ರಾಜಸ್ಥಾನದಲ್ಲಿ ಭೀಕರ ಬಸ್ ಅಪಘಾತ; 12 ಜನ ಸಾವು, 40 ಮಂದಿಗೆ ಗಾಯ
ನ್ಯೂಸ್ ಆ್ಯರೋ: ರಾಜಸ್ಥಾನದ ಸಿಕರ್ ಜಿಲ್ಲೆಯಲ್ಲಿ ಇಂದು ಬಸ್ ಮೋರಿಗೆ ಡಿಕ್ಕಿ ಹೊಡೆದ ಪರಿಣಾಮ 12 ಜನರು ಸಾವನ್ನಪ್ಪಿದ್ದಾರೆ ಮತ್ತು 40ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಲಾಸರ್‌ನಿಂದ ಬರುತ್ತಿದ್ದ ಬಸ್ ಸಿಕರ್ ಜಿಲ್ಲೆಯ ಲಕ್ಷ್ಮಣಗಢ್ ತಲುಪಿದ ನಂತರ ಮೋರಿಗೆ ಡಿಕ್ಕಿ ಹೊಡೆದಿದೆ.
ಈ ದುರಂತದಲ್ಲಿ ಹಲವು ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಲಕ್ಷ್ಮಣಗಢದ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಕ್ಷ್ಮಣಗಢದಲ್ಲಿ ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಸಾಲಾಸರ್ ಕಡೆಯಿಂದ ಬರುತ್ತಿದ್ದ ಖಾಸಗಿ ಬಸ್ ನಿಯಂತ್ರಣ ತಪ್ಪಿ ಮೋರಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಲ್ಲಿ 12 ಜನರು ಸಾವನ್ನಪ್ಪಿದ್ದಾರೆ ಮತ್ತು ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭುವನ್ ಭೂಷಣ್ ಯಾದವ್ ಹೇಳಿದ್ದಾರೆ. ಗಾಯಾಳುಗಳನ್ನು ಲಕ್ಷ್ಮಣಗಢ ಮತ್ತು ಸಿಕರ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಲಕ್ಷ್ಮಣಗಢದಲ್ಲಿ 7 ಸಾವುಗಳು ಸಂಭವಿಸಿವೆ ಎಂದು ಎಸ್‌ಕೆ ಆಸ್ಪತ್ರೆಯ ಅಧೀಕ್ಷಕ ಮಹೇಂದ್ರ ಖಿಚಾಡ್ ತಿಳಿಸಿದ್ದಾರೆ. “ಒಟ್ಟು 37 ರೋಗಿಗಳು ಎಸ್‌ಕೆ ಆಸ್ಪತ್ರೆಗೆ ಬಂದರು. ಅವರಲ್ಲಿ ಇಬ್ಬರು ಮೊದಲೇ ಸಾವನ್ನಪ್ಪಿದ್ದರು ಮತ್ತು ಮೂವರು ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದರು. ಹೆಚ್ಚಿನ ಚಿಕಿತ್ಸೆಗಾಗಿ 7 ರೋಗಿಗಳನ್ನು ಜೈಪುರಕ್ಕೆ ಕಳುಹಿಸಲಾಗಿದೆ” ಎಂದಿದ್ದಾರೆ. ಇಲ್ಲಿಯವರೆಗೆ 12 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ಅವರು ತಿಳಿಸಿದ್ದಾರೆ.
Leave a Comment