ಈ ಕೆಟ್ಟ ಗುಣಗಳಿರುವ ವ್ಯಕ್ತಿಯ ಆಯಸ್ಸು ಕಡಿಮೆಯಾಗುತ್ತಂತೆ; ಆ ಕೆಟ್ಟ ಗುಣಗಳಾವುವು ವಿದುರ ನ ನೀತಿಯಲ್ಲಿ ತಿಳಿದುಕೊಳ್ಳಿ
ನ್ಯೂಸ್ ಆ್ಯರೋ: ಸಾವು ಎನ್ನುವುದು ಖಚಿತ. ಹೀಗಾಗಿ ಈ ಭೂಮಿಯಲ್ಲಿ ಜನಿಸಿದ ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲ ಒಂದು ದಿನ ಇಹಲೋಕವನ್ನು ತ್ಯಜಿಸಲೇ ಬೇಕು. ಆದರೆ ವ್ಯಕ್ತಿಯಲ್ಲಿನ ಈ ಕೆಟ್ಟ ಗುಣಗಳು ಆಯಸ್ಸನ್ನು ಕಡಿಮೆ ಮಾಡಿ, ಸಾವಿಗೆ ಹತ್ತಿರವಾಗುವಂತೆ ಮಾಡುತ್ತದೆ ಎಂದಿದ್ದಾನೆ ವಿದುರ. ಯಾವೊಬ್ಬ ವ್ಯಕ್ತಿಯ ಈ ರೀತಿ ನಡೆದುಕೊಳ್ಳುತ್ತಾನೋ ಆತನ ಆಯಸ್ಸು ಕಡಿಮೆ ಆಗೋದು ಖಂಡಿತ ಎಂದು ಸ್ಪಷ್ಟವಾಗಿ ತಿಳಿಸಿದ್ದಾನೆ. ಹೀಗಾಗಿ ದೀರ್ಘ ಆಯಸ್ಸನ್ನು ಪಡೆಯಲು ಈ ಗುಣಗಳನ್ನು ಬಿಟ್ಟು ಬಿಡುವುದು ಸೂಕ್ತ.
ಅತಿಯಾದ ಕೋಪ :
ಕೋಪವು ಎಲ್ಲರಿಗೂ ಕೂಡ ಬರುತ್ತದೆ. ಆದರೆ ಸಿಟ್ಟನ್ನು ನಿಯಂತ್ರಿಸುವುದು ತಿಳಿದಿರಬೇಕು. ಕೋಪದ ಕೈಗೆ ಬುದ್ಧಿ ಕೊಟ್ಟು ತಪ್ಪು ಮಾಡುವುದೇ ಹೆಚ್ಚು. ಸಿಟ್ಟಿನಲ್ಲಿದ್ದಾಗ ಸರಿ ತಪ್ಪುಗಳನ್ನು ವಿಮರ್ಶಿಸಲು ಸಾಧ್ಯವಿಲ್ಲ. ಇದರಿಂದ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಅತಿಯಾಗಿ ಕೋಪಿಸಿಕೊಳ್ಳುವವರು ನರಕಕ್ಕೆ ಹೋಗುತ್ತಾರೆ, ಆಯಸ್ಸು ಕೂಡ ಕಡಿಮೆಯಾಗುತ್ತದೆ. ಹೀಗಾಗಿ ಸಿಟ್ಟನ್ನು ಕಡಿಮೆ ಮಾಡಿಕೊಂಡು ತಾಳ್ಮೆಯಿಂದ ಇರುವುದನ್ನು ಕಲಿಯಿರಿ ಎಂದು ತಿಳಿಸಿದ್ದಾನೆ ವಿದುರ.
ಅಹಂ ಭಾವ :
ತಾನು ತನ್ನಿಂದಲೇ ಎನ್ನುವ ಭಾವನೆಯೂ ವ್ಯಕ್ತಿಯ ವಿನಾಶಕ್ಕೆ ಕಾರಣವಾಗುತ್ತದೆ. ತಾನು ಹೇಳಿದ್ದೆ ಸರಿ ಎನ್ನುವ ಅಹಂಕಾರವಿರುವ ವ್ಯಕ್ತಿಯು ಗುರು ಹಿರಿಯರ ಸಲಹೆಗಳಿಗೆ ಕಿವಿಗೊಡುವುದಿಲ್ಲ. ತಮಗಿಂತ ವಯಸ್ಸಿನಲ್ಲಿ ಹಿರಿಯರನ್ನು ಅವಮಾನಿಸುತ್ತಾರೆ. ತಾನೇ ದೊಡ್ಡವನು ಎನ್ನುವ ಅಹಂಕಾರದಿಂದ ಮೆರೆದರೆ ಆ ವ್ಯಕ್ತಿಯ ಆಯಸ್ಸು ಕಡಿಮೆಯಾಗುತ್ತದೆ ಎಂದು ವಿದುರನು ತನ್ನ ನೀತಿಯಲ್ಲಿ ತಿಳಿಸಿದ್ದಾನೆ.
