ಬಿಜೆಪಿ ಅಭ್ಯರ್ಥಿ ಮುಷ್ತಾಕ್ ಅಹ್ಮದ್ ಬುಖಾರಿ ನಿಧನ
ಶ್ರೀನಗರ:ಜಮ್ಮು ಮತ್ತು ಕಾಶ್ಮೀರದ ಸುರನ್‌ಕೋಟೆ ಬಿಜೆಪಿ ಅಭ್ಯರ್ಥಿ ಮತ್ತು ಮಾಜಿ ಸಚಿವ ಸೈಯದ್ ಮುಷ್ತಾಕ್ ಅಹ್ಮದ್ ಬುಖಾರಿ (75) ಅವರು ಬುಧವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಸೈಯದ್ ಮುಷ್ತಾಕ್ ಅಹ್ಮದ್ ಬುಖಾರಿ ಅವರು ಇಂದು ಪೂಂಚ್ ಜಿಲ್ಲೆಯ ಪಾಮ್ರೋಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಬುಖಾರಿ ಅವರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.
ಬುಖಾರಿ ಅವರು ಕೆಲವು ಸಮಯದಿಂದ ಅಸ್ವಸ್ಥರಾಗಿದ್ದರು ಮತ್ತು ಬೆಳಿಗ್ಗೆ 7 ಗಂಟೆಗೆ ಹೃದಯಾಘಾತವಾಗಿದೆ. ಅವರ ನಿಧನದಿಂದ ಪಕ್ಷ ಮತ್ತು ಸಮುದಾಯಕ್ಕೆ ಅಪಾರ ನಷ್ಟವಾಗಿದೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ. ಸುರನಕೋಟೆಯಿಂದ ಎರಡು ಬಾರಿ ಶಾಸಕರಾಗಿದ್ದ ಬುಖಾರಿ ಅವರನ್ನು ಪರಿಶಿಷ್ಟ ಪಂಗಡದ ಅಭ್ಯರ್ಥಿಗೆ ಮೀಸಲಾಗಿರುವ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಕಣಕ್ಕಿಳಿಸಲಾಗಿತ್ತು.
ಒಮ್ಮೆ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರ ಆಪ್ತರಾಗಿದ್ದ ಬುಖಾರಿ ಪಹಾರಿ ಸಮುದಾಯಕ್ಕೆ ಎಸ್‌ಟಿ ಸ್ಥಾನಮಾನ ನೀಡುವಲ್ಲಿನ ವಿಳಂಬದ ಬಗ್ಗೆ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು. ನ್ಯಾಷನಲ್ ಕಾನ್ಫರೆನ್ಸ್‌ನೊಂದಿಗೆ ನಾಲ್ಕು ದಶಕಗಳ ಒಡನಾಟದ ನಂತರ, ಅವರು 2022 ರಲ್ಲಿ ಪಕ್ಷವನ್ನು ತೊರೆದರು ಮತ್ತು ಫೆಬ್ರವರಿ 2024 ರಲ್ಲಿ ಬಿಜೆಪಿ ಸೇರಿದ್ದರು.
Leave a Comment