ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಚಾಲನೆ; ಏನಿದರ ಇತಿಹಾಸ, ಮಹತ್ವ ?

Kadalekai Parishe
Spread the love

ನ್ಯೂಸ್ ಆ್ಯರೋ: ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆ ಆರಂಭಗೊಂಡಿದೆ. ದೊಡ್ಡ ಗಣಪತಿ, ಬಸವಣ್ಣ ದೇಗುಲದಲ್ಲಿ ಸೋಮವಾರ ಪೂಜೆ ಸಲ್ಲಿಸುವ ಮೂಲಕ ಕಡಲೆಕಾಯಿ ಪರಿಷೆಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು.

Kadalekai Parishe 1

ಪ್ರತಿವರ್ಷ ಕಾರ್ತಿಕ ಮಾಸದ ಕೊನೆ ಎರಡು ದಿನಗಳ ಕಾಲ ಬಸವನಗುಡಿಯ ಕಡಲೆಕಾಯಿ ಪರಿಷೆ ನಡೆಯುತ್ತದೆ. ಅದೇ ಮಾದರಿಯಲ್ಲಿ, ಚಾಲನೆ ಸಿಕ್ಕ ಮೊದಲ ದಿನವಾದ ಇಂದು ಸಾವಿರಾರು ಭಕ್ತರು ಹರಿದು ಬರುತ್ತಿದ್ದಾರೆ. ಬೆಂಗಳೂರು ಸುತ್ತಮುತ್ತಲಿನ ವಿವಿಧ ಜಿಲ್ಲೆಗಳಿಂದ ಹಾಗೂ ಅನ್ಯ ರಾಜ್ಯಗಳಿಂದ ಬಂದಿರುವ ವ್ಯಾಪಾರಿಗಳು ರಸ್ತೆಬದಿ ತಳ್ಳುವ ಗಾಡಿ, ಮಳಿಗೆಗಳಲ್ಲಿ ಕಡಲೆಕಾಯಿ ಮಾರಾಟ ಮಾಡುತ್ತಿದ್ದಾರೆ.

Kadlekai Parishe 1

ಈ ಬಾರಿಯ ಬಸವನಗುಡಿಯ ಕಡಲೆಕಾಯಿ ಪರಿಷೆಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಚಿಂತಾಮಣಿ ಸೇರಿ ನೆರೆಯ ರಾಜ್ಯಗಳಿಂದ ರೈತರು ಬಂದಿದ್ದಾರೆ. ನಾಟಿ, ಫಾರಂ, ಬಾದಾಮಿ ಸೇರಿದಂತೆ ವಿವಿಧ ಬಗೆಯ ಕಡಲೆಕಾಯಿಗಳನ್ನು ಮಾರಾಟ ಮಾಡುತ್ತಿದ್ದು, ಪರಿಷೆಯ ಪ್ರಮುಖ ಆಕರ್ಷಣೆಯಾಗಿದೆ.

Kadalekayi Parishe 1

ಹಸಿ ಹಾಗೂ ಹುರಿದ ಕಡಲೆಕಾಯಿಗೆ ಸೇರಿಗೆ 60ರಿಂದ 80 ರೂ. ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಕಡಲೆಕಾಯಿ ಮಾತ್ರವಲ್ಲದೇ, ಹಲವು ಬಗೆಯ ಚಾಟ್ಸ್‌, ಮುಸುಕಿನ ಜೋಳ, ಕರಿದ ತಿಂಡಿ ತಿನಿಸು, ಮಕ್ಕಳ ಆಟಿಕೆಗಳು, ಮನೆಗಳಿಗೆ ಬಳಸುವ ಅಲಂಕಾರಿಕ ವಸ್ತುಗಳು, ಬಗೆ ಬಗೆಯ ಸರ, ಬಟ್ಟೆಬರೆ, ಗೃಹೋಪಯೋಗಿ ವಸ್ತುಗಳು, ಬೊಂಬೆಗಳು ಹೀಗೆ ವಿವಿಧ ರೀತಿಯ ಮಳಿಗೆಗಳು ಜನರನ್ನು ಕೈಬೀಸಿ ಕರೆಯುತ್ತಿವೆ.

