ವಿದೇಶದಲ್ಲಿ ಭಾರತೀಯರಿಗಿಲ್ಲ ಭದ್ರತೆ; ಕೆನಡಾದಲ್ಲಿ ಮೂವರು ಭಾರತೀಯ ವಿದ್ಯಾರ್ಥಿಗಳ ಕೊಲೆ
ನ್ಯೂಸ್ ಆ್ಯರೋ: ಕೆನಡಾದಲ್ಲಿ ಕಳೆದ ವಾರ ಮೂವರು ಭಾರತೀಯ ವಿದ್ಯಾರ್ಥಿಗಳ ಕೊಲೆಯಾಗಿದೆ. ಭಾರತೀಯ ಹೈಕಮೀಷನ್ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆ ವಿಚಾರವನ್ನು ಕೆನಡಾದ ಆಡಳಿತಕ್ಕೆ ತಂದಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ಹೇಳಿದೆ.
ಕೆನಾಡದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆ, ಭದ್ರತೆ ಹಾಗೂ ಹಿತ ಕಾಪಾಡುವುದು ನಮಗೆ ಅತ್ಯಂತ ಪ್ರಮುಖವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ಕಳೆದ ವಾರ ದುರಾದೃಷ್ಟಕರ ಘಟನೆಗಳಾಗಿವೆ. ಮೂವರು ಭಾರತೀಯ ವಿದ್ಯಾರ್ಥಿಗಳ ಕೊಲೆಯಾಗಿದೆ. ಕೆನಡಾದಲ್ಲಿರುವ ನಮ್ಮ ಭಾರತೀಯರನ್ನು ಆಘಾತ ಮೂಡಿಸಿರುವ ಈ ಭಯಾನಕ ಘಟನೆಗಳಿಂದ ದು:ಖಿತರಾಗಿದ್ದೇವೆ. ಮೃತರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇವೆ. ಈ ವಿಚಾರದಲ್ಲಿ ನಮ್ಮ ಹೈಕಮೀಶನ್ ಹಾಗೂ ಟೊರೊಂಟೊದಲ್ಲಿನ ರಾಯಭಾರಿ ಕಚೇರಿ ಸಾಧ್ಯವಾದಷ್ಟು ಎಲ್ಲಾ ರೀತಿಯ ನೆರವು ನೀಡುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಭಾರತೀಯರ ವಿದ್ಯಾರ್ಥಿಗಳ ಕೊಲೆ ಘಟನೆ ಕುರಿತ ತನಿಖೆಗೆ ಭಾರತೀಯ ಹೈಕಮೀಷನ್ ಸ್ಥಳೀಯ ಆಡಳಿತೊಂದಿಗೆ ಸಂಪರ್ಕದಲ್ಲಿದೆ. ಭಾರತೀಯ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ನಮ್ಮ ಹೈಕಮೀಷನ್ ಮತ್ತು ರಾಯಭಾರಿ ಅಧಿಕಾರಿಗಳು ಕೆನಡಾದ ಆಡಳಿತೊಂದಿಗೆ ನಿರಂತರವಾಗಿ ಚರ್ಚಿಸುತ್ತಿದ್ದಾರೆ. ಕೆನಡಾದಲ್ಲಿ ಭಾರತೀಯ ಮೇಲೆ ಹೆಚ್ಚಾಗುತ್ತಿರುವ ಕ್ರಿಮಿನಲ್ ದೌರ್ಜನ್ಯ, ದ್ವೇಷಕೃತ್ಯಗಳಿಂದಾಗಿ ಅಲ್ಲಿರುವ ಭಾರತೀಯ ಪ್ರಜೆಗಳು ಮತ್ತು ವಿದ್ಯಾರ್ಥಿಗಳು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಸಲಹೆ ನೀಡಿದ್ದೇವೆ ಎಂದು ಜೈಸ್ವಾಲ್ ಹೇಳಿದರು.
ಅಧಿಕೃತ ಮಾಹಿತಿ ಪ್ರಕಾರ ಕೆನಡಾದಲ್ಲಿ ಸುಮಾರು 400,000 ಭಾರತೀಯ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
Leave a Comment