ಷೇರು ಮಾರುಕಟ್ಟೆ ಹೆಸರಿನಲ್ಲಿ 40 ಲಕ್ಷ ರೂ. ವಂಚನೆ; ಕೇರಳದಲ್ಲಿ ಆರೋಪಿ ಬಂಧನ
ಮಂಗಳೂರು : ಷೇರು ಮಾರುಕಟ್ಟೆ ಹೆಸರಿನಲ್ಲಿ ಮಂಗಳೂರಿನ ವ್ಯಕ್ತಿಗೆ 40 ಲಕ್ಷ ರೂ. ವಂಚಿಸಿದ ಆರೋಪದ ಮೇರೆಗೆ ಕೇರಳದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ಕೇರಳದ ಕೊಯಿಕ್ಕೋಡ್ನ ಜಯಂತ್ ಪಿ (35) ಬಂಧಿತ ಆರೋಪಿ. ಅಪರಿಚಿತ ವ್ಯಕ್ತಿ ವಾಟ್ಸಪ್ನಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭಾಂಶ ಸಿಗಬಹುದು ಎಂಬುದಾಗಿ ತಿಳಿಸಿ, ಷೇರು ಮಾರುಕಟ್ಟೆಯಲ್ಲಿ ಹಣ ವಿನಿಯೋಗಿಸುವ ಬಗ್ಗೆ IIFL SECURITIES ಎಂಬ STOCK GROUP ಲಿಂಕನ್ನು ಕಳುಹಿಸಿದ್ದನು. ಈ ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿಯಿಂದ ಹಂತ ಹಂತವಾಗಿ ಒಟ್ಟು 40,64,609/-ಹಣವನ್ನು ಪಡೆದು ವಂಚನೆ ಮಾಡಿದ್ದ ಎಂದು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂದಿಸಿದಂತೆ ಆರೋಪಿ ಜಯಂತ್ ಪಿ ತನ್ನ ಬ್ಯಾಂಕ್ ಖಾತೆಯನ್ನು ಸೈಬರ್ ಅಪರಾಧಕ್ಕೆ ಉಪಯೋಗಿಸಿಕೊಂಡಿದ್ದ. ಈತನ ಬ್ಯಾಂಕ್ ಖಾತೆಯ ಮೇಲೆ ದೇಶಾದ್ಯಂತ ಸುಮಾರು 90ಕ್ಕೂ ಹೆಚ್ಚಿನ ದೂರು ಇರುವುದು ತನಿಖೆಯ ವೇಳೆ ಕಂಡುಬಂದಿದೆ. ಈ ಆರೋಪಿಯನ್ನು ಕೇರಳಕ್ಕೆ ತೆರಳಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇನ್ನು ನಾನಾ ಕಂಪನಿಗಳ 500ಕ್ಕೂ ಅಧಿಕ ಸಿಮ್‌ಗಳನ್ನು ದುಬೈನಲ್ಲಿರುವ ಸೈಬರ್ ವಂಚಕರಿಗೆ ಮಾರಾಟ ಮಾಡಿದ್ದ ಆರೋಪದಲ್ಲಿ, ಒಡಿಶಾ ಜಿಲ್ಲೆಯ ನೌಗಾನ ತಾಲೂಕು ನಿವಾಸಿ ಕಣಾತಲ ವಾಸುದೇವ ರೆಡ್ಡಿ(25) ಎಂಬಾತನನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧನಕ್ಕೊಳಗಾಗಿದ್ದ ನಡವೂಲು ವೀರ ವೆಂಕಟ ಸತ್ಯ ನಾರಾಯಣ ರಾಜು ಎಂಬಾತನ ಹೇಳಿಕೆಯ ಆಧಾರದಲ್ಲಿ ಸೈಬರ್ ವಂಚಕರಿಗೆ 500ಕ್ಕೂ ಅಧಿಕ ಸಿಮ್ ಮಾರಾಟ ಮಾಡಿದ್ದ ಆರೋಪದಲ್ಲಿ ಕಣಾತಲ ವಾಸುದೇವ ರೆಡ್ಡಿಯನ್ನು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ದುಬೈಗೆ ತೆರಳುತ್ತಿದ್ದಾಗ ವಶಕ್ಕೆ ಪಡೆದಿದ್ದಾರೆ. ಈತನ ವಿರುದ್ಧ ಮಂಗಳೂರು ಪೊಲೀಸರು LOC ಹೊರಡಿಸಿದ್ದರು. ಮಂಗಳೂರು ಪೊಲೀಸರು ದೆಹಲಿಗೆ ತೆರಳಿ ವಶಕ್ಕೆ ಪಡೆದುಕೊಂಡು ಬಂದಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
Leave a Comment