ನವರಾತ್ರಿ ಹಬ್ಬದ ಎಂಟನೇ ದಿನ ಮಹಾಗೌರಿ ದೇವಿ ಪೂಜಿಸಿ: ಪೂಜೆಯ ವಿಧಾನ ತಿಳಿಯಿರಿ

Navratri 2024 8th Day
Spread the love

ಹಿಂದೂ ಧರ್ಮದಲ್ಲಿ ನವರಾತ್ರಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ನವರಾತ್ರಿಯಲ್ಲಿ ದುರ್ಗೆಯ 9 ರೂಪಗಳನ್ನು ಪೂಜಿಸಲಾಗುತ್ತದೆ. ನವರಾತ್ರಿಯ ಎಂಟನೇ ದಿನವನ್ನು ಮಾತೆ ಮಹಾಗೌರಿಗೆ ಸಮರ್ಪಿಸಲಾಗಿದೆ. ಮಹಾಗೌರಿಯನ್ನು ಪೂಜಿಸುವುದರಿಂದ ಜೀವನದಲ್ಲಿ ನೆಮ್ಮದಿ ದೊರೆಯುತ್ತದೆ. ಆಕೆಯನ್ನು ವಿಧಿ – ವಿಧಾನಗಳ ಪ್ರಕಾರ ಪೂಜಿಸುವುದರಿಂದ ಆರ್ಥಿಕ ಮತ್ತು ಮಾನಸಿಕ ಸಮಸ್ಯೆಗಳೂ ದೂರವಾಗುತ್ತವೆ ಎನ್ನಲಾಗುತ್ತದೆ.

ಮಹಾಗೌರಿ ಸ್ವರೂಪ:

ದುರ್ಗಾ ದೇವಿಯು ಬ್ರಹ್ಮಾಂಡದ ಕಲ್ಯಾಣಕ್ಕಾಗಿ ನಾನಾ ಅವತಾರಗಳನ್ನು ತೆಗೆದುಕೊಂಡಿದ್ದಾಳೆ. ನವರಾತ್ರಿಯ 8ನೇ ದಿನದಂದು ಮಹಾಗೌರಿಯನ್ನು ಪೂಜಿಸಲಾಗುತ್ತದೆ. ತಾಯಿ ಮಹಾಗೌರಿ ನೋಡಲು ತುಂಬಾನೇ ಸುಂದರವಾಗಿ ಕಾಣಿಸುತ್ತಾಳೆ. ಆಕೆಯ ಮೈಬಣ್ಣ ಮಾತ್ರ ಬಿಳಿಯಾಗಿರುವುದು ಮಾತ್ರವಲ್ಲ. ಆಕೆ ಧರಿಸುವ ಬಟ್ಟೆ ಮತ್ತು ಆಭರಣಗಳು ಬಿಳಿ ಬಣ್ಣದಲ್ಲಿರುತ್ತದೆ. ಮಹಾಗೌರಿಯು ನಾಲ್ಕು ಕೈಗಳನ್ನು ಹೊಂದಿದ್ದು, ಗೂಳಿಯ ಮೇಲೆ ಕುಳಿತು ಸಂಚಾರವನ್ನು ಮಾಡುತ್ತಾಳೆ. ತಾಯಿಯು ತನ್ನ ಬಲಗಡೆಯಲ್ಲಿನ ಮೇಲಿನ ಕೈಯಲ್ಲಿ ಅಭಯ ಮುದ್ರೆಯನ್ನು ಹಿಡಿದುಕೊಂಡಿರುತ್ತಾಳೆ ಮತ್ತು ಕೆಳಗಿನ ಕೈಯಲ್ಲಿ ತ್ರಿಶೂಲವನ್ನು ಹಿಡಿದುಕೊಂಡಿರುತ್ತಾಳೆ. ಎಡಭಾಗದ ಮೇಲಿನ ಕೈಯಲ್ಲಿ ಡಮರುವನ್ನು ಮತ್ತು ಕೆಳಗಿನ ಎಡಗೈಯಲ್ಲಿ ವರ ಮುದ್ರೆಯನ್ನು ಹಿಡಿದುಕೊಂಡಿರುತ್ತಾಳೆ.