ಸ್ವಾರ್ಥ :
ಈ ಜಗತ್ತಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗಳು ಒಂದೊಂದು ರೀತಿಯಲ್ಲಿ ಸ್ವಾರ್ಥಿಗಳೇ ಆಗಿರುತ್ತಾರೆ. ಆದರೆ ಸ್ವಾರ್ಥದ ಮನೋಭಾವವು ಬೇರೆಯವರನ್ನು ಉಪಯೋಗಿಸಿಕೊಳ್ಳುವಂತೆ ಮಾಡುತ್ತದೆ. ಹೀಗಾಗಿ ವಿದುರನು ಹೇಳುವಂತೆ ಸ್ವಾರ್ಥಿಯಾದವನಿಗೆ ಒಳ್ಳೆಯದು ಮತ್ತು ಕೆಟ್ಟದ್ದನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ತನಗಾಗಿ ತನ್ನ ಜೊತೆಗಿದ್ದ ವ್ಯಕ್ತಿಗಳನ್ನು ಹೇಗೆ ಬೇಕಾದರೂ ಬಳಸಿಕೊಳ್ಳುತ್ತಾನೆ. ಈ ಗುಣದಿಂದ ವ್ಯಕ್ತಿಯ ಆಯಸ್ಸು ಕಡಿಮೆಯಾಗುತ್ತದೆಯಂತೆ.
ಮಾತಿನ ಮೇಲೆ ಹಿಡಿತವಿರಲಿ :
ಕೆಲವು ಜನರು ಮಾತಿನಿಂದಲೇ ಮನೆ ಕಟ್ಟುತ್ತಾರೆ. ಕೆಲವರದ್ದು ಬಾಯಿಬಿಟ್ಟರೆ ಸಾಕು ಮಾತು ಬಿಟ್ಟರೆ ಬೇರೇನೂ ಇರುವುದಿಲ್ಲ. ಅಂತಹ ವ್ಯಕ್ತಿಗಳನ್ನು ನೀವು ನಿಮ್ಮ ಸುತ್ತಮುತ್ತಲಿನಲ್ಲಿ ಗಮನಿಸಿದ್ದಿರಬಹುದು. ಹೆಚ್ಚು ಮಾತನಾಡುವ ಜನರು ಸುಳ್ಳನ್ನು ಹೇಳುತ್ತಾರೆ. ತಮ್ಮ ಮಾತಿನಿಂದಲೇ ಎದುಗಿರುವ ವ್ಯಕ್ತಿಯ ಮನಸ್ಸನ್ನು ನೋಯಿಸುತ್ತಾರೆ. ಹೀಗಾಗಿ ಮಾತು ಇತಮಿತವಾಗಿರಬೇಕು. ಅಗತ್ಯವಿರುವಷ್ಟು ಮಾತ್ರ ಮಾತನಾಡಬೇಕು. ಅಗತ್ಯ ಮೀರಿ ಮಾತನಾಡಿದರೆ ವ್ಯಕ್ತಿಯ ವಯಸ್ಸು ಕಡಿಮೆಯಾಗುತ್ತದೆ ಎನ್ನುತ್ತಾನೆ ವಿದುರ.
ತ್ಯಾಗದ ಭಾವನೆಯಿರಬೇಕು :
ಈಗಿನ ಕಾಲದಲ್ಲಿ ತ್ಯಾಗದ ಗುಣವಿರುವ ಜನರನ್ನು ನೋಡುವುದಕ್ಕೆ ಸಿಗುವುದು ಕಡಿಮೆ. ಆದರೆ ವಿದುರನು, ತನ್ನ ಬಗ್ಗೆ ಯೋಚಿಸುವ ಬದಲು ಇನ್ನೊಬ್ಬರ ಬಗ್ಗೆ ಯೋಚಿಸಬೇಕು. ಏನು ಇಲ್ಲದವರನ್ನು ನೋಡಿ ತನ್ನ ಬಳಿ ಇಷ್ಟದರೂ ಇದೆ ಎಂದು ತೃಪ್ತಿ ಪಟ್ಟುಕೊಳ್ಳಬೇಕು. ಕೈಲಾದರೆ ಸಹಾಯ ಅಥವಾ ತ್ಯಾಗ ಮಾಡುವ ಗುಣವಿರಬೇಕು. ತ್ಯಾಗ ಹಾಗೂ ಸಮರ್ಪಣೆ ಮನೋಭಾವವಿಲ್ಲದೇ ಹೋದಲ್ಲಿ ವ್ಯಕ್ತಿಯ ಆಯಸ್ಸು ಕಡಿಮೆಯಾಗಿ, ಸಾವಿಗೆ ಹತ್ತಿರವಾಗುತ್ತಾನೆ.
Leave a Comment