ಹೆತ್ತವರಿಲ್ಲದೆ ಅಜ್ಜಿ ಜೊತೆ ರತನ್ ಬಾಲ್ಯ: ಟಿನೇಜ್​ ಲವ್​ ಸ್ಟೋರಿ, ಬೆಳೆದು ಬಂದ ಹಾದಿಯೇ ರೋಚಕ

Tracing Ratan Tata's legendary life
Spread the love

ನ್ಯೂಸ್ ಆ್ಯರೋ: ಕೈಗಾರಿಕೋದ್ಯಮದ ರತ್ನ ಅಂತಾನೇ ಕರೆಸಿಕೊಂಡಿದ್ದ ರತನ್ ಟಾಟಾ ಅಗಲಿಕೆ ಇಡೀ ದೇಶದ ಜನ್ರನ್ನ ಶೋಕ ಸಾಗರದಲ್ಲಿ ಮುಳುಗುವಂತೆ ಮಾಡಿದೆ. ಬಡವರ ಸೇವೆಯಲ್ಲೇ ಜೀವನ ಕಳೆದ ಮಹಾನ್ ಮೇಧಾವಿ. ಪ್ರತಿ ಭಾರತೀಯನ ಹೃದಯದಲ್ಲಿ ಸ್ಥಾನ ಪಡೆದಿದ್ದ ಕೈಗಾರಿಕೋದ್ಯಮದ ಟ್ರೂ ಲೀಡರ್ ಈ ರತನ್ ಟಾಟಾ.

ರತನ್ ಟಾಟಾ ಅವರು ಮುಂಬೈನಲ್ಲಿ 1937ರ ಡಿಸೆಂಬರ್ 28 ರಂದು ಜನಿಸಿದರು. ಪೂರ್ತಿ ಹೆಸರು ರತನ್ ನವಲ್ ಟಾಟಾ. ಅವರಿಗೆ 10 ವರ್ಷ ವಯಸ್ಸಾಗಿದ್ದ ಸಂದರ್ಭದಲ್ಲಿ ನವಲ್ ಮತ್ತು ಸೂನಿ ಟಾಟಾ ದಂಪತಿ ವಿವಾಹ ವಿಚ್ಛೇದನ ಪಡೆದ ಬಳಿಕ ರತನ್ ಟಾಟಾ ಅವರು ಅಜ್ಜಿಯ ಆರೈಕೆಯಲ್ಲಿ ಬೆಳೆದರು. ಟಾಟಾ ಗ್ರೂಪ್‌ನ ಸಂಸ್ಥಾಪಕ ಜೆಮ್‌ಶೆಟ್ಜಿ ಟಾಟಾ ಅವರ ಸೊಸೆ ರತನ್ ಅವರ ತಂದೆ ನವಲ್‌ ಅವರನ್ನು ಅವರ 13ನೇ ವಯಸ್ಸಿನಲ್ಲಿ ದತ್ತು ಪಡೆದ ಕಾರಣ ಟಾಟಾ ಕುಟುಂಬ ಸೇರಿದ್ದರು. ರತನ್ ಟಾಟಾ ಅವಿವಾಹಿತರು.

ರತನ್ ಟಾಟಾ ಅವರ ಶೈಕ್ಷಣಿಕ ಹಿನ್ನೆಲೆ:

ರತನ್ ಟಾಟಾ ಅವರು ಮುಂಬಯಿಯಲ್ಲಿ ಬಾಲ್ಯದ ಶಿಕ್ಷಣ ಪೂರೈಸಿದ್ದು ನಂತರ, 1962ರಲ್ಲಿ ಅಮೆರಿಕದ ಕಾರ್ನೆಲ್‌ ಯೂನಿವರ್ಸಿಟಿಯಲ್ಲಿ ಆರ್ಕಿಟೆಕ್ಚರ್‌ ಇಂಜಿನಿಯರಿಂಗ್‌ ಪದವಿ ಪಡೆದರು. ಇದಕ್ಕೂ ಮೊದಲು ತಂದೆಯ ಆಸೆಯಂತೆ ಮೆಕಾನಿಕಲ್ ಇಂಜಿನಿಯಿಂಗ್‌ ಪದವಿ ಪಡೆದಿದ್ದರು. ಭಾರತದಲ್ಲಷ್ಟೇ ವ್ಯಾಪಾರ ವ್ಯವಹಾರ ಮಾಡುತ್ತಿದ್ದ ಟಾಟಾ ಗ್ರೂಪ್‌ ರತನ್ ಟಾಟಾ ನಾಯಕತ್ವದಲ್ಲಿ ಜಾಗತಿಕವಾಗಿ ತನ್ನ ವಹಿವಾಟು ವಿಸ್ತರಿಸಿತು. 100ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯಾಚರಣೆ ಶುರುಮಾಡಿತು. 2024 ಮಾರ್ಚ್‌ ಅಂತ್ಯಕ್ಕೆ ಕಂಪನಿಯ ಆದಾಯ 165 ಶತಕೋಟಿ ಡಾಲರ್ ಆಗಿತ್ತು.