ನವರಾತ್ರಿ 8ನೇ ದಿನ ಶುಭ ಮುಹೂರ್ತ:

ಶಾರದೀಯ ನವರಾತ್ರಿಯ ಅಷ್ಟಮಿ ತಿಥಿ ಅಕ್ಟೋಬರ್ 10 ರಂದು ಮಧ್ಯಾಹ್ನ 12:31 ಕ್ಕೆ ಪ್ರಾರಂಭವಾಗುತ್ತದೆ. ಇದು ಅಕ್ಟೋಬರ್ 11 ರಂದು 12:05 ಕ್ಕೆ ಕೊನೆಗೊಳ್ಳುತ್ತದೆ. ಇದಾದ ಬಳಿಕ ನವಮಿ ತಿಥಿ ಆರಂಭವಾಗಲಿದೆ. ಉದಯತಿಥಿ ನಿಮಿತ್ತ ನ.11ರಂದು ಅಷ್ಟಮಿ ಹಾಗೂ ನವಮಿಯ ಉಪವಾಸ ನಡೆಯಲಿದೆ.

ಮಹಾಗೌರಿ ಪೂಜೆ ವಿಧಾನ:

ನವರಾತ್ರಿ ಹಬ್ಬದ 8ನೇ ದಿನದಂದು ನೀವು ದುರ್ಗಾ ದೇವಿಯನ್ನು ಪೂಜೆ ಮಾಡುವುದಕ್ಕಾಗಿ ಮೊದಲು ಸ್ನಾನ ಇತ್ಯಾದಿಗಳನ್ನು ಮಾಡಿ ಶುದ್ಧರಾಗಿ ಶುಭ್ರವಾದ ಬಟ್ಟೆಯನ್ನು ಧರಿಸಿ. ಪೂಜೆಯ ಮೊದಲು, ಮನೆಯನ್ನು ಸ್ವಚ್ಛಗೊಳಿಸಿ ಮತ್ತು ಮಹಾಗೌರಿಯ ವಿಗ್ರಹವನ್ನು ಪೀಠದ ಮೇಲೆ ಪ್ರತಿಷ್ಠಾಪಿಸಿ. ದೇವರ ಕೋಣೆಯನ್ನು ಹೂವು ಮತ್ತು ದೀಪಗಳಿಂದ ಅಲಂಕರಿಸಿ. ತಾಯಿಗೆ ಧೂಪ, ದೀಪ, ಹೂವುಗಳು, ಹಣ್ಣುಗಳು, ಸಿಹಿತಿಂಡಿಗಳು, ಶ್ರೀಗಂಧ, ಕುಂಕುಮ, ಅಕ್ಷತೆ ಇತ್ಯಾದಿಗಳನ್ನು ಅರ್ಪಿಸಿ. ಮಹಾಗೌರಿಯನ್ನು ಮೆಚ್ಚಿಸಲು ವಿಶೇಷ ಮಂತ್ರಗಳನ್ನು ಪಠಿಸಿ.ಪೂಜೆಯ ಕೊನೆಯಲ್ಲಿ, ಆರತಿಯನ್ನು ಮಾಡಿ ಮತ್ತು ವ್ರತ ಕಥೆಯನ್ನು ಓದಿ.ಪೂಜೆ ಮುಗಿದ ನಂತರ ಬಡವರಿಗೆ ಮತ್ತು ನಿರ್ಗತಿಕರಿಗೆ ಪ್ರಸಾದ ಮತ್ತು ದಾನವನ್ನು ನೀಡಿ.

ಮಹಾಗೌರಿಯ ಈ ಮಂತ್ರಗಳನ್ನು ಪಠಿಸಿ:

  • ಯಾ ದೇವಿ ಸರ್ವಭೂತೇಷು ಮಹಾಗೌರಿ ರೂಪೇಣ ಸಂಸ್ಥಿತಾ|
    ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ||
  • ಓಂ ದೇವಿ ಮಹಾಗೌರಿಯಾಯೈ ನಮಃ||
  • ಶ್ವೇತೇ ವೃಷೇ ಸಮರೂಢಾ ಶ್ವೇತಾಂಬರಧರಾ ಶುಚಿಃ|
    ಮಹಾಗೌರೀ ಶುಭಂ ದಧ್ಯಾನ್ಮಹಾದೇವಪ್ರಮೋದದಾ||

Leave a Comment

Leave a Reply

Your email address will not be published. Required fields are marked *

error: Content is protected !!