ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಗೆ ನಿರಾಳ
ಮಾಜಿ ಬಿಗ್ ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ಅವರು ಇತ್ತೀಚೆಗೆ ಸಂಕಷ್ಟಕ್ಕೆ ಸಿಲುಕಿದ್ದರು. ಸೋಡಿಯಂ ಮೆಟಲ್ ಬಳಸಿ ಕೃಷಿ ಹೊಂಡದಲ್ಲಿ ಸ್ಫೋಟ ಮಾಡಿದ್ದ ಪ್ರಕರಣದಲ್ಲಿ ಅವರನ್ನು ಮಿಡಿಗೇಶಿ ಠಾಣೆಯ ಪೊಲೀಸರು ಬಂಧಿಸಿದ್ದರು. ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಆದರೆ ಈಗ ಆರೋಪಿ ಡ್ರೋನ್ ಪ್ರತಾಪ್ಗೆ ಜಾಮೀನು ಮಂಜೂರು ಆಗಿದೆ. ಮಧುಗಿರಿ 4ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಡ್ರೋನ್ ಪ್ರತಾಪ್ಗೆ ಜಾಮೀನು ನೀಡಿದೆ. ಇದರಿಂದಾಗಿ ಅವರಿಗೆ ರಿಲೀಫ್ ಸಿಕ್ಕಂತಾಗಿದೆ.
ಹಳ್ಳಿಯಲ್ಲಿ ಮಾಡಿದ ಒಂದು ಪ್ರಯೋಗದಿಂದ ಇಷ್ಟೆಲ್ಲ ರಾದ್ಧಾಂತ ಆಗುತ್ತದೆ ಎಂದು ಡ್ರೋನ್ ಪ್ರತಾಪ್ ಊಹಿಸಿರಲಿಕ್ಕಿಲ್ಲ. ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಜನಕಲೋಟಿ ಗ್ರಾಮದ ಬಳಿ ಕೃಷಿ ಹೊಂಡದಲ್ಲಿ ಅವರು ಸೋಡಿಯಂ ಬಳಸಿ ಸ್ಫೋಟ ಮಾಡಿದ್ದರು. ಆ ವಿಡಿಯೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿದ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದರು.
ಇನ್ನು ಅರೆಸ್ಟ್ ಆದ ಬಳಿಕ ಡ್ರೋನ್ ಪ್ರತಾಪ್ಗೆ ಕೋರ್ಟ್ 10 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿತ್ತು. ಡಿಸೆಂಬರ್ 26ರ ತನಕ ಅವರು ನ್ಯಾಯಾಂಗ ಬಂಧನದಲ್ಲಿ ಇರಬೇಕಾಗಿತ್ತು. ಆದರೆ ಈಗ ಜಾಮೀನು ಮಂಜೂರು ಆಗಿರುವುದರಿಂದ ಬಿಡುಗಡೆ ಭಾಗ್ಯ ಸಿಗುತ್ತಿದೆ. ಜಾಮೀನು ಪ್ರಕ್ರಿಯೆ ಪೂರ್ಣಗೊಂಡ ಬಳಿಕ, ಡಿಸೆಂಬರ್ 24ರ ಇಂದು ಡ್ರೋನ್ ಪ್ರತಾಪ್ ಅವರು ಜೈಲಿನಿಂದ ಹೊರಬರುವ ಸಾಧ್ಯತೆ ಇದೆ.
ಡಿಸೆಂಬರ್ 12ರಂದು ಅವರನ್ನು ಬಂಧಿಸಲಾಗಿತ್ತು. ನಂತರ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಆ ಬಳಿಕ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.
Leave a Comment