ನು ಬಂಧಿಸಿದ್ದು ಪ್ರಕರಣವನ್ನು ಶೀಘ್ರವಾಗಿ ಭೇದಿಸಿದ್ದಾರೆ.
Leave a Comment