ರತನ್ ಟಾಟಾ ಟಿನೇಜ್​ ಲವ್​ ಸ್ಟೋರಿ:

ರತನ್ ಟಾಟಾ ಮದುವೆಯಾಗಿಲ್ಲ. ಆದ್ರೆ, ಯವ್ವನದಲ್ಲಿ ಅವರು ಪ್ರೀತಿಯ ಬಲೆಗೆ ಬಿದ್ದಿದ್ದು ನಿಜ. ಕೆಲ ವರ್ಷಗಳ ಹಿಂದಷ್ಟೇ ರತನ್ ಟಾಟಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಲವ್ ಸ್ಟೋರಿಯಲ್ಲಿ ಹಂಚಿ ಕೊಂಡಿದ್ರು. ಕಾಲೇಜಿನ ನಂತರ, ನಾನು ಲಾಸ್ ಏಂಜಲೀಸ್‌ನಲ್ಲಿನ ಆರ್ಕಿಟೆಕ್ಚರ್ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಬಂದೆ. ಅಲ್ಲಿ ನಾನು 2 ವರ್ಷಗಳ ಕಾಲ ಕೆಲಸ ಮಾಡಿದೆ. ಸ್ವಂತ ಕಾರು ಖರೀದಿಸಿದೆ, ನನ್ನ ಕೆಲಸವನ್ನು ಇಷ್ಟಪಟ್ಟೆ. ಲಾಸ್ ಏಂಜಲೀಸ್‌ನಲ್ಲಿ ನಾನು ಒಬ್ಬಾಕೆಯನ್ನು ಪ್ರೀತಿಸುತ್ತಿದ್ದೆ ಮತ್ತು ನಮ್ಮಿಬ್ಬರ ಮದುವೆಯಾಗುವುದು ಖಚಿತವಾಗಿತ್ತು. ಅದೇ ಸಮಯದಲ್ಲಿ ನನ್ನ ಅಜ್ಜಿಯ ಆರೋಗ್ಯ ಸರಿ ಇರ್ಲಿಲ್ಲ. ಹೀಗಾಗಿ ಅವರನ್ನು ನೋಡಲೆಂದು ನಾನು ತಾಯ್ನಾಡಿಗೆ ಹಿಂದಿರುಗಲು ನಿರ್ಧರಿಸಿದ್ದೆ. ನಾನು ಮದುವೆಯಾಗ ಬಯಸಿದ್ದ ಹುಡುಗಿಯೂ ನನ್ನೊಂದಿಗೆ ಭಾರತಕ್ಕೆ ಬರುತ್ತಾಳೆಂದು ಭಾವಿಸಿದ್ದೆ. ಆದ್ರೆ, ಆಕೆ ಭಾರತಕ್ಕೆ ಬರ್ಲಿಲ್ಲ. 1962ರ ಇಂಡೋ-ಚೀನಾ ಯುದ್ಧದ ಕಾರಣ ಪೋಷಕರು ಆಕೆಯನ್ನು ಎಲ್ಲಿಗೂ ಹೋಗಲು ಬಿಡ್ಲಿಲ್ಲ. ಇದಾದ ಬಳಿಕ ನಮ್ಮ ಸಂಬಂಧ ದೂರವಾಯ್ತು. ಇದಾದ ಮೇಲೆ ನನ್ನ ಬದುಕಿನಲ್ಲಿ ಬಹಳ ಮಂದಿ ಮಹಿಳೆಯರು ಬಂದು ಹೋದರು. ಆದರೆ ಯಾರೂ ತನ್ನ ಕೈಹಿಡಿಯಲಿಲ್ಲ ಎಂದು ಬರೆದುಕೊಂಡಿದ್ದರು.

