ಹೆಡ್ ಕಾನ್ಸ್ಟೇಬಲ್ ಪತ್ನಿ, ಮಗಳ ಭೀಕರ ಹತ್ಯೆ ಕೇಸ್; ಬುಲ್ಡೋಜರ್ ಹರಿಸಿ ಆರೋಪಿಯ ಮನೆ ಧ್ವಂಸ
ನ್ಯೂಸ್ ಆ್ಯರೋ: ಪೊಲೀಸ್ ಹೆಡ್ ಕಾನ್ಸ್ಟೇಬಲ್ವೊಬ್ಬರ ಪತ್ನಿ ಮತ್ತು ಮಗುವನ್ನು ಭೀಕರವಾಗಿ ಹತ್ಯೆಗೈದ ಪ್ರಕರಣದ ಪ್ರಮುಖ ಆರೋಪಿ ಅಕ್ರಮವಾಗಿ ಕಟ್ಟಿದ್ದ ಮನೆಯನ್ನು ಛತ್ತೀಸ್ಗಢದ ಸೂರಜ್ಪುರ್ ಜಿಲ್ಲಾಡಳಿತ ಬುಲ್ಡೋಬರ್ ಹರಿಸಿ ನೆಲಸಮಗೊಳಿಸಿತು. ಆರೋಪಿ ಕುಲ್ದೀಪ್ ಸಾಹು ಎಂಬಾತನಿಗೆ ಸೇರಿದ ಮನೆಯನ್ನು ಧ್ವಂಸಗೊಳಿಸಲಾಗಿದೆ.
ಸೋಮವಾರ ಬೆಳಗ್ಗೆ ಸುರಾಜ್ಪುರ್ ಹಳೆಯ ಬಸ್ ನಿಲ್ದಾಣದ ಸಮೀಪದಲ್ಲಿದ್ದ ಮನೆಯನ್ನು ಸ್ಥಳೀಯ ನಗರಸಭೆ ಅಧಿಕಾರಿಗಳು ಪೊಲೀಸರ ಉಪಸ್ಥಿತಿಯಲ್ಲಿ ಉರುಳಿಸಿದರು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.
ಮನೆ ಧ್ವಂಸಗೊಳಿಸುವ ಪ್ರಕ್ರಿಯೆಗೂ ಮುನ್ನ ಸೂರಜ್ಪುರ್ ಮುನ್ಸಿಪಲ್ ಆಡಳಿತ ಆರೋಪಿಯ ಮನೆ ಮುಂದೆ ‘ಅಕ್ರಮ ಕಟ್ಟಡ’ ಎಂಬ ನೋಟಿಸ್ ಅಂಟಿಸಿತ್ತು. ಈ ಕುರಿತು ಮಾತನಾಡಿರುವ ಸೂರಜ್ಪುರ್ ತಹಶೀಲ್ದಾರ್ ಸಮೀರ್ ಶರ್ಮಾ, “ಸಾಹು ಮನೆ ಸೇರಿದಂತೆ ಮೂರು ಕಟ್ಟಡಗಳನ್ನು ಅಕ್ರಮವಾಗಿ ನಿರ್ಮಾಣ ಮಾಡಲಾಗಿದ್ದು, ಜಿಲ್ಲಾಡಳಿತ ಧ್ವಂಸಗೊಳಿಸಿದೆ” ಎಂದು ತಿಳಿಸಿದರು.
ಅಕ್ಟೋಬರ್ 13ರಂದು ಕುಲ್ದೀಪ್ ಸಾಹು ತನ್ನ ಸಹಚರನೊಂದಿಗೆ ಸೇರಿಕೊಂಡು ಹೆಡ್ ಕಾನ್ಸ್ಟೇಬಲ್ ತಲಿಬ್ ಶೇಖ್ ಎಂಬವರ ಪತ್ನಿ ಮತ್ತು 9 ವರ್ಷದ ಮಗಳನ್ನು ಭೀಕರವಾಗಿ ಕೊಲೆ ಮಾಡಿದ್ದ.
ಪೊಲೀಸ್ ಮೂಲಗಳ ಪ್ರಕಾರ, ಕ್ಷುಲ್ಲಕ ವಿಚಾರದಲ್ಲಿ ಹೆಡ್ ಕಾನ್ಸ್ಟೇಬಲ್ ಜೊತೆ ವಾಗ್ವಾದ ನಡೆದ ಹಿನ್ನೆಲೆಯಲ್ಲಿ ಆತನನ್ನು ಕೊಲೆ ಮಾಡುವ ಜಿದ್ದನ್ನು ಸಾಹು ಹೊಂದಿದ್ದ. ಆದರೆ, ಆತನ ಯೋಜನೆ ಕೈಗೂಡಿರಲಿಲ್ಲ. ಹೀಗಾಗಿ, ಮನೆಯಲ್ಲಿದ್ದ ಆತನ ಪತ್ನಿ ಮಗುವನ್ನು ನಿರ್ದಯವಾಗಿ ಕೊಂದು ಹಾಕಿದ್ದ. ಈ ಘಟನೆಯ ವಿರುದ್ಧ ಭಾರಿ ಪ್ರತಿಭಟನೆಗಳು ನಡೆದಿದ್ದವು. ಅಕ್ಟೋಬರ್ 21ರಂದು ಸರ್ಕಾರ ಎಸ್ಪಿಯನ್ನು ವರ್ಗಾವಣೆ ಮಾಡಿತ್ತು.
Leave a Comment