SC-ST ಸಮುದಾಯದವರ ಭೂಮಿ ಮಾರಾಟಕ್ಕೆ ಹೊಸ ನಿಯಮ ರೂಪಿಸಿದ ಸರ್ಕಾರ – PTCL ಕಾಯ್ದೆ ತಿದ್ದುಪಡಿ : ವಿವರಗಳು ಇಲ್ಲಿವೆ…
ನ್ಯೂಸ್ ಆ್ಯರೋ : ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯಕ್ಕೆ ಸರ್ಕಾರ ನೀಡಿದ್ದ ಭೂಮಿಯನ್ನು ವರ್ಗಾವಣೆ ಮಾಡಲು ಹಾಲಿ ಇರುವ ಕಾಯ್ದೆಯಲ್ಲಿನ ನಿಯಮಗಳಿಗೆ ತಿದ್ದುಪಡಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕರ್ನಾಟಕ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ (ಕೆಲವು ಭೂಮಿಗಳ ವರ್ಗಾವಣೆಯ ನಿಷೇಧ) ಅಧಿನಿಯಮ, 1978 (1979ರ ಕರ್ನಾಟಕ ಅಧಿನಿಯಮ 2) ರ 10ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ರಚಿಸಲು ಉದ್ದೇಶಿಸಿರುವ ಕರ್ನಾಟಕ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ (ಕೆಲವು ಭೂಮಿಗಳ ವರ್ಗಾವಣೆಯ ನಿಷೇಧ) ನಿಯಮಗಳು, 1979 ಅನ್ನು ಮತ್ತಷ್ಟು ತಿದ್ದುಪಡಿ ಮಾಡಲು ಈ ಕೆಳಗಿನ ನಿಯಮಗಳ ಕರಡನ್ನು, ಪ್ರಕರಣ 10ರ ಮೂಲಕ ಅಗತ್ಯಪಡಿಸಲಾದಂತೆ 15 ದಿನಗಳ ಒಳಗಾಗಿ ಇದರಿಂದ ಬಾಧಿತವಾಗಿರುವ ಸಂಭವಿರುವ ಎಲ್ಲಾ ವ್ಯಕ್ತಿಗಳಿಂದ ಆಕ್ಷೇಪಣೆಗಳು ಅಥವಾ ಸಲಹೆಗಳನ್ನು ಆಹ್ವಾನಿಸಿ ದಿನಾಂಕ 12.03.2024 ರ ಕರ್ನಾಟಕ ರಾಜ್ಯಪತ್ರದ 4ನೇ ಎ ಭಾಗದಲ್ಲಿ ಪ್ರಕಟಿಸಿರುವುದರಿಂದ, ಮತ್ತು ಈ ರಾಜ್ಯಪತ್ರವನ್ನು ದಿನಾಂಕ 12.03.2024 ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿರುವುದರಿಂದ ಮತ್ತು ಮೇಲೆ ನಿರ್ದಿಷ್ಟಪಡಿಸಿದ ಅವಧಿಯೊಳಗೆ ರಾಜ್ಯ ಸರ್ಕಾರದಿಂದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸ್ವೀಕರಿಸಿ ಪರಿಗಣಿಸಲಾಗಿದೆ.
ಆದ್ದರಿಂದ ಈಗ, ಕರ್ನಾಟಕ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ (ಕೆಲವು ಭೂಮಿಗಳ ವರ್ಗಾವಣೆಯ ನಿಷೇಧ) ಅಧಿನಿಯಮ, 1978 (1979ರ ಕರ್ನಾಟಕ ಅಧಿನಿಯಮ 2)ರ 10ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಕರ್ನಾಟಕ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ (ಕೆಲವು ಭೂಮಿಗಳ ವರ್ಗಾವಣೆಯ ನಿಷೇಧ) ಅಧಿನಿಯಮ, 1979 ರ ನಿಯಮಗಳನ್ನು ಈ ಕೆಳಗಿನಂತೆ ತಿದ್ದುಪಡಿ ಮಾಡುತ್ತದೆ.
