ಅದಾನಿ ಲಂಚ ಪ್ರಕರಣದಲ್ಲಿ ವಿರೋಧ ಪಕ್ಷಗಳ ಪ್ರತಿಭಟನೆ; ಲೋಕಸಭೆ ಕಲಾಪ ಮಧ್ಯಾಹ್ನ 2 ಗಂಟೆಗೆ ಮುಂದೂಡಿಕೆ

Lokshaba
Spread the love

ನ್ಯೂಸ್ ಆ್ಯರೋ: ಪ್ರತಿಪಕ್ಷಗಳ ನಿರಂತರ ಘೋಷಣೆಗಳ ನಡುವೆ ಲೋಕಸಭೆ ಕಲಾಪವನ್ನು ಮತ್ತೊಮ್ಮೆ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.

ಇಂದು ಮಧ್ಯಾಹ್ನ 12 ಗಂಟೆಗೆ ಕಲಾಪ ಪುನರಾರಂಭವಾಗುತ್ತಿದ್ದಂತೆ ಪ್ರತಿಪಕ್ಷಗಳ ನಾಯಕರು ಸದನದಲ್ಲಿ ‘ನಮಗೆ ನ್ಯಾಯ ಬೇಕು’ ಎಂದು ಘೋಷಣೆ ಕೂಗಿದರು. ಇದಕ್ಕೂ ಮುನ್ನ ಪ್ರಶ್ನೋತ್ತರ ವೇಳೆಯಲ್ಲಿ ಪ್ರತಿಪಕ್ಷಗಳು ವಿವಿಧ ವಿಷಯಗಳನ್ನು ಪ್ರಸ್ತಾಪಿಸಿದ್ದರಿಂದ ಕಲಾಪ ಆರಂಭವಾದ ಸ್ವಲ್ಪ ಹೊತ್ತಿನಲ್ಲೇ ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಲಾಯಿತು.

ಸ್ಪೀಕರ್ ಓಂ ಬಿರ್ಲಾ ಅವರು ಅಡೆತಡೆಗಳಿಗೆ ಆಕ್ಷೇಪ ವ್ಯಕ್ತಪಡಿಸಿ ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಿದರು. ಮಣಿಪುರ ಹಿಂಸಾಚಾರ, ಅದಾನಿ ಲಂಚ ಆರೋಪ ಮತ್ತು ಸಂಭಾಲ್ ಹಿಂಸಾಚಾರದಂತಹ ವಿಷಯಗಳ ಬಗ್ಗೆ ಚರ್ಚೆಗೆ ಒತ್ತಾಯಿಸಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪ್ರಮುಖ ವಿರೋಧ ಪಕ್ಷದ ನಾಯಕರು ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ವಿರೋಧ ಪಕ್ಷಗಳ ಸದಸ್ಯರು “ಮೋದಿ, ಅದಾನಿ ಏಕ್ ಹೈ”, “ನಮಗೆ ನ್ಯಾಯ ಬೇಕು” ಎಂಬ ಘೋಷಣೆಗಳನ್ನು ಎತ್ತಿದರು. ಸಂಸತ್ತಿನ ಮಕರ ದ್ವಾರದ ಮೆಟ್ಟಿಲುಗಳ ಮುಂದೆ ಪ್ರತಿಭಟನೆ ನಡೆಸಲಾಗಿದ್ದು, ಮೆಟ್ಟಿಲುಗಳ ಮೇಲೆ ಪ್ರತಿಭಟನೆ ಮಾಡದಂತೆ ಲೋಕಸಭೆ ಸಚಿವಾಲಯ ಸೂಚನೆ ನೀಡಿದೆ.

ತೃಣಮೂಲ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ಸಂಸದರು ಈ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿಲ್ಲ. ಪ್ರತಿಭಟನೆ ಬಗ್ಗೆ ಎಎನ್‌ಐ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಕಾಂಗ್ರೆಸ್ ಸಂಸದ ಕಿರಣ್ ಕುಮಾರ್ ಚಮಲಾ, ಪ್ರತಿಪಕ್ಷಗಳು ಸದನದ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುವ ಪ್ರಯತ್ನ ಮಾಡುತ್ತಿಲ್ಲ ಎಂದರು.

ನಾವು ಅದಾನಿ ಸಮಸ್ಯೆ, ಸಂಭಾಲ್ ಮತ್ತು ಮಣಿಪುರದ ಬಗ್ಗೆ ಸದನದಲ್ಲಿ ಚರ್ಚೆ ನಡೆಸಬೇಕೆಂದು ಕೇಳುತ್ತಿದ್ದೇವೆ. ಅದಾನಿ ವಿಚಾರದಲ್ಲಿ ಸರ್ಕಾರ ಯಾವತ್ತೂ ಚರ್ಚೆ ನಡೆಸುವುದಿಲ್ಲ. ಸದನಕ್ಕೆ ನಾವು ಅಡ್ಡಿಪಡಿಸುತ್ತೇವೆ ಎಂಬ ಅಪಪ್ರಚಾರ ಮಾಡುತ್ತಿದ್ದಾರೆ. ಸದನ ನಡೆಯುವುದು ಬಿಜೆಪಿಗೆ ಇಷ್ಟವಿಲ್ಲ ಎಂದು ಚಾಮಲಾ ಎಎನ್‌ಐಗೆ ತಿಳಿಸಿದರು.

ಅದಾನಿ ವಿಷಯದ ಬಗ್ಗೆ ಚರ್ಚೆಗೆ ಪ್ರತಿಪಕ್ಷಗಳ ನಿರಂತರ ಬೇಡಿಕೆಯು ಸಂಸತ್ತಿನಲ್ಲಿ ಗೊಂದಲವನ್ನು ಸೃಷ್ಟಿಸಿದೆ. ವಿರೋಧ ಪಕ್ಷಗಳು ಸದನ ಸುಗಮವಾಗಿ ಸಾಗದಂತೆ ಸ್ಥಗಿತಗೊಳಿಸಲು ಸಮಸ್ಯೆಗಳನ್ನು ರಾಜಕೀಯಗೊಳಿಸುತ್ತಿವೆ ಎಂದು ಆಡಳಿತಾರೂಢ ಬಿಜೆಪಿ ಆರೋಪಿಸಿದೆ.

Leave a Comment

Leave a Reply

Your email address will not be published. Required fields are marked *

error: Content is protected !!