ಇಂದಿನಿಂದ ಪವಿತ್ರ ಅಮರನಾಥ ಯಾತ್ರೆ ಆರಂಭ – 12 ಸಾವಿರ ಅಡಿಗೂ ಎತ್ತರವಿರುವ ಈ ಗುಹೆಯ ವಿಶೇಷವೇನು?
ನ್ಯೂಸ್ ಆ್ಯರೋ : ಹಿಂದೂಗಳ ಪವಿತ್ರ ಅಮರನಾಥ ಯಾತ್ರೆಗೆ ಇಂದು (ಜೂನ್ 29) ಚಾಲನೆ ಸಿಕ್ಕಿದೆ. ಪವಿತ್ರ ಗುಹೆಯ ದರ್ಶನಕ್ಕಾಗಿ ಜಮ್ಮು ಮತ್ತು ಕಾಶ್ಮೀರದ ಗಂಡರ್ಬಾಲ್ ಜಿಲ್ಲೆಯ ಬಾಲ್ಟಾಲ್ ಬೇಸ್ ಕ್ಯಾಂಪ್‌ನಿಂದ ಯಾತ್ರಾರ್ಥಿಗಳ ಮೊದಲ ತಂಡ ಹೊರಟಿದೆ.
ಶಂಖದ ನಾದ ಮತ್ತು ‘ಬುಮ್ ಬುಮ್ ಭೋಲೆ’, ‘ಜೈ ಬಾಬಾ ಬುರ್ಫಾನಿ’ ಹಾಗೂ ‘ಹರ್ ಹರ್ ಮಹಾದೇವ್’ ಘೋಷಣೆಗಳ ನಡುವೆ, ಯಾತ್ರಾರ್ಥಿಗಳ ಮೊದಲ ತಂಡವು ಶಿಬಿರದಿಂದ ಸಮುದ್ರ ಮಟ್ಟದಿಂದ 12,756 ಅಡಿ ಎತ್ತರದಲ್ಲಿರುವ ಪವಿತ್ರ ದೇವಾಲಯದತ್ತ ಹೆಜ್ಜೆ ಹಾಕಿದೆ.
ಒಟ್ಟು 4,603 ಯಾತ್ರಾರ್ಥಿಗಳನ್ನು ಒಳಗೊಂಡ ಮೊದಲ ಬ್ಯಾಚ್ ಶುಕ್ರವಾರ ಬಿಗಿ ಭದ್ರತೆಗಳ ನಡುವೆ ಕಾಶ್ಮೀರ ಕಣಿವೆಯನ್ನು ತಲುಪಿತ್ತು. ಈ ವರ್ಷದ 52 ದಿನಗಳ ಸುದೀರ್ಘ ತೀರ್ಥಯಾತ್ರೆ ಆಗಸ್ಟ್ 19ರಂದು ಕೊನೆಗೊಳ್ಳಲಿದೆ. ಅಮರನಾಥ ಯಾತ್ರೆಗೆ ಆನ್‌ಲೈನ್ ನೋಂದಣಿ ಏಪ್ರಿಲ್ 15ರಂದು ಶ್ರೀ ಅಮರನಾಥ ದೇವಾಲಯ ಮಂಡಳಿಯ (SASB) ವೆಬ್‌ಸೈಟ್ ಮತ್ತು ಪೋರ್ಟಲ್‌ನಲ್ಲಿ ಪ್ರಾರಂಭವಾಗಿದ್ದು, ಅಭೂತಪೂರ್ವ ಪ್ರತಿಕ್ರಿಯೆ ಲಭಿಸಿದೆ.
ಪ್ರತಿವರ್ಷ ಅಮರನಾಥ ಯಾತ್ರೆಯು ಲಕ್ಷಾಂತರ ಭಕ್ತರು ದೇಶದ ವಿವಿಧ ಭಾಗಗಳಿಂದ ಆಗಮಿಸುತ್ತಾರೆ. ಜುಲೈ-ಆಗಸ್ಟ್ (ಹಿಂದೂ ಕ್ಯಾಲೆಂಡರ್‌ನಲ್ಲಿ ಶ್ರಾವಣ ಮಾಸ)ನಲ್ಲಿ ಈ ಯಾತ್ರೆ ನಡೆಯುತ್ತದೆ. ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಿಂದ 141 ಕಿ.ಮೀ. ದೂರದಲ್ಲಿರುವ ಅಮರನಾಥ ಪವಿತ್ರ ಗುಹೆಯು ಲಡಾರ್ ಕಣಿವೆಯಲ್ಲಿದೆ. ಇದು ಹಿಮನದಿಗಳು ಮತ್ತು ಹಿಮದಿಂದ ಆವೃತವಾದ ಪರ್ವತಗಳಿಂದ ಕೂಡಿದೆ. ಹಿಮಾಲಯದ ಅಮರನಾಥ ಯಾತ್ರೆ ಬಹಳ ಹಳೆಯದು ಮತ್ತು ಪವಿತ್ರವಾದದ್ದು. ಇಲ್ಲಿ ಸುಮಾರು 5,000 ವರ್ಷಗಳಷ್ಟು ಹಳೆಯದಾದ ಶಿವಲಿಂಗವಿದೆ.
Leave a Comment