ರಾಜ್ಯದ 3 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ; ಅಧಿಕೃತ ದಿನಾಂಕ ಪ್ರಕಟಿಸಿದ ಚುನಾವಣಾ ಆಯೋಗ
ನ್ಯೂಸ್ ಆ್ಯರೋ: ಕೇಂದ್ರ ಚುನಾವಣಾ ಆಯೋಗವು ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭಾ ಚುನಾವಣಾ ದಿನಾಂಕವನ್ನು ಪ್ರಕಟಿಸಿದೆ. ಮಹಾರಾಷ್ಟ್ರದಲ್ಲಿ ನವೆಂಬರ್ 20 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಜಾರ್ಖಂಡ್ನಲ್ಲಿ ನವೆಂಬರ್ 13 ಹಾಗೂ ನವೆಂಬರ್ 20ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.
ಅಕ್ಟೋಬರ್ 22ರಂದು ಅಧಿಸೂಚನೆ ಹೊರಬೀಳಲಿದೆ, ನವೆಂಬರ್ 4 ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕವಾಗಿದೆ. ಮತ ಎಣಿಕೆ ನವೆಂಬರ್ 23 ರಂದು ನಡೆಯಲಿದೆ. ಮೊದಲ ಹಂತದಲ್ಲಿ ಜಾರ್ಖಂಡ್ನಲ್ಲಿ ಅಕ್ಟೋಬರ್ 18ರಂದು ಅಧಿಸೂಚನೆ ಹೊರಬೀಳಲಿದೆ, ನಾಮಪತ್ರ ಸಲ್ಲಿಕೆಗೆ ಅಕ್ಟೋಬರ್ 25 ಕೊನೆಯ ದಿನಾಂಕವಾಗಿರುತ್ತದೆ. ನಾಮಪತ್ರ ಹಿಂಪಡೆಯಲು ಅಕ್ಟೋಬರ್ 30 ಕೊನೆಯ ದಿನಾಂಕ, ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ.
ಎರಡನೇ ಹಂತದಲ್ಲಿ ಅಕ್ಟೋಬರ್ 22ಕ್ಕೆ ಅಧಿಸೂಚನೆ ಹೊರಬೀಳಲಿದ್ದು, ನಾಮಪತ್ರ ಸಲ್ಲಿಕೆಗೆ ಅಕ್ಟೋಬರ್ 29 ಕೊನೆಯ ದಿನಾಂಕವಾಗಿರಲಿದೆ, ಅಕ್ಟೋಬರ್ 28ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಅಕ್ಟೋಬರ್ 30ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕವಾಗಿರಲಿದೆ. ನವೆಂಬರ್ 20ರಂದು ಮತದಾನ ನಡೆಯಲಿದ್ದು, ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ.
ಚುನಾವಣಾ ಆಯೋಗವು 48 ವಿಧಾನಸಭಾ ಸ್ಥಾನಗಳು ಮತ್ತು ಎರಡು ಲೋಕಸಭಾ ಸ್ಥಾನಗಳಿಗೆ ಉಪಚುನಾವಣೆಯ ವೇಳಾಪಟ್ಟಿಯನ್ನು ಸಹ ಪ್ರಕಟಿಸಿದೆ. 288 ಸ್ಥಾನಗಳ ಮಹಾರಾಷ್ಟ್ರ ವಿಧಾನಸಭೆಯ ಅವಧಿ ನವೆಂಬರ್ 26 ರಂದು ಕೊನೆಗೊಳ್ಳಲಿದ್ದು, 81 ಸ್ಥಾನಗಳನ್ನು ಹೊಂದಿರುವ ಜಾರ್ಖಂಡ್ ವಿಧಾನಸಭೆಯ ಅವಧಿಯು ಜನವರಿ 5, 2025 ರಂದು ಕೊನೆಗೊಳ್ಳಲಿದೆ.
ಇನ್ನು ಮೇ ತಿಂಗಳಲ್ಲಿ ಮುಕ್ತಾಯಗೊಂಡ ಲೋಕಸಭೆ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಯಾದ ಶಾಸಕರಿಂದ ತೆರವುಗೊಂಡಿರುವ ರಾಜ್ಯ ಮೂರು ವಿಧಾನಸಭಾ ಕ್ಷೇತ್ರಕ್ಕೆ ಚುನಾವಣಾ ಆಯೋಗ ಮತದಾನ ದಿನಾಂಕವನ್ನು ಘೋಷಿಸಿದೆ.
ಅದರಂತೆ ರಾಜ್ಯದ ಶಿಗ್ಗಾಂವಿ, ಸಂಡೂರು ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಯ ದಿನಾಂಕವನ್ನು ಘೋಷಿಸಲಾಗಿದ್ದು, ನವೆಂಬರ್ 13ರಂದು ನಡೆಯಲಿದ್ದು, ನವೆಂಬರ್ 23ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗದ ಆಯುಕ್ತರಾದ ರಾಜೀವ್ ಕುಮಾರ್ ತಿಳಿಸಿದ್ದಾರೆ.
Leave a Comment