ಭಾರತದ ಕಂಪನಿಯೊಂದು ಜಾಗತಿಕ ಮಟ್ಟಕ್ಕೆ ಬೆಳೆದು ಒಂದು ಬ್ರ್ಯಾಂಡ್ ಆಗಿ ಗುರುತಿಸಿಕೊಂಡ ರೀತಿ ಹೆಮ್ಮೆ ಮೂಡಿಸುವಂಥದ್ದು. ಇದಕ್ಕೆ ಮೆರುಗು ನೀಡಿದ್ದು ಬ್ರಿಟನ್‌ನ ಮುಂಚೂಣಿ ಬ್ರ್ಯಾಂಡ್‌ಗಳ ಖರೀದಿ. ವಿಶೇಷವಾಗಿ ಬ್ರಿಟಿಷ್‌ ಉಕ್ಕು ತಯಾರಕ ಕಂಪನಿ ಕೋರಸ್‌ (2007) ಮತ್ತು ಐಷಾರಾಮಿ ಕಾರು ತಯಾರಕ ಕಂಪನಿ ಜಾಗ್ವಾರ್‌ ಲಾಂಡ್‌ ರೋವರ್ (2008). ಟಾಟಾ ಗ್ರೂಪ್ ಆರಂಭಿಸಿದ್ದ ವಿಮಾನ ಯಾನ ಕಂಪನಿಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಕರಣಗೊಳಿಸಿತ್ತು. ಅದಾಗಿ 90 ವರ್ಷದ ಬಳಿಕ ಅದೇ ವಿಮಾನ ಕಂಪನಿ ಏರ್ ಇಂಡಿಯಾವನ್ನು ಟಾಟಾ ಗ್ರೂಪ್‌ ತನ್ನ ತೆಕ್ಕೆ ತೆಗೆದುಕೊಂಡದ್ದು (2021) ಈಗ ಇತಿಹಾಸ.

ರತನ್ ಟಾಟಾ ನಾಯಕತ್ವದಲ್ಲಿ ಟಾಟಾದ ಟೆಕ್ ಗ್ರೂಪ್‌ ಭಾರತದ ಮೊದಲ ಸೂಪರ್ ಆಪ್‌ ಟಾಟಾ ನ್ಯೂ (Tata Neu) ವನ್ನು ಪರಿಚಯಿಸಿತು. ಇದು ಅಂತಾರಾಷ್ಟ್ರೀಯ ಕಂಪನಿಯಾಗಿ ಬೆಳೆದಿದ್ದು ಸಾಫ್ಟ್‌ವೇರ್‌ನಿಂದ ಹಿಡಿದು ಸ್ಪೋರ್ಟ್ಸ್‌ ಕಾರುಗಳ ತನಕ ವಿವಿಧ ವಹಿವಾಟುಗಳಿಗೆ ವಿಸ್ತರಿಸಿದೆ.

ಟಾಟಾ ಗ್ರೂಪ್‌ಗೆ ಹಿನ್ನಡೆಯಾಗಿದ್ದು 2008ರಲ್ಲಿ. ಮುಂಬಯಿಯ ಹೋಟೆಲ್ ತಾಜ್ ಮೇಲೆ ಉಗ್ರರು ದಾಳಿ ನಡೆಸಿದಾಗ ಭಾರಿ ನಷ್ಟ ಉಂಟಾಗಿತ್ತು. ಈ ಹೋಟೆಲ್‌ ಟಾಟಾ ಗ್ರೂಪ್‌ನ ಫ್ಲ್ಯಾಗ್‌ಶಿಪ್ ಹೋಟೆಲ್ ಆಗಿ ಗಮನಸೆಳೆದಿದ್ದ ಸಮಯ ಅದಾಗಿತ್ತು.

ಇನ್ನು ರತನ್‌ ಟಾಟಾ ಅವಿವಾಹಿತರು. ನೇರ ಉತ್ತರಾಧಿಕಾರಿ ಇಲ್ಲ. ಟಾಟಾ ಗ್ರೂಪ್‌ನಲ್ಲಿ ಶೇಕಡ 66 ಪಾಲು ಟಾಟಾ ಸನ್ಸ್‌ನದ್ದು. ಈಗ ರತನ್ ಟಾಟಾ ಅವರ ನಿಧನದ ಬಳಿಕ ನಾಯಕತ್ವವನ್ನು ಟಾಟಾ ಅವರ ಸ್ಥಾಪಿಸಿದ ಟ್ರಸ್ಟ್‌ಗಳು ನಿರ್ವಹಿಸಬೇಕಾಗಿದೆ. ರತನ್ ಟಾಟಾರ ಉದ್ಯಮ ಸಾಧನೆ, ಸೇವಾ ಕಾರ್ಯಕ್ಕೆ ಮೆಚ್ಚಿ ಕೇಂದ್ರ ಸರ್ಕಾರವು ಪದ್ಮಭೂಷಣ, ಪದ್ಮ ವಿಭೂಷಣ ನೀಡಿ ಗೌರವಿಸಿದೆ.

ಆದರೀಗ ಭಾರತ ಕಂಡ ಶ್ರೇಷ್ಠ ಕೈಗಾರಿಕೋದ್ಯಮಿ, ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ ಅನಾರೋಗ್ಯದಿಂದ ಮುಂಬೈನ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದವರು ತಮ್ಮ 86ನೇ ವಯಸ್ಸಿಗೆ ವಿಧಿವಶರಾಗಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!