ಮಂಗಳೂರು ಏರ್‌ಪೋರ್ಟ್‌ಗೆ ‘ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ʼ ಸ್ಥಾನಮಾನ ನೀಡಿ; ಸಂಸದ ಚೌಟ ಅವರಿಂದ ವಿಮಾನಯಾನ ಸಚಿವರಿಗೆ ಮನವಿ

caption brijesh chawta meets minister of Civil Aviation gvt
Spread the love

ನ್ಯೂಸ್ ಆ್ಯರೋ: ಗಲ್ಫ್‌ ಸೇರಿದಂತೆ ಯುರೋಪ್‌ ಹಾಗೂ ಆಗ್ನೇಯ ಏಷ್ಯಾ ದೇಶಗಳಿಂದ ಹೆಚ್ಚಿನ ನೇರಾ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಸೇವೆ ಒದಗಿಸುವ ಹಿನ್ನಲೆಯಲ್ಲಿ ಮಂಗಳೂರು ಏರ್‌ಪೋರ್ಟ್‌ಗೆ “ಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌’ ಮಾನ್ಯತೆ ನೀಡುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರಿಗೆ ಮನವಿ ಸಲ್ಲಿಸಿದ್ದಾರೆ.

20241219 195551 1

ನವದೆಹಲಿಯಲ್ಲಿ ಇಂದು ಸಂಸದ ಕ್ಯಾ. ಚೌಟ ಅವರು, ಸಚಿವರನ್ನು ಖುದ್ದು ಭೇಟಿ ಮಾಡಿ ಮಂಗಳೂರು ವಿಮಾನ ನಿಲ್ದಾಣದ ಪ್ರಯಾಣಿಕರು ಹಾಗೂ ಕಾರ್ಗೋ ನಿರ್ವಹಣೆ ಸಾಮರ್ಥ್ಯಕ್ಕೆ ಅನುಗುಣವಾಗಿ ಹೆಚ್ಚಿನ ಸಂಖ್ಯೆಯ ವಿದೇಶಿ ನೇರ ಸಂಪರ್ಕದ ವಿಮಾನ ಸೇವೆ ಆರಂಭಿಸುವ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ. ಜತೆಗೆ, ಕರಾವಳಿ ಭಾಗದ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ʼಪಾಯಿಂಟ್‌ ಆಫ್‌ ಕಾಲ್‌ ಸ್ಟೇಟಸ್‌ʼ ಮನ್ನಣೆ ನೀಡುವುದರಿಂದ ಆರ್ಥಿಕ, ಸಾಮಾಜಿಕವಾಗಿ ಏನೆಲ್ಲಾ ಅನುಕೂಲವಾಗಲಿದೆ ಎಂಬ ಬಗ್ಗೆ ಸಚಿವರಿಗೆ ಸಂಸದರು ಇದೇ ವೇಳೆ ಮನವರಿಕೆ ಮಾಡಿದ್ದಾರೆ. ಜೊತೆಗೆ ಮಂಗಳೂರು ವಿಮಾನ ನಿಲ್ದಾಣದ ವಿಸ್ತರಣೆ ಮತ್ತು ಹೆಚ್ಚುವರಿ ವಿಮಾನ ಮಾರ್ಗದ ಸೌಲಭ್ಯವನ್ನು ಒದಗಿಸುವುದರ ಕುರಿತು ಕೂಡ ಚರ್ಚೆ ನಡೆಸಿದ್ದಾರೆ.

