Mangalore : ಐವಾನ್ ಡಿಸೋಜಾ ಸಂವಿಧಾನ ವಿರೋಧಿ ಹೇಳಿಕೆ ಆರೋಪ – ದೂರು ಸ್ವೀಕರಿಸದ ಬರ್ಕೆ ಪೋಲಿಸ್ ಠಾಣೆಯೆದುರು ಬಿಜೆಪಿ ಧರಣಿ
ನ್ಯೂಸ್ ಆ್ಯರೋ : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರು ತನಿಖೆ ನಡೆಸಲು ಅನುಮತಿ ನೀಡಿರುವುದನ್ನು ವಿರೋಧಿಸಿ ನಡೆದ ಕಾಂಗ್ರೇಸ್ ಪ್ರತಿಭಟನೆಯಲ್ಲಿ ಎಂಎಲ್ಸಿ ಐವನ್ ಡಿಸೋಜಾ ರಾಜ್ಯಪಾಲರಿಗೆ ಬೆದರಿಕೆ ಹಾಕಿದ್ದು, ದೇಶದ ಸಮಗ್ರತೆಗೆ ಧಕ್ಕೆಯಾಗುವಂತೆ ಮತ್ತು ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಜಿಲ್ಲಾ ಮೋರ್ಚಾದ ಜಿಲ್ಲಾ ಅಧ್ಯಕ್ಷ ನಂದನ್ ಮಲ್ಯ ಬರ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಂಗಳೂರಿನ ಮಹಾನಗರ ಪಾಲಿಕೆಯ ಮುಂಭಾಗದಲ್ಲಿ ಸೋಮವಾರ ನಡೆದ ಪ್ರತಿಭಟನೆಯ ವೇಳೆ ಐವನ್ ಡಿ ಸೋಜ ಅವರು ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನಿಸಿ, ಕಾಂಗ್ರೆಸ್ ಕಾರ್ಯಕರ್ತರಿಗೆ ದಂಗೆ ಏಳುವಂತೆ ಮಾಡಿದ್ದಾರೆ.
ಸಾರ್ವಜನಿಕ ಸೊತ್ತಿಗೂ ಹಾನಿಯನ್ನುಂಟು ಮಾಡಲು ಕಾರಣರಾಗಿದ್ದರೆ. ರಾಜ್ಯಪಾಲರನ್ನು ರಾಷ್ಟ್ರಪತಿ ಹಿಂದಕ್ಕೆ ಕರೆಸಬೇಕು. ಬಾಂಗ್ಲಾದೇಶದ ಅಧ್ಯಕ್ಷರು ರಾತ್ರೋರಾತ್ರಿ ಓಡಿ ಹೋದಂತೆ ಇಲ್ಲಿಯೂ ರಾಜ್ಯಪಾಲರು ರಾತ್ರೋರಾತ್ರಿ ಓಡಿ ಹೋಗುವಂತೆ ಮಾಡುತ್ತೇವೆ ಎಂದು ಐವನ್ ಡಿಸೋಜ ಹೇಳಿಕೆ ನೀಡಿರುವುದಾಗಿ ಆರೋಪಿಸಲಾಗಿದೆ.
ದೇಶ ಮತ್ತು ಸಂವಿಧಾನ ವಿರುದ್ಧ ಹೇಳಿಕೆ ನೀಡಿರುವ , ಐವನ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಕಲಂ 152ರ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸೂಕ್ತ ಕಲಂನಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ನಂದನ್ ಮಲ್ಯ ಆಗ್ರಹಿಸಿದ್ದಾರೆ.
ಇನ್ನು ನಿನ್ನೆ ರಾತ್ರಿ ಐವನ್ ಡಿಸೋಜಾ ಪ್ರಚೋದನಾತ್ಮಕ ಹೇಳಿಕೆ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಮಂಗಳೂರಿನ ಬರ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆದರೆ ಪೊಲೀಸರು ದೂರು ಸ್ವೀಕರಿಸಿಲ್ಲ ಎಂದು ಪೊಲೀಸರ ನಡೆ ವಿರುದ್ಧ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಪೊಲೀಸ್ ಠಾಣೆ ಎದುರು ಕುಳಿತು ಪೊಲೀಸರಿಗೆ ಧಿಕ್ಕಾರವನ್ನು ಕಾರ್ಯಕರ್ತರು ಕೂಗಿದ್ದರು.
Leave a Comment