ಅಜಾತಶತ್ರು ಎಸ್. ಎಂ. ಕೃಷ್ಣ ರಾಜಕೀಯ ಜೀವನ ಹೇಗಿತ್ತು?; ಅವರಿಗೆ ಎದುರಾದ ಸವಾಲುಗಳೇನು? ಜೀವನದ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ
ನ್ಯೂಸ್ ಆ್ಯರೋ: ಎಸ್.ಎಂ. ಕೃಷ್ಣ ರಾಜ್ಯ ಕಂಡ ಅಪರೂಪದ ಮುಖ್ಯಮಂತ್ರಿಗಳಲ್ಲಿ ಒಬ್ಬರು. ಬೆಂಗಳೂರನ್ನು ಸಿಂಗಾಪುರ ಮಾಡುವ ಕನಸಿನೊಂದಿಗೆ ಸಿಲಿಕಾನ್ ಸಿಟಿಯಾಗಲು ಪ್ರಮುಖ ಕೊಡುಗೆ ನೀಡಿದ್ದರು. ಭೀಕರ ಬರಗಾಲ, ಡಾ. ರಾಜ್ ಕುಮಾರ್ ಅಪಹರಣದಂತಹ ಸಂದಿಗ್ಧ ಸ್ಥಿತಿಯಲ್ಲಿ ರಾಜ್ಯವನ್ನು ಆಳ್ವಿಕೆ ಮಾಡಿದ್ದ ಹೆಗ್ಗಳಿಕೆ ಅವರದು. ಕಾಂಗ್ರೆಸ್ನಿಂದ ಮುಖ್ಯಮಂತ್ರಿ, ಕೇಂದ್ರ ಸಚಿವ, ರಾಜ್ಯಪಾಲರಾಗಿದ್ದ ಕೃಷ್ಣ ಅವರು ಬದಲಾದ ರಾಜಕೀಯ ಸ್ಥಿತ್ಯಂತರದ ನಡುವೆ ಬಿಜೆಪಿ ಸೇರಿ ರಾಜಕೀಯ ನಿವೃತ್ತಿ ಘೋಷಿಸಿದ್ದರು.
1932ರ ಮೇ 1 ರಂದು ಎಸ್.ಸಿ. ಮಲ್ಲಯ್ಯ ಮತ್ತು ತಾಯಮ್ಮ ದಂಪತಿ ಪುತ್ರರಾಗಿ ಸೋಮನಹಳ್ಳಿಯಲ್ಲಿ ಜನಿಸಿದ ಎಸ್.ಎಂ.ಕೃಷ್ಣ ಅವರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಪದವೀಧರರಾದ ನಂತರ ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಓದಿದರು. ಬಳಿಕ ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿರುವ ಸದರ್ನ್ ಮೆಥಡಿಸ್ಟ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದರು. ವಾಷಿಂಗ್ಟನ್ನಲ್ಲಿರುವ ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಪ್ರತಿಷ್ಠಿತ ಫುಲ್ಬ್ರೈಟ್ ವಿದ್ಯಾರ್ಥಿವೇತನವನ್ನು ಪಡೆದುಕೊಂಡರು. ಭಾರತಕ್ಕೆ ಮರಳಿದ ನಂತರ ಬೆಂಗಳೂರಿನ ರೇಣುಕಾಚಾರ್ಯ ಲಾ ಕಾಲೇಜಿನಲ್ಲಿ ಕಾನೂನು ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು.