ಕಡಲೆಕಾಯಿ ಪರಿಷೆ ಇತಿಹಾಸ:

ಹಿಂದಿನ ಕಾಲದಲ್ಲಿ ಬಸವನಗುಡಿಯಲ್ಲಿ ಸಾಕಷ್ಟು ಕಡಲೆಕಾಯಿ (ಶೇಂಗಾ) ಬೆಳೆಯುತ್ತಿದ್ದರು. ಸಮೃದ್ಧವಾಗಿ ಬೆಳೆದು ಕಡಲೆಕಾಯಿ ಕಟಾವಿಗೆ ಸಿದ್ಧವಾದ ಸಂದರ್ಭದಲ್ಲಿ ತೋಟಕ್ಕೆ ಬಸವ (ನಂದಿ) ನುಗ್ಗಿ ಬೆಳೆ ನಾಶಪಡಿಸುತ್ತಿತ್ತು. ಇದರಿಂದ, ರೈತರಿಗೆ ಅಪಾರ ನಷ್ಟವಾಗುತ್ತಿತ್ತು. ಇದರಿಂದ ಪರಿಹಾರ ಕಂಡುಕೊಳ್ಳಲು ರೈತರು ನಂದಿ ದೇವ (ಬಸವಣ್ಣ)ನ ಮೊರೆ ಹೋದರು.

New Project 5 2

ಹೌದು, ರೈತರು ತಮ್ಮ ಬೆಳೆಯನ್ನು ರಕ್ಷಿಸಿಕೊಳ್ಳಲು ತಮ್ಮ ಮೊದಲ ಬೆಳೆಯನ್ನು ಬಸವನಿಗೆ ಅರ್ಪಿಸಲು ಆರಂಭಿಸಿದರು. ಪ್ರತಿವರ್ಷ ಕಾರ್ತಿಕ ಮಾಸದ ಕೊನೆ ಸೋಮವಾರ ಬಸವಣ್ಣನಿಗೆ ಕಡಲೆಕಾಯಿ ಅರ್ಪಿಸಿ ಪ್ರಾರ್ಥಿಸಲು ಆರಂಭಿಸಿದರು. ಹೀಗೆ ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಬಸವನಗುಡಿಯಲ್ಲಿ ನಂದಿ ವಿಗ್ರಹವೊಂದು ದೊರಕಿತು.

Basava 1

ನಂತರ, ಈ ಸ್ಥಳದಲ್ಲಿ ನಾಡಪ್ರಭು ಕೆಂಪೇಗೌಡರು 16ನೇ ಶತಮಾನದಲ್ಲಿ ನಂದಿಯ ವಿಗ್ರಹದ ಸುತ್ತಲೂ ದೇವಾಲಯವನ್ನು ನಿರ್ಮಿಸಿದರು. ಇದನ್ನು ಬಸವನಗುಡಿ ಅಥವಾ ಬಿಗ್​ ಬುಲ್​ ಟೆಂಪಲ್​​ ಎಂದು ಕರೆಯಲಾಗುತ್ತದೆ. ಬಳಿಕ ರೈತರು, ದೊಡ್ಡ ಬಸವಣ್ಣನಿಗೆ ಕಡಲೆಕಾಯಿ ಅರ್ಪಿಸಲು ಆರಂಭಿಸಿದರು.

Kadalekai Parishe 1

ಇನ್ನು ಕಾರ್ತಿಕ ಮಾಸ ಶಿವನ ಆರಾಧನೆಗೆ ಸೂಕ್ತವಾದ ತಿಂಗಳು. ಕಾರ್ತಿಕ ಮಾಸದ ಸೋಮವಾರದಂದು ಶಿವನಿಗೆ ವಿಶೇಷ ಪೂಜೆಗಳು ನೆರವೇರುತ್ತವೆ. ಪ್ರತಿವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ಬಸವನಗುಡಿ ಕಡಲೆಕಾಯಿ ಪರಿಷೆ ನಡೆಯುತ್ತದೆ. ಕಾರ್ತಿಕ ಮಾಸದ ಸೋಮವಾರವು ಭಗವಾನ್​ ಶಿವನ ನೆಚ್ಚಿನ ದಿನವಾಗಿದ್ದು, ನಂದಿಯು ಶಿವನ ವಾಹನವಾಗಿರುವುದರಿಂದ ನಂದಿಗೆ ಈ ದಿನ ಪ್ರಿಯವಾಗಿದೆ. ಆದ್ದರಿಂದ ಕಾರ್ತಿಕ ಮಾಸದಲ್ಲಿ ಸೋಮವಾರ ಕಡೆಲೆಕಾಯಿ ಪರಿಷೆ ನಡೆಯುತ್ತದೆ.

Leave a Comment

Leave a Reply

Your email address will not be published. Required fields are marked *

error: Content is protected !!