ಮಂಗಳೂರು ಏರ್‌ಪೋರ್ಟ್‌ ಕರ್ನಾಟಕವನ್ನು ವಿಶ್ವದ ಇತರೆ ನಗರಗಳ ಜತೆ ಸಂಪರ್ಕಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆದರೆ, ಮಂಗಳೂರು ಏರ್‌ಪೋರ್ಟ್‌ನಲ್ಲಿರುವ ಅತ್ಯಾಧುನಿಕ ಮೂಲಸೌಕರ್ಯ, ಪ್ರಯಾಣಿಕರ ಹೆಚ್ಚಳ ಹಾಗೂ ಕಾರ್ಗೋ ಬೇಡಿಕೆಗೆ ಹೋಲಿಸಿದರೆ ಇಲ್ಲಿಂದ ನೇರ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಸಂಖ್ಯೆ ಕಡಿಮೆಯಿದೆ. ಈ ಹಿನ್ನಲೆಯಲ್ಲಿ ಮಂಗಳೂರು ಏರ್‌ರ್ಪೋರ್ಟ್‌ಗೆ “ಪಾಯಿಂಟ್‌ ಆಫ್‌ ಕಾಲ್‌” ಮಾನ್ಯತೆ ನೀಡಿದರೆ ಈ ಸಮಸ್ಯೆ ಬಗೆಹರಿಯಲಿದ್ದು, ಆ ಮೂಲಕ, ಮಧ್ಯ ಪ್ರಾಚ್ಯ, ಯುರೋಪ್‌ ಮತ್ತಿತರ ಭಾಗಗಳಿಗೆ ನೇರ ವಿಮಾನಯಾನ ಸೇವೆ ಆರಂಭಿಸುವುದಕ್ಕೆ ಸಾಧ್ಯವಾಗುತ್ತದೆ. ಜತೆಗೆ, ಈ ಭಾಗದಿಂದ ಅಡಿಕೆ, ಗೇರುಬೀಜ, ತೈಲೋತ್ಪನ್ನ, ಸಮುದ್ರೋತ್ಪನ್ನಗಳ ಸಾಗಾಟ ವೃದ್ಧಿಸಿ ಕರಾವಳಿಯ ಆರ್ಥಿಕತೆ ಬೆಳವಣಿಗೆಗೂ ಸಹಕಾರಿಯಾಗಲಿದೆ ಎಂದು ಸಂಸದ ಕ್ಯಾ. ಚೌಟ ಹೇಳಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣಕ್ಕೆ “ಪಾಯಿಂಟ್‌ ಆಫ್‌ ಕಾಲ್‌” ಮನ್ನಣೆ ದೊರೆತರೆ ಕರಾವಳಿ ಭಾಗದ ಪ್ರವಾಸೋದ್ಯಮ, ಕೈಗಾರಿಕೆಗಳಿಗೂ ಉತ್ತೇಜನ ದೊರೆಯಲಿದೆ. ಅಷ್ಟೇಅಲ್ಲ; ಗಲ್ಫ್‌ ದೇಶಗಳಲ್ಲಿರುವ ಕರಾವಳಿಯ ಉದ್ದಿಮೆದಾರರಿಗೂ ದುಬೈ, ಅಬುಧಾಬಿ, ದೋಹಾ ಮತ್ತಿತರೆಡೆಗಳಿಂದ ನೇರ ವಿಮಾನ ಸಂಪರ್ಕ ದೊರೆಯಲಿದೆ. ಹೀಗಾಗಿ, ಮಂಗಳೂರು ಏರ್‌ಪೋರ್ಟ್‌ಗೆ ಆದಷ್ಟು ಬೇಗ “ಪಾಯಿಂಟ್‌ ಆಫ್‌ ಕಾಲ್‌ ಮಾನ್ಯತೆ” ನೀಡುವಂತೆ ಕ್ಯಾ. ಚೌಟ ಅವರು ವಿಮಾನಯಾನ ಸಚಿವರಿಗೆ ನೀಡಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ವಿಮಾನಯಾನ ಸೇವಾ ಒಪ್ಪಂದಗಳ ಪ್ರಕಾರ, ಅಂತರರಾಷ್ಟ್ರೀಯ ವಿಮಾನಗಳು ನಿರ್ದಿಷ್ಟ ವಿಮಾನ ನಿಲ್ದಾಣಗಳಿಗೆ ನೇರವಾಗಿ ಹಾರಾಟ ನಡೆಸಬಹುದು. ಇವುಗಳನ್ನು ‘ಪಿಒಸಿ’ ಎಂದು ಕರೆಯಲಾಗುತ್ತದೆ. ಈ ವ್ಯವಸ್ಥೆಯಿಂದ ವಿವಿಧ ದೇಶಗಳ ನಡುವೆ ನೇರ ವಿಮಾನ ಸಂಪರ್ಕ ಸುಧಾರಿಸುತ್ತದೆ. ಪ್ರಯಾಣಿಕರಿಗೆ ಹೆಚ್ಚು ಆಯ್ಕೆಗಳು ಮತ್ತು ಅನುಕೂಲತೆ ದೊರೆಯುತ್ತದೆ.

Leave a Comment

Leave a Reply

Your email address will not be published. Required fields are marked *

error: Content is protected !!