ವಿಧಾನಸಭೆಗೆ ಮೊದಲ ಬಾರಿ 1962 ರಲ್ಲಿ ಮದ್ದೂರು ಕ್ಷೇತ್ರದಿಂದ ಚುನಾಯಿತರಾದರು. ಆದರೆ 1967 ರಲ್ಲಿ ನಡೆದ ಚುನಾವಣೆಯಲ್ಲಿ ಪ್ರಜಾ ಸೋಷಿಯಲಿಸ್ಟ್ ಪಕ್ಷದಿಂದ ಸ್ಪರ್ಧಿಸಿ ಪರಾಜಿತಗೊಂಡಿದ್ದರು. ಆದರೆ 1968ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಚುನಾಯಿತರಾದರು. 1971ರಲ್ಲಿ ಕಾಂಗ್ರೆಸ್ನಿಂದ ಕಣಕ್ಕಿಳಿದು ಮಂಡ್ಯದಿಂದ ಮರು ಚುನಾಯಿತರಾಗಿ, 1972 ರಲ್ಲಿ ಕರ್ನಾಟಕ ವಿಧಾನ ಪರಿಷತ್ತಿಗೆ ಚುನಾಯಿತರಾದರು. ಇದೇ ಸಮಯದಲ್ಲಿ ವಾಣಿಜ್ಯ, ಉದ್ಯಮ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದರು. 1980 ರಲ್ಲಿ ಮತ್ತೆ ಮಂಡ್ಯ ಸಂಸದರಾದರು. ಆದರೆ 1984 ರಲ್ಲಿ ಮಂಡ್ಯದಲ್ಲಿ ಸೋಲನ್ನನುಭವಿಸಿದರು.
1983ರಲ್ಲಿ ಕೇಂದ್ರ ಉದ್ಯಮ ಖಾತೆ ಮತ್ತು ರಾಜ್ಯ ಸಚಿವರಾಗಿ ಮತ್ತು 1984 ರಲ್ಲಿ ಕೇಂದ್ರ ವಿತ್ತ ಖಾತೆಯ ರಾಜ್ಯ ಸಚಿವರಾದರು.1989 ರಲ್ಲಿ ವಿಧಾನಸಭೆಗೆ ಆಯ್ಕೆಯಾಗಿದ್ದ ಕೃಷ್ಣ 1992ರ ವರೆಗೆ ವಿಧಾನಸಭೆಯ ಸ್ಪೀಕರ್ ಆಗಿ ನೇಮಿತರಾಗಿದ್ದರು. 1993 ರಿಂದ 1994ರ ವರೆಗೆ ಕರ್ನಾಟಕದ ಉಪ-ಮುಖ್ಯಮಂತ್ರಿಗಳಾದರು. 1995ರ ವಿಧಾನಸಭಾ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಎಸ್ಎಂ ಕೃಷ್ಣ ಸೋಲು ಅನುಭವಿಸಬೇಕಾಯಿತು. ಆ ವೇಳೆ ರಾಜಕೀಯದಲ್ಲಿ ಉನ್ನತ ಮಟ್ಟದಲ್ಲಿದ್ದ ಕೃಷ್ಣ ಅವರ ಸೋಲು ವ್ಯಾಪಕ ಚರ್ಚೆಗೆ ಸಹ ಕಾರಣವಾಗಿತ್ತು. 1996ರಲ್ಲಿ ರಾಜ್ಯಸಭೆಗೆ ನೇಮಕಗೊಂಡ ಕೃಷ್ಣ, 1999 ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದರು. 1999 ರಲ್ಲಿ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಎಸ್. ಎಂ. ಕೃಷ್ಣ ಮುನ್ನೆಡಸಿದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 132 ಸೀಟುಗಳನ್ನು ಗೆದ್ದು ಅಧಿಕಾರದ ಗದ್ದುಗೆಗೇರಿತು.