- ಹೆಸರು ಮತ್ತು ಪ್ರಾರಂಭ-(1) ಈ ನಿಯಮಗಳನ್ನು ಕರ್ನಾಟಕ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ (ಕೆಲವು ಭೂಮಿಗಳ ವರ್ಗಾವಣೆಯ ನಿಷೇಧ) (ತಿದ್ದುಪಡಿ) ನಿಯಮಗಳು, 2024 ಎಂದು ಕರೆಯತಕ್ಕದ್ದು.
(2) ಇವುಗಳು ಅಧಿಕೃತ ರಾಜಪತ್ರದಲ್ಲಿ ಅವುಗಳ ಅಂತಿಮ ಪ್ರಕಟಣೆಯ ದಿನಾಂಕದಿಂದ ಜಾರಿಗೆ ಬರತಕ್ಕದ್ದು. - ಹೊಸ ನಿಯಮ 6ರ ಸೇರ್ಪಡೆ – ಕರ್ನಾಟಕ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ (ಕೆಲವು ಭೂಮಿಗಳ ವರ್ಗಾವಣೆಯ ನಿಷೇಧ) ನಿಯಮಗಳು, 1979, (ಇದರಲ್ಲಿ ಇನ್ನುಮುಂದೆ ಸದರಿ ನಿಯಮಗಳೆಂದು ಉಲ್ಲೇಖಿಸಲಾಗಿದೆ) ರಲ್ಲಿ 5ನೇ ನಿಯಮದ ತರುವಾಯ ಈ ಮುಂದಿನದನ್ನು ಸೇರಿಸತಕ್ಕದ್ದು ಎಂದರೆ:-
ಮಂಜೂರಾದ ಭೂಮಿಯ ವರ್ಗಾವಣೆ ಅಥವಾ ಸ್ವಾಧೀನತೆಗಾಗಿ ಅನುಮತಿ.-(1) ಪ್ರಕರಣ 4ರ ಉಪಪ್ರಕರಣ (2)ರ ಉಪಬಂಧಗಳಡಿಯಲ್ಲಿ ಪೂರ್ವ ಅನುಮತಿ ಕೋರುವ ಯಾರೇ ಮಂಜೂರಾತಿ ಪಡೆದವನು ಅಥವಾ ಆತನ ಕಾನೂನು ಸಮ್ಮತ ವಾರಸುದಾರನು ನಮೂನೆ ||| ರಲ್ಲಿ ಅರ್ಜಿ ಸಲ್ಲಿಸತಕ್ಕದ್ದು.
(2) ಮಂಜೂರಾತಿ ಪಡೆದವನು ಅಥವಾ ಆತನ ಕಾನೂನುಸಮ್ಮತ ವಾರಸುದಾರನು ಭೂಮಿ ಇರುವ ಸಂಬಂಧಪಟ್ಟ ತಾಲ್ಲೂಕಿನ ತಹಶೀಲ್ದಾರನಿಗೆ ನಿರ್ದಿಷ್ಟ ನಮೂನೆಯಲ್ಲಿ ಭರ್ತಿಮಾಡಲಾದ ಅರ್ಜಿಯನ್ನು ಖುದ್ದಾಗಿ ಸಲ್ಲಿಸತಕ್ಕದ್ದು.
(3) ತಹಶೀಲ್ದಾರನು ತಾನು ಸೂಕ್ತವೆಂದು ಭಾವಿಸಬಹುದಾದಂಥ ವಿಚಾರಣೆಗಳನ್ನು ಮಾಡಿದ ತರುವಾಯ ಸಲ್ಲಿಸಲಾದ ದಸ್ತಾವೇಜುಗಳ ಸಂಪೂರ್ಣ ಪರಿಶೀಲನೆಯನ್ನು ನಡೆಸಿ ಮತ್ತು ಆ ವರದಿಯಲ್ಲಿ ತನ್ನ ಅಭಿಪ್ರಾಯಗಳನ್ನು ದಾಖಲಿಸಿ ಉಪವಿಭಾಗಾಧಿಕಾರಿಗೆ ಸಲ್ಲಿಸತಕ್ಕದ್ದು.
