ಪೂನಂ ಪಾಂಡೆ ಐಡಿಯಾ ಕಾಪಿ ಮಾಡಿದ ಯೆಸ್‌ಮ್ಯಾಡಮ್ ಕಂಪೆನಿ; 100 ಉದ್ಯೋಗಿಗಳ ವಜಾದ ಹಿಂದಿದೆ ಅಸಲಿ ಕಹಾನಿ

Yesmadam
Spread the love

ನ್ಯೂಸ್ ಆ್ಯರೋ: ಇತ್ತೀಚಿಗಷ್ಟೆ ನಟಿ ಪೂನಂ ಪಾಂಡೆ ಗರ್ಭ ಕಂಠ ಕ್ಯಾನ್ಸರ್​ಗೆ ಬಲಿಯಾಗಿ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಹರಡಿತ್ತು, ಇದಾದ ಮರುದಿನ ನಟಿ ಪೂನಂ ಬದುಕಿರುವುದಾಗಿ ಸತ್ಯ ಹೊರಬಂದಿದ್ದು, ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದ್ದರೂ ಕೂಡ ಈಕೆಯಿಂದಾಗಿ ಸಾಕಷ್ಟು ಜನರಿಗೆ ಗರ್ಭ ಕಂಠ ಕ್ಯಾನ್ಸರ್ ಎಷ್ಟು ಅಪಾಯಕಾರಿ ಅನ್ನೋದು ಮನವರಿಕೆಯಾಗಿತ್ತು. ಇದೀಗ ಇದೇ ರೀತಿ ಯೆಸ್ ಮೇಡಂ ಕಂಪನಿ ಪ್ರಚಾರಕ್ಕಾಗಿ ಮಾಡಿದ ಸ್ಟಂಟ್ ಒಂದು ಸೋಶಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗುತ್ತಿದೆ.

ಮನೆಯಲ್ಲಿ ಸಲೂನ್ ಸೇವೆಗಳನ್ನು ಒದಗಿಸುವ ನೋಯ್ಡಾ ಮೂಲದ ಯೆಸ್‌ಮ್ಯಾಡಮ್ ಕಂಪನಿಯು ಇಮೇಲ್ ಮೂಲಕ 100 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾ ಮಾಡಿರುವುದಾಗಿ ಸುದ್ದಿ ಹರಿದಾಡಿತ್ತು. ಮಾನಸಿಕ ಆರೋಗ್ಯ ಸಮೀಕ್ಷೆಯನ್ನು ನಡೆಸಿದ ನಂತರ, ಕಂಪನಿಯು ತೀವ್ರ ಒತ್ತಡದಲ್ಲಿದ್ದವರನ್ನು ಕೆಲಸದಿಂದ ತೆಗೆದುಹಾಕಿರುವುದಾಗಿ ವರದಿಯಾಗಿತ್ತು. ವಜಾಗೊಂಡ 100 ಮಂದಿಯಲ್ಲಿ ಯೆಸ್‌ಮೇಡಮ್‌ನ ಉದ್ಯೋಗಿಯೊಬ್ಬರು ಇಮೇಲ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದು. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.

ಈ ಕುರಿತು ವ್ಯಾಪಕವಾಗಿ ಚರ್ಚೆಯಾಗುತ್ತಿದ್ದಂತೆ ಯೆಸ್ ಮೇಡಂ ಕಂಪನಿ ಸೋಶಿಯಲ್​ ಮೀಡಿಯಾಗಳಲ್ಲಿ ಕ್ಷಮೆ ಯಾಚಿಸಿದ ಪೋಸ್ಟ್​ ಒಂದನ್ನು ಹಂಚಿಕೊಂಡಿದೆ. “ಜನರಲ್ಲಿ ಕ್ಷಮೆ ಕೇಳುತ್ತಿದ್ದೇವೆ. ನಾವು ಯಾರನ್ನೂ ಕೆಲಸದಿಂದ ವಜಾಗೊಳಿಸಿಲ್ಲ. ಮಾನಸಿಕ ಆರೋಗ್ಯ ಕೆಲಸಕ್ಕೆ ಎಷ್ಟು ಅಗತ್ಯವಾಗಿದೆ ಎಂಬುದನ್ನು ಅರಿವು ಮೂಡಿಸಲು ಹಾಗೂ ಕೆಲಸದ ಸ್ಥಳದಲ್ಲಿ ಉದ್ಯೋಗಿಗಳು ಎದುರಿಸುತ್ತಿರುವ ಒತ್ತಡವನ್ನು ಎತ್ತಿ ತೋರಿಸುವ ಸಲುವಾಗಿ ಈ ನಿರ್ಧಾರಕ್ಕೆ ನಮ್ಮ ಸಂಸ್ಥೆ ಬಂದಿದೆ.

ಈ ಮೂಲಕ ನಮ್ಮ ಕಂಪೆನಿಯ ಹೊಸ ಪಾಲಿಸಿಯ ಕುರಿತು ಬಹಿರಂಗಪಡಿಸಲಿದ್ದೇವೆ. ಒತ್ತಡಕ್ಕೆ ಒಳಗಾದ ಉದ್ಯೋಗಿಗೆ 6 ದಿನಗಳ ರಜೆಯ ಜೊತೆಗೆ ಸಂಬಳವನ್ನೂ ಕಂಪನಿ ಪಾವತಿಸಲಿದೆ. ಜೊತೆಗೆ ಕಂಪನಿ ಕಡೆಯಿಂದ ಆ ಉದ್ಯೋಗಿಯ ಮನೆಗೆ ತೆರಳಿ ಸ್ಪಾ ಸೌಲಭ್ಯ ನೀಡಲಾಗುತ್ತದೆ. ಈ ಮೂಲಕ ಉದ್ಯೋಗಿಗಳ ಒತ್ತಡ ಕಡಿಮೆ ಮಾಡಲು ಎಲ್ಲಾ ಪ್ರಯತ್ನ ಮಾಡಲಾಗುತ್ತದೆ ” ಎಂದು ಹೇಳಿಕೊಂಡಿದೆ.

Leave a Comment

Leave a Reply

Your email address will not be published. Required fields are marked *

error: Content is protected !!