ರೈಲು ಕಿಟಕಿಯಿಂದ ಜಾರಿ ಬಿದ್ದ ಕಂದಮ್ಮ; 16 ಕಿ.ಮೀ ಓಡುತ್ತಲೇ ಮಗಳನ್ನ ಉಳಿಸಿಕೊಂಡ ಅಪ್ಪ
ನ್ಯೂಸ್ ಆ್ಯರೋ: ವೇಗವಾಗಿ ಚಲಿಸುತ್ತಿದ್ದ ರೈಲಿನ ಎಮರ್ಜೆನ್ಸಿ ಕಿಟಕಿಯಿಂದ ಪುಟ್ಟ ಮಗಳು ಹೊರಗೆ ಜಾರಿಬಿದ್ದ ಹಾಗೂ ಅಪ್ಪ ರೈಲು ನಿಲ್ಲಿಸಿ 16 ಕಿಲೋಮೀಟರ್ ಹಿಂದಕ್ಕೆ ಓಡಿಹೋಗಿ ಆಕೆಯನ್ನು ಪತ್ತೆಹಚ್ಚಿ ಉಳಿಸಿಕೊಂಡ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ರಾತ್ರಿವೇಳೆ ಕತ್ತಲಲ್ಲಿ ಈ ಘಟನೆ ನಡೆದಿದೆ.
ಉತ್ತರ ಪ್ರದೇಶದ ಲಲಿತ್ಪುರ ರೈಲು ನಿಲ್ದಾಣ ಕರುಣಾಜನಕ ಘಟನೆಗೆ ಸಾಕ್ಷಿಯಾಗಿದೆ. ಮಥುರಾದ ಅರವಿಂದ ಎಂಬಾತ ತನ್ನ ಮಗಳು ಗೌರಿಯೊಂದಿಗೆ ಕುರುಕ್ಷೇತ್ರದಿಂದ ಮಥುರಕ್ಕೆ ವಾಪಾಸ್ ಆಗುತ್ತಿದ್ದರು. ಶುಕ್ರವಾರ ರಾತ್ರಿ ರೈಲಿನಲ್ಲಿ ಎಮರ್ಜೆನ್ಸಿ ವಿಂಡೋ ಬಳಿ ಮಗಳನ್ನು ಮಲಗಿಸಿದ್ದರು. ಮುಂದಿನ ನಿಲ್ದಾಣದಲ್ಲಿ ಹತ್ತಿಕೊಂಡ ಪ್ರಯಾಣಿಕರು ಗಾಳಿ ಬರಲಿ ಎಂದು ತುರ್ತು ಕಿಟಕಿಯನ್ನು ತೆರೆದಾಗ ಆಕೆ ಜಾರಿ ಹೊರಗೆ ಬಿದ್ದಿದ್ದಳು.
ಮಗಳು ಜಾರಿ ಬಿದ್ದ ಕೂಡಲೇ ಅಪ್ಪನಿಗೆ ಎದೆ ಒಡೆದಂತಾಗಿದೆ. ಕೂಡಲೇ ರೈಲಿನ ಚೈನ್ ಹಿಡಿದು ಎಳೆದಿದ್ದಾರೆ. ಅಳುತ್ತಾ 112ಕ್ಕೆ ಕರೆ ಮಾಡಿ ಪೊಲೀಸರ ಸಹಾಯ ಕೋರಿದ್ದಾರೆ. ರೈಲು 16 ಕಿ.ಮೀ ಓಡುತ್ತಲೇ ಕಿಲೋಮೀಟರ್ ಮುಂದಕ್ಕೆ ಚಲಿಸಿ ನಿಂತಿದೆ. ಕೂಡಲೇ ಓಡೋಡಿ ಬಂದ ಪೊಲೀಸರು, ರೈಲ್ವೇ ಪ್ರೊಟೆಕ್ಷನ್ ಫೋರ್ಸ್ ಜೊತೆ ಸೇರಿ ಕಂದಮ್ಮನನ್ನ ಹುಡುಕಿ ರಕ್ಷಿಸುವ ಕಾರ್ಯಕ್ಕೆ ಮುಂದಾದರು.
ಪೊಲೀಸರು ಮೂರು ಟೀಮ್ಗಳಾಗಿ ಕಂದಮ್ಮನನ್ನು ರಕ್ಷಿಸುವ ಕಾರ್ಯಾಚರಣೆ ಆರಂಭಿಸಿದರು. ಎರಡು ಟೀಮ್ ವಾಹನಗಳಲ್ಲಿ ಹುಡುಕಾಟ ನಡೆಸಿತು. ಮತ್ತೊಂದು ಟೀಮ್ ಟ್ರ್ಯಾಕ್ ಮೇಲೆ ಹುಡುಕಲು ಮುಂದಾಯ್ತು. ಅರವಿಂದ್ ಗಾಡಿ ಹತ್ತದೇ ಮಗಳನ್ನು ಹಳಿಯ ಮೇಲೆ ಹುಡುಕುತ್ತಾ ಒಂದೇ ಸಮನೇ ಓಡಿದ್ದರು. ಪೊಲೀಸರಿಗಿಂತಲೂ ಮುಂಚೆಯೇ ವಿರಾರಿ ಸ್ಟೇಷನ್ ಬಳಿಗೆ ಧಾವಿಸಿದ್ದರು. ಬೆಳಕೇ ಇಲ್ಲದ ನಿರ್ಜನ ಪ್ರದೇಶದ ಪೊದೆಯಲ್ಲಿ ಮಗಳು ಬಿದ್ದಿದ್ದುದು ಆತನಿಗೇ ಕಂಡಿತ್ತು.
ಪೊದೆಯೊಂದರಲ್ಲಿ ಗಾಯಗೊಂಡು ಬಿದ್ದಿದ್ದ ಕಂದಮ್ಮನನ್ನು ಅರವಿಂದ್ ಪತ್ತೆಹಚ್ಚಿ ಬಿಗಿದಪ್ಪಿಕೊಂಡಿದ್ದಾರೆ. ರೈಲಿನಿಂದ ಬಿದ್ದ ಕಾರಣ ಗೌರಿ ಪ್ರಜ್ಞೆ ತಪ್ಪಿತ್ತು. ಅರವಿಂದ್ ಹಿಂದೆಯೇ ಓಡೋಡಿ ಬಂದ ಪೊಲೀಸರು ಕೂಡಲೇ ಮಗುವನ್ನು ಲಲಿತ್ಪುರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಮಗು ಚೇತರಿಸಿಕೊಂಡಿದ್ದಾಳೆ.
Leave a Comment