ರಾಜ್ಯದಲ್ಲಿ ಎಸ್ಎಂ ಕೃಷ್ಣ ಆಳ್ವಿಕೆ ಇಡೀ ದೇಶದಲ್ಲೇ ಸಾಕಷ್ಟು ಸದ್ದು ಮಾಡಿತ್ತು. ಬೆಂಗಳೂರನ್ನು ಸಿಂಗಾಪುರ ಮಾಡುತ್ತೇನೆ ಎನ್ನುವ ಎಸ್.ಎಂ ಕೃಷ್ಣ ಹೇಳಿಕೆ ಇಡೀ ದೇಶವೇ ರಾಜ್ಯದ ಕಡೆ ತಿರುಗುವಂತೆ ಮಾಡಿತ್ತು. ಬೆಂಗಳೂರು ಸಿಂಗಾಪರ ಆಗದಿದ್ದರೂ ಐಟಿ ಸಿಟಿಯಾಯಿತು. ಐಟಿ ಕ್ಯಾಪಿಟಲ್ ಆಗಿ ದೇಶದ ಗಮನ ಸೆಳೆಯಿತು. ಇದರ ಜೊತೆಗೆ ವಿಧಾನಸೌಧದ ಪಕ್ಕದಲ್ಲಿ ವಿಧಾನಸೌಧದ ಪ್ರತಿಕೃತಿಯಂತೆ ವಿಕಾಸಸೌಧ ನಿರ್ಮಿಸಿದರು. ವಿಕಾಸಸೌಧದ ನಿರ್ಮಾತೃ ಎನ್ನುವ ಹೆಗ್ಗಳಿಕೆ ಪಡೆದುಕೊಂಡರು.
ಮದ್ದೂರು ಕ್ಷೇತ್ರದಿಂದ 3 ಬಾರಿ ಹಾಗೂ ಚಾಮರಾಜಪೇಟೆಯಿಂದ 1 ಬಾರಿ ಶಾಸಕರಾಗಿದ್ದರು. ಮೂರು ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ, 1 ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು. 2 ಬಾರಿ ರಾಜ್ಯಸಭಾ ಸದಸ್ಯರಾಗಿದ್ದರು. ಕರ್ನಾಟಕದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸ್ಪೀಕರ್, ಕೈಗಾರಿಕೆ, ವಾಣಿಜ್ಯ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ, ರಾಜ್ಯಸಭೆ ಹೀಗೆ ದೇಶದ ನಾಲ್ಕೂ ಸದನಗಳ ಸದಸ್ಯರಾಗಿದ್ದ ಅಪರೂಪದ ರಾಜಕಾರಣಿಗಳಲ್ಲಿ ಕೃಷ್ಣ ಒಬ್ಬರು. ಶಾಸಕ, ಪರಿಷತ್ ಸದಸ್ಯ, ಸಚಿವ, ಸಂಸದ, ರಾಜ್ಯಸಭೆ ಸದಸ್ಯ, ಕೇಂದ್ರ ಸಚಿವ, ರಾಜ್ಯಪಾಲ ಇಷ್ಟು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ವಿರಳ ರಾಜಕಾರಣಿಗಳಲ್ಲಿ ಕೃಷ್ಣ ಒಬ್ಬರಾಗಿದ್ದರು.
ಎಸ್.ಎಂ. ಕೃಷ್ಣ ಅವರಿಗೆ ಎದುರಾದ ಸವಾಲು: ಎಸ್.ಎಂ. ಕೃಷ್ಣ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ವೇಳೆ ಎರಡು ಘಟನೆಗಳು ನಡೆದು ದೊಡ್ಡ ಸವಾಲು ಎದುರಾಗಿತ್ತು. ಆಗ ತಮ್ಮ ಚಾಕಚಕ್ಯತೆಯಿಂದ ನಿಭಾಯಿಸುವಲ್ಲಿ ಎಸ್.ಎಂ.ಕೃಷ್ಣ ಯಶಸ್ವಿಯಾಗಿದ್ದರು.