4) ಉಪವಿಭಾಗಾಧಿಕಾರಿಯು (3)ನೇ ಉಪನಿಯಮದ ಅಡಿಯಲ್ಲಿ ವರದಿಯನ್ನು ಸ್ವೀಕರಿಸಿದ ತರುವಾಯ, ವರದಿಯನ್ನು ಪರ್ಯಾಲೋಚಿಸಿ, ಭೂಮಿಯ ವರ್ಗಾವಣೆಗಾಗಿ ಅನುಮತಿ ನೀಡಬಹುದೇ ಎಂಬ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಶಿಫಾರಸ್ಸು ಮಾಡತಕ್ಕದ್ದು:
ಪರಂತು, ಉಪವಿಭಾಗಾಧಿಕಾರಿಯು ದಬ್ಬಾಳಿಕೆ, ತಪ್ಪು ನಿರೂಪಣೆ, ಮೋಸ ಅಥವಾ ಭೂಮಿಯ ತಪ್ಪು ಮೌಲ್ಯನಿರ್ಧರಣೆ ಇರುವುದನ್ನು ಖಚಿತಪಡಿಸಿಕೊಳ್ಳಲು ವಿಚಾರಣೆಯನ್ನು ನಡೆಸುವ ಅಧಿಕಾರ ಹೊಂದಿರತಕ್ಕದ್ದು ಮತ್ತು ಆತನು ಇವುಗಳಲ್ಲಿ ಯಾವುದೇ ಒಂದು ಇದೆಯೆಂಬುದನ್ನು ಮನಗಂಡರೆ ಭೂಮಿಯ ವರ್ಗಾವಣೆಗಾಗಿ ಅನುಮತಿ ನಿರಾಕರಿಸುವಂತೆ ಶಿಫಾರಸು ಮಾಡತಕ್ಕದ್ದು.
(5) ಜಿಲ್ಲಾಧಿಕಾರಿಯು, ಉಪನಿಯಮ (4)ರ ಮೇರೆಗೆ ವರದಿಯನ್ನು ಸ್ವೀಕರಿಸಿದ ನಂತರ ಮತ್ತು ದಸ್ತಾವೇಜುಗಳು ಹಾಗೂ ವರದಿಗಳನ್ನು ಪರಿಶೀಲಿಸಿದ ನಂತರ, ಕಂದಾಯ ಆಯುಕ್ತರಿಗೆ ಭೂಮಿಯ ವರ್ಗಾವಣೆಯ ಕುರಿತ ಅನುಮತಿಯ ಅರ್ಜಿಯನ್ನು ತಮ್ಮ ಶಿಫಾರಸ್ಸುಗಳೊಂದಿಗೆ ಸಲ್ಲಿಸತಕ್ಕದ್ದು.
(6) ಕಂದಾಯ ಆಯುಕ್ತರು ಉಪನಿಯಮ (5)ರ ಮೇರೆಗೆ ವರದಿಯನ್ನು ಸ್ವೀಕರಿಸಿದ ನಂತರ, ಅರ್ಜಿಯನ್ನು ಪರಿಷ್ಕರಿಸಿ, ಭೂಮಿಯ ವರ್ಗಾವಣೆಗೆ ಸರ್ಕಾರದ ಅನುಮತಿ / ನಿರ್ಧಾರಕ್ಕಾಗಿ ಅಪರ ಮುಖ್ಯ ಕಾರ್ಯದರ್ಶಿ / ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿ (ಕಂದಾಯ) ಯವರಿಗೆ ಭೂಮಿಯ ವರ್ಗಾವಣೆಯ ಅನುಮತಿ ಕುರಿತ ಎಲ್ಲಾ ಅರ್ಜಿಗಳನ್ನು ತಮ್ಮ ಶಿಫಾರಸ್ಸುಗಳೊಂದಿಗೆ ಸಲ್ಲಿಸತಕ್ಕದ್ದು.
