ಪ್ರತಿಷ್ಠಿತ ಚನ್ನಪಟ್ಟಣದಿಂದ ಡಿಕೆಶಿ ಪುತ್ರಿ ಐಶ್ವರ್ಯ ಕಣಕ್ಕೆ..!! – ಸ್ಪಷ್ಟನೆ ನೀಡಿದ ಡಿಸಿಎಂ ಡಿಕೆಶಿ ಹೇಳಿದ್ದೇನು?

ನ್ಯೂಸ್ ಆ್ಯರೋ : ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸದ್ಯ ಕರ್ನಾಟಕ ರಾಜಕೀಯ ವಲಯದಲ್ಲಿ ಸಾಕಷ್ಟು ಗಮನ ಸೆಳೆಯುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಬಿಜೆಪಿ ಮೈತ್ರಿಗೆ ಇದು ಪ್ರತಿಷ್ಠೆಯ ಕಣವಾಗಿದೆ.
ಹಾಗಾಗಿ ಈ ಪ್ರತಿಷ್ಠಿತ ಸ್ಪರ್ಧೆಗೆ ಯಾರು ಕಣಕ್ಕಿಳಿಯುತ್ತಾರೆ ಎನ್ನುವ ಕುತೂಹಲ ಹೆಚ್ಚಾಗುತ್ತಿದೆ. ಇದರ ನಡುವೆ ಹೊಸ ಹೆಸರೊಂದು ಹರಿದಾಡಿದ್ದು ರಾಜ್ಯ ರಾಜಕೀಯ ರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.
ಈ ಮೊದಲು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್ ವಿರುದ್ಧ ಸೋತ ಡಿ.ಕೆ. ಸುರೇಶ್ ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ ಡಿಕೆಶಿ ಇದನ್ನು ಅಲ್ಲಗಳೆದಿದ್ದರು.
ಇದರ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಅವರು ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿತ್ತು. ಚನ್ನಪಟ್ಟಣವನ್ನು ಪಡೆಯಲು ಡಿ.ಕೆ. ಶಿವಕುಮಾರ್ ತಮ್ಮ ಕುಟುಂಬದವರನ್ನೇ ಕಣಕ್ಕಿಳಿಸುತ್ತಾರೆ ಎನ್ನಲಾಗಿತ್ತು. ಆದರೆ ಇದೀಗ ಡಿಕೆಶಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ನಮ್ಮ ಕುಟುಂಬದಿಂದ ಇನ್ಯಾರಿಗೂ ಚುನಾವಣಾ ರಾಜಕೀಯಕ್ಕೆ ಬರಲು ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ನಮ್ಮ ಕುಟುಂಬದ ಯಾವುದೇ ಸದಸ್ಯರು ಚುನಾವಣಾ ರಾಜಕೀಯಕ್ಕೆ ಬರುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ನಾನು ಬಹಳ ಹಿಂದೆಯೇ ಸ್ಪಷ್ಟಪಡಿಸಿದ್ದೇನೆ. ಆದರೂ ಈ ಬಗ್ಗೆ ಆಗಾಗ ಸೃಷ್ಟಿಯಾಗುವ ವದಂತಿಗಳಿಗೆ ಯಾರೂ ಕಿವಿಗೊಡಬಾರದು ಎಂದು ವಿನಂತಿಸುತ್ತಿದ್ದೇನೆ ಎನ್ನುವ ಮೂಲಕ ಎಲ್ಲದಕ್ಕೂ ತೆರೆ ಎಳೆದಿದ್ದಾರೆ.
Leave a Comment