ವರನಟ ಡಾ. ರಾಜ್ಕುಮಾರ್ ಅವರನ್ನು ಗಾಜನೂರಿನ ನಿವಾಸದಿಂದ ಕಾಡುಗಳ್ಳ ವೀರಪ್ಪನ್ ಅಪಹರಣ ಮಾಡಿ, ಮೂರು ತಿಂಗಳ ಕಾಲ ಒತ್ತೆಯಾಗಿ ಇರಿಸಿಕೊಂಡಿದ್ದ. ಆಗ ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟಗಳು ನಡೆದವು. ಬಳಿಕ ಕೃಷ್ಣ ಅವರು ಅಂದಿನ ತಮಿಳುನಾಡು ಸಿಎಂ ಜೊತೆಗೆ ಮಾತುಕತೆ ನಡೆಸಿ, ನಂತರ ಸಂಧಾನಕಾರರನ್ನು ಕಾಡಿಗೆ ಕಳುಹಿಸಿ ವೀರಪ್ಪನ್ ನನ್ನು ಸಂಪರ್ಕ ಮಾಡಿ, ಅಂತೂ ಇಂತೂ 108 ದಿನಗಳ ನಂತರ ರಾಜ್ಕುಮಾರ್ ಅವರನ್ನು ಕ್ಷೇಮವಾಗಿ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇನ್ನೊಂದು ಘಟನೆ ಎಂದರೆ ಕೃಷ್ಣ ಅವರ ಅವಧಿಯಲ್ಲಿ ರಾಜ್ಯದಲ್ಲಿ ಮಳೆ ಕೈಕೊಟ್ಟು ಭೀಕರ ಬರಗಾಲ ಸೃಷ್ಟಿಯಾಗಿತ್ತು. ಕೆರೆ ಕಟ್ಟೆಗಳು, ಜಲಾಶಯಗಳು ನೀರಿಲ್ಲದೆ ಒಣಗಿ ನೀರಿಗಾಗಿ ಹಾಹಾಕಾರವೇ ಎದ್ದಿತ್ತು. ಅನಾವೃಷ್ಟಿಯಿಂದ ಕಂಗೆಟ್ಟಿದ್ದ ಕೃಷ್ಣ ಸರ್ಕಾರ ಜನರ ರಕ್ಷಣೆಗೆ ವೈಜ್ಞಾನಿಕವಾಗಿ ಮೋಡ ಬಿತ್ತನೆಯಂತಹ ಪ್ರಯತ್ನ ನಡೆಸಿ ಮಳೆ ತರಿಸುವ ವಿಫಲ ಪ್ರಯತ್ನ ನಡೆಸಿತ್ತು. ಈ ವೇಳೆ ತಮಿಳುನಾಡು ಕಾವೇರಿ ನೀರಿಗಾಗಿ ಒತ್ತಡ ಹಾಕಿತ್ತು. ಮಂಡ್ಯ ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ತೀವ್ರ ಸ್ವರೂಪದ ಹೋರಾಟಗಳು ಕೂಡ ನಡೆದವು.
2004 ರಲ್ಲಿ ಕೃಷ್ಣ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಿದ ಕಾಂಗ್ರೆಸ್ ಹೀನಾಯ ಸೋಲು ಕಂಡಿತು. ಚಾಮರಾಜಪೇಟೆಯಿಂದ ಕೃಷ್ಣ ಗೆದ್ದರೂ ಕಾಂಗ್ರೆಸ್ ಎರಡನೇ ಸ್ಥಾನಕ್ಕೆ ತಳ್ಳಲ್ಪಪಟ್ಟಿತು. ಯಾವ ಪಕ್ಷಕ್ಕೂ ಬಹುಮತ ಇಲ್ಲದ ಕಾರಣ ರಾಜ್ಯದಲ್ಲಿ ಮೊದಲ ಬಾರಿಗೆ ಮೈತ್ರಿ ಸರ್ಕಾರ ರಚನೆಯಾಯಿತು. ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗುವ ಪ್ರಯತ್ನ ಸಫಲವಾಗಲ್ಲ. ಹಾಗಾಗಿ ಮೈತ್ರಿ ಸರ್ಕಾರದಿಂದ ಹೊರಗುಳಿದ ಕೃಷ್ಣ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಮಹಾರಾಷ್ಟ್ರ ರಾಜ್ಯಪಾಲರನ್ನಾಗಿ ನೇಮಿಸಿತು.
