Darshan Case : ಪವಿತ್ರಾ ಗೌಡ ದರ್ಶನ್ ಪತ್ನಿ ಅಲ್ಲ, ನಾನೊಬ್ಬಳೇ ದರ್ಶನ್ ಪತ್ನಿ – ಕಮೀಷನರ್ ಗೆ ಪತ್ರ ಬರೆದು ನ್ಯಾಯ ಯಾಚಿಸಿದ ದರ್ಶನ್ ಪತ್ನಿ ವಿಜಯಲಕ್ಷ್ಮಿ
ನ್ಯೂಸ್ ಆ್ಯರೋ : ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರ ಕಾನೂನಾತ್ಮಕ ಹಾಗೂ ಏಕೈಕ ಪತ್ನಿ ನಾನಾಗಿದ್ದು, ಪವಿತ್ರಾ ಗೌಡ ಪತ್ನಿ ಅಲ್ಲ. ಆಕೆ ಕೇವಲ ಸ್ನೇಹಿತೆ ಎಂದು ದರ್ಶನ್ ಪತ್ನಿ ವಿಜಯಲಕ್ಷ್ಮೀ ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ಅವರಿಗೆ ಪತ್ರ ಬರೆದಿದ್ದಾರೆ.
ನೀವು ಸುದ್ದಿಗೋಷ್ಠಿ ಮಾಡುವಾಗ ದರ್ಶನ್ ಪತ್ನಿ ಪವಿತ್ರಾ ಗೌಡ ಎಂದು ತಪ್ಪಾಗಿ ಹೇಳಿದ್ದೀರಿ. ಆ ಬಳಿಕ ರಾಜ್ಯದ ಗೃಹಮಂತ್ರಿಗಳು, ರಾಷ್ಟ್ರಮಟ್ಟದ ಮಾಧ್ಯಮದರು ಕೂಡ ಅದನ್ನೇ ಹೇಳಿದರು. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ದಂಪತಿ ಅರೆಸ್ಟ್ ಅಂತ ಸುದ್ದಿ ಮಾಡಿದರು. ಇದರಿಂದಾಗಿ ನಾನು ಮತ್ತು ನನ್ನ ಮಗ ವಿನೀಶ್ ಮುಂದಿನ ದಿನಗಳಲ್ಲಿ ತೊಂದರೆ ಅನುಭವಿಸುವಂತೆ ಆಗಬಾರದು. ಪವಿತ್ರಾ ಗೌಡಗೆ ಸಂಜಯ್ ಸಿಂಗ್ ಜೊತೆ ಮದುವೆ ಆಗಿತ್ತು. ಅವರಿಂದ ಮಗಳನ್ನೂ ಪಡೆದಿದ್ದಾರೆ. ಪೊಲೀಸ್ ದಾಖಲೆಗಳಲ್ಲಿ ಈ ಮಾಹಿತಿ ಸ್ಪಷ್ಟವಾಗಿರಲಿ. ಇದರಿಂದ ನನಗೆ ಭವಿಷ್ಯದಲ್ಲಿ ತೊಂದರೆ ಆಗದಿರಲಿ’ ಎಂದು ಪತ್ರದಲ್ಲಿ ವಿಜಯಲಕ್ಷ್ಮಿ ಅವರು ಮನವಿ ಮಾಡಿಕೊಂಡಿದ್ದಾರೆ.
ನನಗೆ ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆ ಇದೆ. ಕಾನೂನು ತನ್ನದೇ ಸಮಯ ತೆಗೆದುಕೊಳ್ಳುತ್ತದೆ ಅಂತ ನಾನು ನಂಬಿದ್ದೇನೆ. ಈ ಕೇಸ್ ನ ಮಾಸ್ಟರ್ ಮೈಂಡ್ ಆಗಿರುವ ಪವಿತ್ರಾ ಗೌಡ ವಿಚಾರದಲ್ಲಿ ಮಾಹಿತಿ ಸೂಕ್ತವಾಗಿರಲಿ ಎಂದು ನಾನು ಒತ್ತಾಯಿಸುತ್ತೇನೆ. ಆಕೆ ನನ್ನ ಗಂಡನ ಸ್ನೇಹಿತೆ ಎಂಬುದು ನಿಜ. ಆದರೆ ಆಕೆ ನನ್ನ ಗಂಡನ ಪತ್ನಿ ಅಲ್ಲ ಎಂಬುದು ನಿಮಗೆ ದಯವಿಟ್ಟು ತಿಳಿದಿರಲಿ. ನಾನು ಮಾತ್ರ ದರ್ಶನ್ ಅವರನ್ನು ಕಾನೂನಾತ್ಮಕವಾಗಿ ಮದುವೆ ಆದವಳು. ಧರ್ಮಸ್ಥಳದಲ್ಲಿ 2003ರ ಮೇ 19ರಂದು ನಮ್ಮ ಮದುವೆ ನಡೆದಿತ್ತು’ ಎಂದು ವಿಜಯಲಕ್ಷ್ಮಿ ಅವರು ಈ ಪತ್ರದಲ್ಲಿ ಮಾಹಿತಿ ನೀಡಿದ್ದಾರೆ.
ಪ್ರಕರಣದ ದಾಖಲೆಗಳಲ್ಲಿ ಪವಿತ್ರಾ ಗೌಡ ಅವರನ್ನು ಪತ್ನಿ ಎಂದು ಉಲ್ಲೇಖಿಸಬಾರದು. ಏಕೆಂದರೆ ಅವರು ಪತ್ನಿ ಅಲ್ಲ. ಸ್ನೇಹಿತೆ ಮಾತ್ರ ಎಂದು ವಿಜಯಲಕ್ಷ್ಮೀ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ದರ್ಶನ್ ಅವರ ಸಂಸಾರದಲ್ಲಿ ಬಿರುಕು ಮೂಡಲು ಪವಿತ್ರಾ ಗೌಡ ಅವರೇ ಕಾರಣ ಎಂಬ ಮಾತಿದೆ. ಈಗ ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಕೂಡ ಪವಿತ್ರಾ ಎ1 ಆಗಿದ್ದಾರೆ. ದರ್ಶನ್ ಎ2 ಆಗಿದ್ದಾರೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಬೆಂಗಳೂರಿಗೆ ಕರೆಸಿ ಹತ್ಯೆ ಮಾಡಿದ ಆರೋಪ ದರ್ಶನ್ ಮೇಲಿದೆ. ಅವರ ಜೊತೆ ಅನೇಕರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಈ ಕೇಸ್ ನ ತನಿಖೆ ನಡೆಯುತ್ತಿದ್ದು, ಇವತ್ತು ಪ್ರಕರಣದ ವಿಚಾರಣೆ ನಡೆಯಲಿದೆ.
Leave a Comment