7) ಅಪರ ಮುಖ್ಯ ಕಾರ್ಯದರ್ಶಿ 1 ಪ್ರಧಾನ ಕಾರ್ಯದರ್ಶಿ / ಕಾರ್ಯದರ್ಶಿ (ಕಂದಾಯ)ಯವರು, ಉಪನಿಯಮ (6)ರ ಮೇರೆಗೆ ಅರ್ಜಿಯನ್ನು ಸ್ವೀಕರಿಸಿದ ನಂತರ ಮತ್ತು ತಹಶೀಲ್ದಾರರು ಸಲ್ಲಿಸಿದ ವರದಿಯನ್ನು ಹಾಗೂ ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿ ಮತ್ತು ಕಂದಾಯ ಆಯುಕ್ತರು ಸಲ್ಲಿಸಿದ ಶಿಫಾರಸ್ಸುಗಳನ್ನು ಪರಿಶೀಲಿಸಿದ ಮೇಲೆ, ಸರ್ಕಾರದ ಅನುಮತಿ/ ಅನುಮೋದನೆ/ ನಿರ್ಧಾರವನ್ನು ಪಡೆದ ನಂತರ, ರಾಜ್ಯ ಸರ್ಕಾರದ ಅನುಮತಿ/ಅನುಮೋದನೆ/ನಿರ್ಧಾರವನ್ನು ಕಂದಾಯ ಆಯುಕ್ತರಿಗೆ ತಿಳಿಸತಕ್ಕದ್ದು. ಪರವಾಗಿ
(8) ಭೂಮಿಯ ವರ್ಗಾವಣೆಗೆ ಅನುಮೋದನೆಯನ್ನು ಪಡೆದ ಮೇಲೆ, ಕಂದಾಯ ಆಯುಕ್ತರು ಭೂಮಿಯ ವರ್ಗಾವಣೆಗಾಗಿ ಅಗತ್ಯ ಅನುಮತಿಯನ್ನು ನೀಡಿ ಆದೇಶವನ್ನು ಹೊರಡಿಸತಕ್ಕದ್ದು.
(9) ಕಂದಾಯ ಆಯುಕ್ತರು ಉಪನಿಯಮ (8) ರಡಿ ಅಗತ್ಯ ಅನುಮತಿಯನ್ನು ನೀಡಿರುವಲ್ಲಿ, ಉಪವಿಭಾಗಾಧಿಕಾರಿಯು ಭೂಮಿಯ ವರ್ಗಾವಣೆಗೆ ಅನುವಾಗುವಂತೆ ಸದರಿ ಭೂಮಿಯಿಂದ ಪಿಟಿಸಿಎಲ್ ನಿಶಾನೆಯನ್ನು ತೆಗೆದು ಹಾಕತಕ್ಕದ್ದು.
(10) ಭೂ ವರ್ಗಾವಣೆಗೆ ಅನುಮತಿಯನ್ನು ನೀಡಿರುವ ಅಥವಾ ಅನುಮತಿಯನ್ನು ನಿರಾಕರಿಸಿರುವ ಕಂದಾಯ ಆಯುಕ್ತರ ಆದೇಶದಿಂದ ಬಾಧಿತನಾದ ಯಾರೇ ವ್ಯಕ್ತಿಯು, ಅಂಥ ಆದೇಶವನ್ನು ಹೊರಡಿಸಿದ ದಿನಾಂಕದಿಂದ ಮೂವತ್ತು ದಿನಗಳ ಅವಧಿಯೊಳಗೆ ಅಂಥ ಆದೇಶವನ್ನು ಪುನರಾವಲೋಕಿಸುವಂತೆ ಕೋರಿ ಅಪರ ಮುಖ್ಯ ಕಾರ್ಯದರ್ಶಿ / ಪ್ರಧಾನ ಕಾರ್ಯದರ್ಶಿ / ಕಾರ್ಯದರ್ಶಿ (ಕಂದಾಯ) ಇವರಿಗೆ ಮನವಿಯನ್ನು ಸಲ್ಲಿಸಬಹುದು.
Leave a Comment