2004- 2008 ರವರೆಗೆ ಮಹಾರಾಷ್ಟ್ರ ರಾಜ್ಯಪಾಲರಾಗಿದ್ದ ಕೃಷ್ಣರನ್ನು ಮನಮೋಹನ್ ಸಿಂಗ್ ಸಂಪುಟದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರನ್ನಾಗಿ ಮಾಡಿ ರಾಜ್ಯಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. 2009- 2012ರ ವರೆಗೆ ವಿದೇಶಾಂಗ ಸಚಿವರಾಗಿ ಕೃಷ್ಣ ಕಾರ್ಯ ನಿರ್ವಹಣೆ ಮಾಡಿದ್ದರು. ಬದಲಾದ ರಾಜಕೀಯ ವಿದ್ಯಮಾನಗಳಲ್ಲಿ ಏಕಾಏಕಿ ಸಂಪುಟದಿಂದ ಕೃಷ್ಣ ಅವರನ್ನು ಕೈಬಿಡಲಾಗಿತ್ತು. ನಂತರ ಕಾಂಗ್ರೆಸ್ನಿಂದ ಅಂತರ ಕಾಯ್ದುಕೊಂಡಿದ್ದ ಕೃಷ್ಣ 2017ರ ಜನವರಿ 28 ಬೆಳಗ್ಗೆ 11 ಗಂಟೆಗೆ ಅಧಿಕೃತವಾಗಿ ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಘೋಷಣೆ ಮಾಡಿ ಬಿಜೆಪಿ ಸೇರಿದ್ದರು. ಯಾವುದೇ ಹುದ್ದೆಯ ನಿರೀಕ್ಷೆ ಇಲ್ಲದೆ ಬಿಜೆಪಿಯಲ್ಲಿದ್ದು ಮಾರ್ಗದರ್ಶನ ಮಾಡುವುದಕ್ಕೆ ಸೀಮಿತರಾಗಿದ್ದರು.
ಕರ್ನಾಟಕಕ್ಕೆ ಎಸ್ಎಂ ಕೃಷ್ಣ ಕೊಡುಗೆಗಳೇನು?
ಎಸ್ಎಂ ಕೃಷ್ಣ ಅವರು ಹಲವು ಯೋಜನೆಗಳಲ್ಲಿ ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘ ಕೂಡ ಒಂದು. ಮಹಿಳೆಯರ ಸಬಲೀಕರಣಕ್ಕಾಗಿ ಮತ್ತು ಆರ್ಥಿಕ ಸ್ವಾವಲಂಬನೆಗಾಗಿ ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘ ಆರಂಭಿಸಿದರು. ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘ ಮನೆ ಮನೆ ತಲುಪಿದ್ದು, ಇದರಿಂದ ಕೋಟ್ಯಾಂತರ ಮಹಿಳೆಯರು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.
ಕರ್ನಾಟಕದ ಅಸಂಘಟಿತ ವಲಯದ ಕಾರ್ಮಿಕರು, ಮಧ್ಯಮ ಮತ್ತು ಕಡಿಮೆ-ಮಧ್ಯಮ ಆದಾಯ ಹೊಂದಿದವರನ್ನು ಕೇಂದ್ರೀಕರಿಸಿ, ಎಲ್ಲರಿಗೂ ಕೈಗೆಟುಕುವ ಆರೋಗ್ಯ ಸೇವೆಯನ್ನು ನೀಡಲು ಯಶಸ್ವಿನಿ ಯೋಜನೆ ಆರಂಭಿಸಿದರು. ಇದರಿಂದ ಪ್ರತಿಯಿಬ್ಬರಿಗೂ ಹೆಚ್ಚು ಅಗತ್ಯವಿರುವಾಗ ಉನ್ನತ ಗುಣಮಟ್ಟದ ಆರೋಗ್ಯ ಪಡೆಯಬಹುದಾಗಿದೆ.
ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಭೂಮಿ ಕಳೆದುಕೊಂಡವರಿಗೆ 2003-2004ರ ಅವಧಿಯಲ್ಲಿ ಎಸ್ಎಂ ಕೃಷ್ಣ ಪರಿಹಾರ ಘೋಷಣೆ ಮಾಡಿದ್ದರು. ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಭೂಮಿ ಕಳೆದುಕೊಂಡವರು ಪರಿಹಾರಕ್ಕೆ ಆಗ್ರಹಿಸಿ ಬಾಗಲಕೋಟೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಮುಖ್ಯಮಂತ್ರಿಗಳು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದಿದ್ದರು. ಆಗ, ಎಸ್ಎಂ ಕೃಷ್ಣ ಅವರು ಸಚಿವ ಸಂಪುಟ ಸಮೇತ ಬಾಗಲಕೋಟೆ ಬಂದು, 638 ಕೋಟಿ ರೂ. ಪರಿಹಾರ ಘೋಷಣೆ ಮಾಡಿದರು.
ಎಸ್ಎಂ ಕೃಷ್ಣ ಅವರು ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಎಲ್ಲಾ ವಿದ್ಯಾರ್ಥಿಗಳಿಗೂ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಜಾರಿಗೆ ತಂದರು. ಮಧ್ಯಾಹ್ನದ ಬಿಸಿಯೂಟ ಯೋಜನೆ ಇಂದಿಗೂ ಚಾಲನೆಯಲ್ಲಿದೆ.
ಕರ್ನಾಟಕ ರಾಜಧಾನಿ ಬೆಂಗಳೂರಿಗೆ ಸಿಲಿಕಾನ್ ಸಿಟಿ ಅಥವಾ ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ಎಂಬ ಹೆಸರು ಬರಲು ಎಸ್ಎಂ ಕೃಷ್ಣ ಅವರ ಕೊಡುಗೆ ಅಪಾರವಾಗಿದೆ. ಐಟಿ-ಬಿಟಿ ಕ್ಷೇತ್ರಕ್ಕೆ ಇವರು ಅಗಾದವಾದ ಬೆಂಬಲ ನೀಡಿದರು. ಇವರ ಕಾಲದಲ್ಲಿಯೇ ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗಿದೆ. ಹಾಗೇ ರಾಜ್ಯದಲ್ಲೇ ಮೊದಲ ಫ್ಲೈ ಓವರ್ ತಲೆ ಎತ್ತಿತು.
ಉಡುಗೆ ತೊಡುಗೆಗಳ ಬಗ್ಗೆ ಹೆಚ್ಚು ಆಸಕ್ತಿ :
ಎಸ್.ಎಂ.ಕೃಷ್ಣ ಅವರಿಗೆ ರಾಜಕೀಯ ಹೊರತು ಪಡಿಸಿ ಉಡುಗೆ ತೊಡುಗೆಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದ್ದರು. ಸಭ್ಯ ಉಡುಗೆ ಎಂದರೆ ಕೃಷ್ಣ ಅವರಿಗೆ ತುಂಬಾ ಪ್ರೀತಿ. ಖಾದಿ, ಉಣ್ಣೆ, ರೇಷೆ ರೀತಿಯ ವಸ್ತುಗಳನ್ನು ಧರಿಸುತ್ತಿದ್ದರು. ಅದರಲ್ಲಿಯೂ ಕೋಟು ಹಾಗೂ ಜುಬ್ಬಾ ಕೃಷ್ಣ ಅವರ ನೆಚ್ಚಿನ ಉಡುಗೆಗಳು. ಬಾಲ್ಯದಲ್ಲಿ ಕೃಷ್ಣ ಅವರು ಬಾಲ್ಯದಲ್ಲಿ ಫುಟ್ಬಾಲ್, ವಾಲಿಬಾಲ್ ಅನ್ನು ಹೆಚ್ಚಾಗಿ ಆಡುತ್ತಿದ್ದರು.
