ಕುಂಭ ಮೇಳದಲ್ಲಿ ಕಾಲ್ತುಳಿತ; ಮೃತರ ಕುಟುಂಬಕ್ಕೆ ತಲಾ 25 ಲಕ್ಷ ರೂ ಪರಿಹಾರ
![Maha Kumbh Stampede](https://news-arrow.com/wp-content/uploads/cwv-webp-images/2025/01/maha-kumbh-1.png.webp)
ನ್ಯೂಸ್ ಆ್ಯರೋ: ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಕಳೆದ ಎರಡು ವಾರಗಳಿಂದ ಮಹಾಕುಂಭ ಮೇಳ ನಡೆಯುತ್ತಿದ್ದು, ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಬುಧವಾರ ಭಕ್ತರ ಸಂಖ್ಯೆ ದಿಢೀರ್ ಹೆಚ್ಚಾದ ಪರಿಣಾಮ ಕಾಲ್ತುಳಿತ ಸಂಭವಿಸಿದೆ.
ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 25 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಘೋಷಿಸಿದ್ದಾರೆ.
“ಈ ಘಟನೆ ನಮಗೂ ಒಂದು ಪಾಠ” ಎಂದ ಯೋಗಿ ಆದಿತ್ಯನಾಥ್, ಘಟನೆ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ. ನ್ಯಾಯಮೂರ್ತಿ ಹರ್ಷ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ಘಟನೆಯ ತನಿಖೆಯನ್ನು ಮೂವರು ಸದಸ್ಯರ ಸಮಿತಿ ನಡೆಸಲಿದೆ ಎಂದು ಹೇಳಿದ್ದಾರೆ.
“ನಿನ್ನೆ ಸಂಜೆ 7 ಗಂಟೆಯಿಂದ ಮೌನಿ ಅಮವಾಸ್ಯೆಯಂದು ಪವಿತ್ರ ಸ್ನಾನ ಮಾಡಲು ಪ್ರಯಾಗ್ರಾಜ್ನಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಜಮಾಯಿಸಿದ್ದರು. ಅಖಾರ ಮಾರ್ಗದಲ್ಲಿ ಈ ದುರದೃಷ್ಟಕರ ಘಟನೆ ನಡೆದಿದ್ದು, ಇದರಲ್ಲಿ 90 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಮತ್ತು 30 ಜನ ಸಾವನ್ನಪ್ಪಿದ್ದಾರೆ. ಪ್ರಯಾಗ್ರಾಜ್ನಲ್ಲಿ 36 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಖಾರ ಮಾರ್ಗದ ಬ್ಯಾರಿಕೇಡ್ಗಳನ್ನು ಜನಸಮೂಹ ಮುರಿದಾಗ ಕಾಲ್ತುಳಿತ ಸಂಭವಿಸಿದೆ” ಎಂದು ಸಿಎಂ ತಿಳಿಸಿದರು.
ಮಹಾಕುಂಭ ಮೇಳದಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದ ಕಾಲ್ತುಳಿತದಲ್ಲಿ ಒಟ್ಟು 30 ಭಕ್ತರು ಮೃತಪಟ್ಟಿದ್ದಾರೆ ಮತ್ತು 90 ಭಕ್ತರು ಗಾಯಗೊಂಡಿದ್ದಾರೆ ಎಂದು ಉತ್ತರ ಪ್ರದೇಶ ಪೊಲೀಸ್ ಮಹಾ ನಿರ್ದೇಶಕ ವೈಭವ್ ಕೃಷ್ಣ ಅವರು ಹೇಳಿದ್ದಾರೆ.
Leave a Comment