ತಿಮ್ಮಪ್ಪನ ಸನ್ನಿಧಿಯಲ್ಲಿ ಮಹತ್ವದ ಬದಲಾವಣೆ; ಟಿಟಿಡಿಯಲ್ಲಿ ಹಿಂದೂಯೇತರ ಅಧಿಕಾರಿಗಳಿಗೆ ಕೋಕ್
ನ್ಯೂಸ್ ಆ್ಯರೋ: ಹೊಸದಾಗಿ ರಚನೆಯಾದ ತಿರುಮಲ ತಿರುಪತಿ ದೇವಸ್ಥಾನಂ ಕಮಿಟಿ ಸೋಮವಾರ ಒಂದು ನಿರ್ಣಯವನ್ನು ಹೊರಡಿಸಿದೆ. ತಿರುಮಲ ತಿರುಪತಿ ದೇವಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಿಂದೂಯೇತರ ಸಿಬ್ಬಂದಿಗೆ ಈ ಮೂಲಕ ಒಂದು ಸಂದೇಶ ಹೊರಡಿಸಿದೆ. ಒಂದು ನೀವು ಸ್ವಯಂ ನಿವೃತ್ತಿ ಪಡೆದುಕೊಳ್ಳಿ ಇಲ್ಲವೇ ಸರ್ಕಾರದ ಬೇರೆ ವಿಭಾಗಗಳಿಗೆ ವರ್ಗವಾಗಿ ಹೊರಡಲು ಸಿದ್ಧರಾಗಿ ಎಂದು ಸ್ಪಷ್ಟವಾಗಿ ಹೇಳಿದೆ.
ಟಿಟಿಡಿ ಸರ್ಕಾರದ ಒಂದು ಸ್ವತಂತ್ರ ಸಂಸ್ಥೆ, ಇದು ಇಡೀ ತಿರುಪತಿ ವೆಂಕಟೇಶ್ವರ ದೇವಸ್ಥಾನದ ನಿರ್ವಹಣೆಯನ್ನು ಮಾಡುತ್ತದೆ. ಸದ್ಯ ಇದೇ ಟಿಟಿಡಿ ಈಗ ಒಂದು ನಿರ್ಣಯವನ್ನು ಹೊರಡಿಸಿದ್ದು, ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಿಂದೂಯೇತರ ಸಿಬ್ಬಂದಿಗೆ ಖಡಕ್ ಸೂಚನೆ ನೀಡಿದೆ.
ಸದ್ಯ ಟ್ರಸ್ಟ್ ತೆಗೆದುಕೊಂಡ ನಿರ್ಣಯದ ಬಗ್ಗೆ ಸ್ಪಷ್ಟನೆ ನೀಡಿರುವ ಟಿಟಿಡಿಯ ಚೇರ್ಮನ್ ಬಿ.ಆರ್.ನಾಯ್ಡು ಅವರು, ಟಿಟಿಡಿ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅನ್ಯ ಧರ್ಮೀಯ ಸಿಬ್ಬಂದಿಗಳಿಗೆ ಈಗಾಗಲೇ ನಮ್ಮ ನಿರ್ಣಯವನ್ನು ಹೇಳಲಾಗಿದೆ ಎಂದಿದ್ದಾರೆ. ಆದ್ರೆ ದೇವಸ್ಥಾನದಲ್ಲಿ ಒಟ್ಟು ಎಷ್ಟು ಜನರು ಅನ್ಯ ಧರ್ಮೀಯ ಸಿಬ್ಬಂದಿಗಳಿದ್ದಾರೆ ಎಂಬದನ್ನು ಹೇಳಲು ಮಾತ್ರ ನಿರಾಕರಿಸಿದ್ದಾರೆ.
ಬಲ್ಲ ಮೂಲಗಳ ಮಾಹಿತಿ ಪ್ರಕಾರ ಟಿಟಿಡಿಯ ಈ ನಿರ್ಣಯ ಸುಮಾರು 300 ಜನರ ಬದುಕಿನ ಮೇಲೆ ಪರಿಣಾಮ ಬೀರಲಿದೆಯಂತೆ. ತಿರುಮಲ ತಿರುಪತಿ ದೇವಸ್ಥಾನದಲ್ಲಿ ಒಟ್ಟು 7 ಸಾವಿರ ಜನ ಖಾಯಂ ಕೆಲಸಗಾರರಾಗಿ 14 ಸಾವಿರ ಜನ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ.
ಹಲವು ಕಾರ್ಮಿಕ ಒಕ್ಕೂಟಗಳ ಸಲಹೆಯನ್ನು ತೆಗೆದುಕೊಂಡು ಟಿಟಿಡಿ ಈ ನಿರ್ಣಯಕ್ಕೆ ಬಂದಿದೆ. ಈ ಒಂದು ನಿರ್ಣಯವನ್ನು ಆಂಧ್ರಪ್ರದೇಶ ಎಂಡೊವ್ಮೆಂಟ್ ಆ್ಯಕ್ಟ್ ಹಾಗೂ ಟಿಟಿಡಿ ಆ್ಯಕ್ಟ್ ಅನ್ವಯದೊಂದಿಗೆ ತೆಗೆದುಕೊಳ್ಳಲಾಗಿದೆ ಎಂದು ಕಾರ್ಮಿಕ ಒಕ್ಕೂಟಗಳು ಹೇಳಿವೆ. ಇದು ಮಾತ್ರವಲ್ಲ ನೂತನ ಟಿಟಿಡಿ ಚೇರ್ಮನ್ರನ್ನ ಆಯ್ಕೆ ಮಾಡಿದ ದಿನದಂದೆ ಚಂದ್ರಬಾಬು ನಾಯ್ಡು ಹಿಂದೂ ದೇವಸ್ಥಾನಗಳನ್ನ ಹಿಂದೂಗಳೇ ನಡೆಸಬೇಕು ಅಂತ ಕೂಡ ಹೇಳಿದ್ದರು ಅದರ ಬೆನ್ನಲ್ಲಿಯೇ ಸದ್ಯ ಈ ಬೆಳವಣಿಗೆ ನಡೆದಿದೆ.
Leave a Comment