ಬಳಿಕ ಮಹಾರಾಜ ಕಾಲೇಜು ಸೇರಿದ ಬಳಿಕ ಟೆನ್ನಿಸ್ ಕಡೆಗೆ ಹೆಚ್ಚು ಒತ್ತನ್ನು ಕೃಷ್ಣ ಅವರು ನೀಡಿದ್ದರು. ತಮ ಬಿಡುವಿನ ವೇಳೆಯಲ್ಲಿ ಟೆನ್ನಿಸ್ ಆಡುತ್ತಿದ್ದರು. ರಾಜಕೀಯ ರಂಗಕ್ಕೆ ಧುಮುಕಿದ ವೇಳೆಯೂ ಬಿಡುವಿನಲ್ಲಿ ಟೆನ್ನಿಸ್ ಆಡುವುದು ಹಾಗೂ ನೋಡುವುದನ್ನು ಮಾಡುತ್ತ ಇದ್ದರು.
ಇನ್ನೂ ಊಟದ ವಿಚಾರಕ್ಕೆ ಬಂದ್ರೆ ಸಿಹಿ ಪದಾರ್ಥ ಇಷ್ಟ ಪಡುತ್ತಿದ್ದರು, ಅಲ್ಲದೇ ಮಾಂಸಹಾರದಲ್ಲಿ ನಾಟಿ ಶೈಲಿಯನ್ನು ಇಷ್ಟಪಟ್ಟು ಸೇವನೆ ಮಾಡ್ತಾ ಇದ್ದರು. ವಿದೇಶದಲ್ಲಿ ಕೃಷ್ಣ ಅವರು ವ್ಯಾಸಂಗ ಮಾಡಿದ ಕಾರಣ ವಿದೇಶಿ ತಿನಿಸುಗಳನ್ನು ಸಹ ತಿನ್ನುತ್ತಿದ್ದರು.
ಇನ್ನು 2000ನೇ ಇಸವಿಯಲ್ಲಿ ಅಂದರೆ ಎಸ್ಎಂಕೆ ಕಾಲದಲ್ಲಿ ಬೆಂಗಳೂರಿನಲ್ಲಿ ಇಂಟರ್ ನ್ಯಾಷನಲ್ ಗುಣಮಟ್ಟದ ಟೆನಿಸ್ ಕ್ರೀಡಾಂಗಣ ಸಿದ್ಧವಾಯಿತು. ಏಷ್ಯಾ ಖಂಡದಲ್ಲಿಯೇ ಮೊದಲ ಬಾರಿಗೆ ATP World Doubles Championship-2000ನ್ನು ಬೆಂಗಳೂರಿನಲ್ಲಿ ಆಯೋಜಿಸಲಾಯಿತು. ಏಷ್ಯಾ ಖಂಡದಲ್ಲಿ ಮೊತ್ತ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಈ ಕ್ರೀಡಾಕೂಟ ಆಯೋಜನೆಗೊಂಡಿದ್ದು ಚರಿತ್ರಾರ್ಹ ವಿಷಯವಾಗಿದೆ. ಇದಕ್ಕೆ ಮುಖ್ಯ ಕಾರಣ ಆಗ ಕೆಎಸ್ಎಲ್ಟಿಎ ಅಧ್ಯಕ್ಷರಾಗಿದ್ದ ಎಸ್.ಎಂ. ಕೃಷ್ಣ ಅವರು. 90 ವರ್ಷಗಳಿಂದ ಆಗದ ಮಹತ್ಕಾರ್ಯವನ್ನು ಎಸ್.ಎಂ. ಕೃಷ್ಣ ಅಧ್ಯಕ್ಷರಾಗಿದ್ದಾಗ ನೆರವೇರಿಸಿದ್ದರು.
Leave a Comment