ಇಂದು ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಣೆ; ಎಸ್ಎಂಕೆ ನಿಧನಕ್ಕೆ ಇನ್ನೂ ಎರಡು ದಿನ ಶೋಕಾಚರಣೆ, ಬ್ಯಾಂಕ್ ಗಳಿಗೆ ರಜೆ ?
ನ್ಯೂಸ್ ಆ್ಯರೋ: ದೇಶ ಕಂಡ ಮುತ್ಸದ್ಧಿ ರಾಜಕಾರಣಿ ಮಾಜಿ ಮುಖ್ಯಮಂತ್ರಿಗಳು, ಮಾಜಿ ರಾಜ್ಯಪಾಲರಾಗಿದ್ದ ಎಸ್ಎಂ ಕೃಷ್ಣಾರವರು ನಿನ್ನೆ (ಡಿಸೆಂಬರ್ 10) ನಿಧರಾದ ಹಿನ್ನೆಲೆ ಅವರಿಗೆ ಗೌರವ ನೀಡುವ ಸಲುವಾಗಿ ಇಂದು ರಾಜ್ಯದಾದ್ಯಂತ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ.
ಇಂದು ಅವರ ಹುಟ್ಟೂರಾದ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸೋಮನಹಳ್ಳಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಂದು ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು (ಡಿಸೆಂಬರ್ 11) ರಾಜ್ಯಾದ್ಯಂತ ಸರ್ಕಾರಿ ರಜೆ ಇರುವುದಾಗಿ ಘೋಷಣೆ ಮಾಡಿದ್ದಾರೆ. ಇಂದು ಎಲ್ಲಾ ಸರ್ಕಾರಿ ಕಚೇರಿಗಳು, ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಎಸ್ಎಂ ಕೃಷ್ಣ ಅವರಿಗೆ ಸಂತಾಪ ಸೂಚಿಸುವ ಉದ್ದೇಶದಿಂದ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಡಿಸೆಂಬರ್ 10 ರಿಂದ ಮೂರು ದಿನಗಳ ಕಾಲ (ಮಂಗಳವಾರ, ಬುಧವಾರ, ಶುಕ್ರವಾರ) ಶೋಕಾಚರಣೆ ಇರಲಿದೆ. ಇಂದು ಅನುದಾನಿತ ಹಾಗೂ ಅನುದಾನ ರಹಿತ ಶಾಲಾ-ಕಾಲೇಜುಗಳೂ ಸೇರಿದಂತೆ ಎಲ್ಲಾ ಸರ್ಕಾರಿ ಕಚೇರಿಗಳಿಗೂ ಸರ್ಕಾರಿ ರಜೆ ಘೋಷಣೆ ಮಾಡಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.
ಇನ್ನೊಂದೆಡೆ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಆದ್ರೆ ಎಸ್ಎಂ ಕೃಷ್ಣ ಅವರ ನಿಧನದಿಂದಾಗಿ ಇಂದು (ಬುಧವಾರ) ವಿಧಾನ ಸಭೆಯ ಕಲಾಪಗಳು ಕೂಡ ನಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ದೇಶ ಕಂಡ ಸಜ್ಜನ ಹಾಗೂ ಮುತ್ಸದ್ಧಿ ರಾಜಕಾರಣಿ, ಕರ್ನಾಟಕದ ಮಾಜಿ ಸಿಎಂ ಎಸ್ಎಂ ಕೃಷ್ಣ ಅವರು ನಿನ್ನೆ (ಡಿಸೆಂಬರ್ 10) ಕೊನೆಯುಸಿರೆಳೆದರು. ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಸದಾಶಿವನಗರ ನಿವಾಸದಲ್ಲಿ ನಿಧನರಾದರು.
ಇನ್ನು ಬ್ಯಾಂಕ್ನ ರಜಾ ದಿನಗಳನ್ನು ಆರ್ಬಿಐ ನಿಗದಿ ಮಾಡುತ್ತದೆ. ಆದರೆ, ಭಾರತೀಯ ರಿಸರ್ವ್ ಬ್ಯಾಂಕ್ನಿಂದ ಈ ಬಗ್ಗೆ ಯಾವುದೇ ಪ್ರಕಟಣೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಬ್ಯಾಂಕುಗಳಿಗೆ ರಜೆ ಇರುವ ಸಾಧ್ಯತೆ ಇಲ್ಲ. ಬುಧವಾರ ರಾಷ್ಟ್ರವ್ಯಾಪಿ ಬ್ಯಾಂಕುಗಳು ಕಾರ್ಯನಿರ್ವಹಿಸುವಂತೆ ಕರ್ನಾಟಕದಲ್ಲೂ ಬ್ಯಾಂಕ್ ಕಚೇರಿಗಳು ಬಾಗಿಲು ತೆರೆದಿರುತ್ತವೆ.
ಡಿಸೆಂಬರ್ ತಿಂಗಳಲ್ಲಿ ದೇಶಾದ್ಯಂತ ಒಟ್ಟು 17 ದಿನ ಬ್ಯಾಂಕ್ ರಜೆ ಇರುತ್ತದೆ. ಇದರಲ್ಲಿ ಐದು ಭಾನುವಾರ ಮತ್ತು ಎರಡು ಸೋಮವಾರದ ರಜೆಗಳು ಸೇರಿವೆ. ಇದು ಬಿಟ್ಟರೆ ಸಾರ್ವತ್ರಿಕ ರಜೆ ಇರುವುದು ಡಿಸೆಂಬರ್ 25ರಂದು, ಕ್ರಿಸ್ಮಸ್ ಹಬ್ಬಕ್ಕೆ. ಇನ್ನುಳಿದವು ಪ್ರಾದೇಶಿಕ ರಜೆಗಳೇ ಆಗಿವೆ.
Leave a Comment